ದಶಕಗಳ ಹಿಂದೆ ‘ಬದ್ಕೆರೆ ಬುಡ್ಲೆ’, ‘ಬಂಗಾರ್ ಪಟ್ಲೆರ್’ ಮುಂತಾದ ಸಾಮಾಜಿಕ ಜೀವನ ಆಧಾರಿತ ಸಿನಿಮಾಗಳು ತುಳು ಸಿನಿ ಲೋಕದಲ್ಲಿ ಹೆಗ್ಗುರುತಾಗಿದೆಯಾದರೂ ಇತ್ತೀಚಿನ ವರ್ಷಗಳಲ್ಲಿ ಸಾಂಸಾರಿಕ ಕಥಾನಕಗಳಿಗಿಂತ ಹಾಸ್ಯ ಸನ್ನಿವೇಶಗಳನ್ನಾಧರಿಸಿದ ಸಿನಿಮಾಗಳಿಗೇ ಜನರ ಒಲವಿರುವುದು. ಹಾಗಾಗಿ ಹಾಸ್ಯ ರಂಜನೆಯತ್ತ ಸಿನಿ ಕರ್ತೃಗಳು ಒತ್ತು ನೀಡುತ್ತಿದ್ದಾರೆ.
ಹೀಗಿರುವಾಗ ಪಾತಕ ಲೋಕದ ಕಥೆಯನ್ನು ಕೋಸ್ಟಲ್‌ವುಡ್‌ನ ಬೆಳ್ಳಿತರಯಲ್ಲಿ ಪ್ರತಿಬಿಂಬಿಸುವಂತೆ ಮಾಡಲು ಸಾಧ್ಯವೇ? ಇಂಥದ್ದೊಂದು ಸಾಹಸಕ್ಕಿಳಿದಿದ್ದಾರೆ ಭರವಸೆಯ ನಿರ್ದೇಶಕ ಇಸ್ಮಾಯಿಲ್ ಮೂಡುಶೆಡ್ಡೆ.
ಈಗಾಗಲೇ ‘ಬಣ್ಣ ಬಣ್ಣದ ಬದುಕು’, ‘ಪಮ್ಮಣ್ಣೆ ದಿ ಗ್ರೇಟ್’ ಸೇರಿದಂತೆ ಕನ್ನಡ ಹಾಗೂ ತುಳು ಸಿನಿಮಾ ಕ್ಷೇತ್ರಗಳಿಗೆ ಹಿಟ್ ಚಿತ್ರಗಳನ್ನು ನಿರ್ಮಿಸಿಕೊಟ್ಟಿರುವ ಮೂಡುಶೆಡ್ಡೆ ಇಸ್ಮಾಯಿಲ್, ಈ ಬಾರಿ ಪಾತಕ ಜಗತ್ತನ್ನು ವಿಭಿನ್ನ ರೀತಿಯಲ್ಲಿ ಅನಾವರಣ ಮಾಡುವ ಸಾಹಸಕ್ಕಿಳಿದಿದ್ದಾರೆ. ಕೋಸ್ಟಲ್‌ವುಡ್‌ನಲ್ಲಿ ರೌಡಿಯೊಬ್ಬನ ಕರಾಳ ಬದುಕನ್ನು ಹಾಸ್ಯರೂಪದಲ್ಲಿ ಥಳುಕು ಹಾಕಿಸುವ ಪ್ರಯತ್ನದಲ್ಲಿದ್ದಾರೆ.
ಈಗಾಗಲೇ ಬಹುನಿರೀಕ್ಷೆಯ ‘ಭೋಜರಾಜ್ MBBS’ ಚಿತ್ರ ನಿರ್ಮಾಣ ಬಹುತೇಕ ಕ್ಲೈಮ್ಯಾಕ್ಸ್ ಘಟ್ಟದಲ್ಲಿದ್ದು, ಅದಕ್ಕೆ ಅಂತಿಮ ಸ್ಪರ್ಷ ಸಿಗುತ್ತಿರುವಾಗಲೇ ಮತ್ತೊಂದು ರೌಡಿ ಬದುಕಿನ ಕರಾಳತೆ ಹಾಗೂ ಹಾಸ್ಯರಂಜನೆಯ ಜುಗಲ್‌ಬಂಧಿಯ ಸಿನಿಮಾ ಮಾಡಲು ಇಸ್ಮಾಯಿಲ್ ಮುಂದಾಗಿದ್ದಾರೆ. ಇದಕ್ಕೆ ಈ ಬಾರಿಯ ಲಾಕ್‌ಡೌನ್ ವರದಾನವಾಯಿತಂತೆ. ಅಂದ ಹಾಗೆ ಇವರು ಮಾಡಲಿರುವುದು ಕರಾವಳಿಯ ರೌಡಿಯಾಗಿದ್ದ ಕೋರಿ ಮಂಜನ ಜೀವನಗಾಥೆಯನ್ನು. ಇದು ವಿಭಿನ್ನ ಶೀರ್ಷಿಕೆಯ ಸಿನಿಮಾ.
ಯಾರು ಈ ಕೋರಿ ಮಂಜೆ?
1990ರ ಆಸುಪಾಸಿನಲ್ಲಿ ಕರಾವಳಿಯ ಪಾತಕ ಜಗತ್ತಿನಲ್ಲಿ ತಾನೂ ಒಬ್ಬ ಡಾನ್ ಆಗಬೇಕೆಂಬ ಮಹದಾಸೆಯಲ್ಲಿದ್ದ ಮಂಜನ ಏಳು ಬೀಳುಗಳನ್ನು ಕಥೆಯಾಗಿ ಪೋಣಿಸಿ ಸುಂದರ ಸಿನಿಮಾಕ್ಕೆ ಪ್ಲಾನ್ ನಡೆದಿದೆ. ನಿರ್ದೇಶಕ ಇಸ್ಮಾಯಿಲ್ ಮೂಡುಶೆಡ್ಡೆಯವರು ತಮ್ಮ ಹುಟ್ಟು ಹಬ್ವದಂದು ಈ ಸಂಬಂಧ ಹರಿಯಬಿಟ್ಟಿರುವ ಪೋಸ್ಟರ್ ಕುತೂಹಲದ ಕೇಂದ್ರಬಿಂದುವಾಗಿದೆ.
Posted by Abu Safwan on Tuesday, 14 July 2020
‘ಕೋರಿ ಮಂಜೆ’ ಚಿತ್ರದ ಅಫೀಶಿಯಲ್ ಪೋಸ್ಟರ್ ಇದಾಗಿದೆಯಾದರೂ ಅದರ ಪರಿಪೂರ್ಣ ಗುಟ್ಟನ್ನು ಅವರು ಬಿಟ್ಟುಕೊಟ್ಟಿಲ್ಲ. ಅಕ್ಟೋಬರ್ ಅಥವಾ ನವೆಂಬರ್‌ನಲ್ಲಿ ಈ ಚಿತ್ರಕ್ಕೆ ಮುಹೂರ್ತ ನೆರವೇರಿಸುವ ಲೆಕ್ಕಾಚಾರ ಮೂಡುಶೆಡ್ಡೆ ಇಸ್ಮಾಯಿಲ್‌ರದ್ದು.
ಈ ಕುರಿತಂತೆ ಇಸ್ಮಾಯಿಲ್ ಅವರಿಂದ ಹೆಚ್ಚಿನ ಮಾಹಿತಿಯನ್ನು ಸುದ್ದಿಗಾರರು ಕೇಳಿದಾಗ ಮತ್ತೊಬ್ಬ ಖ್ಯಾತ ಹಾಸ್ಯ ನಟ ಮುಖ್ಯ ಪಾತ್ರದಲ್ಲಿ ನಟಿಸಲಿದ್ದಾರೆ. ಅಷ್ಟೇ ಅಲ್ಲ, ತುಳು ಸಿನಿಮಾ ಇತಿಹಾಸದಲ್ಲಿ ಇದು ವಿಶಿಷ್ಟ ಪ್ರಯೋಗವಾಗಲಿದೆ ಎಂದು ಹೇಳಿದ್ದಾರೆ. ಆ ವರೆಗೂ ತುಳು ಭಾಷಿಗರ ನಿರೀಕ್ಷೆಯ ‘ಭೋಜರಾಜ್ MBBS’ ಚಿತ್ರಕ್ಕೆ ಅಂತಿಮ ಸ್ಪರ್ಷ ನೀಡಬೇಕಿದೆ ಎಂದಿದ್ದಾರೆ. ಕುಡ್ಲಾ ಸಿನಿಮಾಸ್ ಬ್ಯಾನರ್’ನಡಿ ಈ ಸಿನಿಮಾ ಸೆಟ್ಟೇರಲಿದೆಯಂತೆ.