ಬೆಂಗಳೂರು: ರಾಜ್ಯ ಬಿಜೆಪಿ ಸರ್ಕಾರ ಕಳೆದ ಮೂರು ವರ್ಷಗಳಿಂದ ಕಲ್ಯಾಣ ಕರ್ನಾಟಕದ ಮೇಲೆ ಒಂದರ ಮೇಲೆ ಒಂದು ಪ್ರಹಾರ ನಡೆಸುತ್ತಿದೆ. ಕಲ್ಯಾಣ ಕರ್ನಾಟಕದ ಜನರನ್ನು ಎರಡನೇ ದರ್ಜೆ ನಾಗರೀಕರಂತೆ ನಡೆಸಿಕೊಂಡು ಬಂದಿದ್ದಾರೆ. ಈ ವಿಚಾರವನ್ನು ಹಲವು ಬಾರಿ ಸದನದಲ್ಲಿ ಪ್ರಸ್ತಾಪ ಮಾಡಿದ್ದರೂ, ಮುಖ್ಯಮಂತ್ರಿ ಹಾಗೂ ಸಚಿವರ ಗಮನಕ್ಕೆ ತಂದಿದ್ದರೂ ಈ ಭಾಗಕ್ಕೆ 371 ಜೆ ವಿಶೇಷ ಸ್ಥಾನಮಾನತಂದು ಉದ್ಯೋಗ, ಶಿಕ್ಷಣ ಹಾಗೂ ವಿಶೇಷ ಅನುದಾನದಲ್ಲಿ ಈ ಸರ್ಕಾರ ಕಡೆಗಣಿಸಿದೆ. ಆ ಮೂಲಕ ಘನಘೋರ ಅನ್ಯಾಯ ಮಾಡುತ್ತಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ಆರೋಪಿಸಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಲ್ಯಾಣ ಕರ್ನಾಟಕದಲ್ಲಿ ಸಾವಿರಾರು ಜನ ನಿರುದ್ಯೋಗ ಯುವಕರಿದ್ದಾರೆ. ಈ ಭಾಗದಲ್ಲಿ ಸಾವಿರಾರು ಹುದ್ದೆಗಳು ಖಾಲಿ ಇದ್ದರೂ ಅವುಗಳನ್ನು ಭರ್ತಿ ಮಾಡಲಿಲ್ಲ. ರಾಜ್ಯದಲ್ಲಿ ಒಟ್ಟು 2.52 ಲಕ್ಷ ಹುದ್ದೆಗಳು ಖಾಲಿ ಇದ್ದು, ಅದರಲ್ಲಿ ಕಲ್ಯಾಣ ಕರ್ನಾಟಕ ಸ್ಥಳೀಯ ವೃಂದ ನೇರ ನೇಮಕಾತಿಗೆ ಸುಮಾರು 30 ಸಾವಿರ ಹುದ್ದೆಗಳು ಖಾಲಿ ಇವೆ. ಕಲ್ಯಾಣ ಕರ್ನಾಟಕದ ಹೊರಗೆ ಇರುವ 2 ಲಕ್ಷ ಖಾಲಿ ಹುದ್ದೆಗಳಲ್ಲಿ ಅದರಲ್ಲಿ ಶೇ.8ರಷ್ಟು ಸಿಗುತ್ತದೆ. ಒಟ್ಟು 50 ಸಾವಿರ ಹುದ್ದೆಗಳು ಖಾಲಿ ಇವೆ ಎಂದರು.
ಈ ಹುದ್ದೆಗಳು ಖಾಲಿ ಇರುವ ಕಾರಣ ಆ ಭಾಗದಲ್ಲಿ ಯಾವುದೇ ಅಭಿವೃದ್ಧಿ ಆಗುತ್ತಿಲ್ಲ. ಈಗ ಸರ್ಕಾರವು ಉದ್ಯೋಗ ಭರ್ತಿ ಮಾಡುವಾಗ ಮೆರಿಟ್ ಆಧಾರದ ಮೇಲೆ ಆಯ್ಕೆ ಪಟ್ಟಿ ಸಿದ್ಧಪಡಿಸಿಕೊಳ್ಳುವಾಗ ಮೊದಲು ಮಿಕ್ಕುಳಿದ ವೃಂದಗಳ ಆಯ್ಕೆ ಪಟ್ಟಿ ಸಿದ್ಧಪಡಿಸಿ, ನಂತರ ಸ್ಥಳೀಯ ವೃಂದದ ಆಯ್ಕೆ ಪಟ್ಟಿ ಸಿದ್ಧ ಮಾಡಬೇಕು ಎಂದು ಸಿದ್ದರಾಮಯ್ಯ ಅವರ ಸರ್ಕಾರದಲ್ಲಿ ಸುತ್ತೋಲೆ ಹೊರಡಿಸಲಾಗಿತ್ತು. ಆದರೆ ಈ ಜನವಿರೋಧಿ, ಕಲ್ಯಾಣ ಕರ್ನಾಟಕ ವಿರೋಧಿ ಬಿಜೆಪಿ ಸರ್ಕಾರ ಬಂದ ನಂತರ 6-6-2020ರಲ್ಲಿ ಒಂದು ಸುತ್ತೋಲೆ ಹೊರಡಿಸಿ ಅದರಲ್ಲಿ ಕಲ್ಯಾಣ ಕರ್ನಾಟಕಕ್ಕೆ ಸಿಗುವ ಮೀಸಲಾತಿಯನ್ನು ತಲೆಕೆಳಗಾಗಿಸಿ ಅನ್ಯಾಯ ಮಾಡುವ ರೀತಿಯಲ್ಲಿ ತಿದ್ದುಪಡಿ ತಂದು ಮೊದಲು ಸ್ಥಳೀಯ ವೃಂದದ ಮೆರಿಟ್ ಆಧಾರದ ಆಯ್ಕೆ ಪಟ್ಟಿ ಮಾಡಿ ನಂತರ ಮಿಕ್ಕುಳಿದ ವೃಂದದ ಆಯ್ಕೆಪಟ್ಟಿಯನ್ನು ಸಿದ್ಧಪಡಿಸಲಾಗಿದೆ ಎಂದರು.
ಈ ಆದೇಶ ಬಂದ ನಂತರ ನಾವು ಸಭೆ ಮಾಡಿ ಕಾಂಗ್ರೆಸ್ ಪಕ್ಷದ ವತಿಯಿಂದ ನಿಯೋಗವನ್ನು ತೆಗೆದುಕೊಂಡು ಹೋಗಿ, 01-02-2022ರಂದು ದೂರು ಕೊಟ್ಟೆವು. ಅಂದರೆ ಈ ಪಿಎಸ್ ಐ ಹಗರಣ ಬೆಳಕಿಗೆ ಬಂದಿದ್ದು, ನಾವು ಕೊಟ್ಟ ದೂರಿನ ಮೇಲೆ. ನಾವು ದೂರು ಕೊಟ್ಟ ನಂತರ ಈ ಆಯ್ಕೆ ಪ್ರಕ್ರಿಯೆಯನ್ನು ತಡೆಹಿಡಿಯಲಾಯಿತು. ನಂತರ ಇಷ್ಟು ಬೃಹತ್ ಪ್ರಮಾಣದ ಹಗರಣ ನಡೆದಿದೆ ಎಂದು ದೂರಿದರು.
ಈ ಸರ್ಕಾರದಲ್ಲಿ ನೇಮಕಾತಿ ಆಗುತ್ತಿಲ್ಲ. ಕೇವಲ, ಲೂಟಿ, ಭ್ರಷ್ಟಾಚಾರ ನಡೆಯುತ್ತಿದೆ. ಕೆಪಿಎಶ್ ಸಿ ವತಿಯಿಂದ 2019-20ರಲ್ಲಿ 1000 ಹುದ್ದೆಗಳಿಗೆ ಸಂದರ್ಶನ ಕರೆಯಲಾಗಿದ್ದು, 2022ರಲ್ಲಿ ತಾತ್ಕಾಲಿಕ ಪಟ್ಟಿ ಘೋ,ಣೆ ಮಾಡಿದ್ದು, ಅಂತಿಮ ಪಟ್ಟಿ ಪ್ರಕಟಿಸುವ ಮುನ್ನ ನಾವು ಅಭ್ಯರ್ಥಿಗಳು ಕೊಟ್ಟ ದೂರನ್ನು ಕೊಟ್ಟಿದ್ದೇವೆ. 2016ರ ಸುತ್ತೋಲೆಯಂತೆ ಆಯ್ಕೆ ಪಟ್ಟಿ ಪ್ರಕಟಿಸಬೇಕು ಎಂಬ ನಮ್ಮ ಬೇಡಿಕೆ ನಂತರ ಇದನ್ನು ಸರಿಪಡಿಸುತ್ತೇವೆ ಎಂದು ಹೇಳಲಾಗಿತ್ತು. ಆದರೆ ಇಂದು ಶ್ರೀರಾಮುಲು ಅವರ ನೇತೃತ್ವದಲ್ಲಿ ಸಚಿವ ಸಂಪುಟ ಉಪ ಸಮಿತಿ ಸಭೆ ನಡೆದಿದ್ದು, ನಮಗೂ ಕರೆದಿದ್ದರು. ನಾವು ಮನವಿ ಮಾಡಿ 4 ತಿಂಗಳಾದರೂ ಇನ್ನು ಸರ್ಕಾರ ಮೀನಾಮೇಷ ಎಣಿಸುತ್ತಿದೆ. ದುರುದ್ದೇಶದಿಂದ ವಿಳಂಬ ಮಾಡುತ್ತಿದ್ದು, ಕಲ್ಯಾಣ ಕರ್ನಾಟಕದ ವಿದ್ಯಾರ್ಥಿಗಳಿಗೆ ಅನ್ಯಾಯ ಮಾಡಬೇಕು, ಅವರನ್ನು ಹುದ್ದೆಗಳಿಂದ ವಂಚಿತ ಮಾಡಬೇಕು ಎಂಬ ಹುನ್ನಾರ ಈ ಸರ್ಕಾರದ್ದಾಗಿದೆ. 2016ರ ಸುತ್ತೋಲೆ ಪ್ರಕಾರ ನೇಮಕಾತಿ ಮಾಡಿದ್ದರೆ ಇನ್ನು 135 ಎಫ್ ಡಿಎ ಹುದ್ದೆಗಳು ಕಲ್ಯಾಣ ಕರ್ನಾಟಕಕ್ಕೆ ಮೀಸಲಿವೆ ಎಂದವರು ಹೇಳಿದರು.
ಸರ್ಕಾರ ಅಧಿಸೂಚನೆ ಹೊರಡಿಸಿದ್ದು 2016ರ ಪ್ರಕಾರ. ನಂತರ ನೇಮಕಾತಿ ಪ್ರಕ್ರಿಯೆ ಪ್ರಾರಂಭವಾಗುವಾಗ ಈ ಭಾಗದ ಜನರಿಗೆ ಅನ್ಯಾಯ ಮಾಡುವ ನಿಟ್ಟಿನಲ್ಲಿ ಈ ತೀರ್ಮಾನ ಮಾಡಿದ್ದಾರೆ. ನಾವು ಅದನ್ನು ಖಂಡಿಸಿದ್ದು, ಇದನ್ನು ಸರಿಪಡಿಸುವುದಾಗಿ ಮಾತು ಕೊಟ್ಟಿದ್ದರೂ ಇದುವರೆಗೆ ಕಾರ್ಯಗತ ಮಾಡಿಲ್ಲ. ಹೀಗಾಗಿ ಸರ್ಕಾರ ಒಂದು ವಾರಗಳ ಒಳಗಾಗಿ ಸರ್ಕಾರ ತನ್ನ ಸುತ್ತೋಲೆಯನ್ನು ಹಿಂಪಡೆದು 2016ರ ಸುತ್ತೋಲೆ ಪ್ರಕಾರ ನೇಮಕಾತಿ ಆದೇಶ ಹೊರಡಿಸದಿದ್ದರೆ ಕಲ್ಯಾಣ ಕರ್ನಾಟಕ ಭಾಗದಲ್ಲಿ ಉಗ್ರ ಹೋರಾಟ ಮಾಡಲಾಗುವುದು ಎಂದವರು ತಿಳಿಸಿದರು.
ಒಂದೆಡೆ ಬ್ರಹ್ಮಾಂಡ ಭ್ರಷ್ಟಾಚಾರ, ದೇವದುರ್ಗದಲ್ಲಿ ಕಾಲುವೆ ಆಧುನೀಕರಣ ಯೋಜನೆಯಲ್ಲಿ ಶಾಸಕರು ಹಾಗೂ ಮುಖ್ಯ ಇಂಡಿನಿಯರ್ ನಡುವಣ ಆಡಿಯೋ ಸಂಭಾಷಣೆ ಇಡೀ ರಾಜ್ಯ ಕೇಳಿದ್ದು, ಶಾಸಕರೇ ಇಲ್ಲಿ 200 ಕೋಟಿ ನಕಲಿ ಬಿಲ್ ಸೃಷ್ಟಿಸಲಾಗಿದೆ ಎಂದು ಆರೋಪ ಮಾಡಿದ್ದಾರೆ. ನೇಮಕಾತಿ ಹಗರಣ ಇಡೀ ದೇಶದಾದ್ಯಂತ ಸದ್ದು ಮಾಡಿದೆ. ವರ್ಗಾವಣೆ ದಂಧೆ, ಶಿಕ್ಷಣ ಇಲಾಖೆಯಲ್ಲಿ ಸಹಾಯಕ ಪ್ರಾಧ್ಯಾಪಕರ ನೇಮಕದಿಂದ ಬೇರೆ ಬೇರೆ ಇಲಾಖೆಗಳಲ್ಲಿನ ನೇಮಕ, ಬೇರೆ ಬೇರೆ ಇಲಾಖೆಗಳಲ್ಲಿನ ಯೋಜನೆಗಳಲ್ಲಿ 40% ಕಮಿಷನ್ ಕುರಿತ ಎಲ್ಲ ಬೆಳವಣಿಗೆ ನೋಡಿದ್ದೇವೆ. ಇವರ ಭ್ರಷ್ಟಾಚಾರಕ್ಕೆ ಗುತ್ತಿಗೆದಾರ ಆತ್ಮಹತ್ಯೆ ಮಾಡಿಕೊಂಡಿದ್ದು, ನಿರುದ್ಯೋಗದಿಂದ ಯುವಕರು ಭ್ರಮನಿರಸನಗೊಂಡಿದ್ದು ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ. ಕಿಂಚಿತ್ತಾದರೂ ನೈತಿಕೆತೆ ಇದ್ದರೆ, ಭ್ರಷ್ಟಾಚಾರ ತಡೆಯಲು ಇಚ್ಛಾಶಕ್ತಿ ಇದ್ದರೆ ಬಿಬಿಎಂಪಿ ಸೇರಿದಂತೆ ಎಲ್ಲ ಹಗರಣಗಳನ್ನು ಹೈಕೋರ್ಟ್ ನ್ಯಾಯಾಧೀಶರ ತನಿಖಾ ತಂಡದಿಂದ ಪಾರದರ್ಶಕವಾಗಿ ತನಿಖೆ ಮಾಡಿಸಬೇಕು ಎಂದು ನಾವು ಮತ್ತೊಮ್ಮೆ ಸರ್ಕಾರಕ್ಕೆ ಒತ್ತಾಯ ಮಾಡುತ್ತೇವೆ ಎಂದರು.