ಬೆಂಗಳೂರು: ರಾಜ್ಯದಲ್ಲಿ ಕೆಐಎಡಿಬಿ ಭೂಹಗರಣ ವಿವಾದದ ಬಿರುಗಾಳಿ ಎಬ್ಬಿಸಿದ್ದು, ಸಂಯುಕ್ತ ಕಿಸಾನ್ ಮೋರ್ಚಾ ನೇತೃತ್ವದಲ್ಲಿ ದೇಶದ ವಿವಿಧ ರೈತ ಸಂಘಟನೆಗಳು ಹೋರಾಟದ ಅಖಾಡಕ್ಕೆ ಧುಮಿಕಿವೆ. ಆದರೆ ವಿರೋಧ ಪಕ್ಷವಾಗಿರುವ ಬಿಜೆಪಿ ನಾಯಕರು ಈ ಹಗರಣ ಬಗ್ಗೆ ಮೌನ ವಹಿಸಿರುವುದು ಪಕ್ಷದ ಕಾರ್ಯಕರ್ತರ ಆಕ್ರೋಶಕ್ಕೆ ಕಾರಣವಾಗಿದೆ.
ಬಿಜೆಪಿ ನಾಯಕರಿಗೆ ಮೋದಿ ಬೇಕಾಗಿಲ್ಲ. ಮೋದಿಯವರಿಗೆ ಈ ಹಿಂದೆ ಆಗಿರುವ ಅಪಮಾನ ಬಗ್ಗೆ ಕರ್ನಾಟಕ ರಾಜ್ಯ ಬಿಜೆಪಿಯವರಿಗೆ ಕ್ಯಾರೇ ಇಲ್ಲ..? KIADB ಹಗರಣ ವಿಚಾರದಲ್ಲಿ ರಾಜ್ಯ BJP ನಾಯಕರ ಮೌನವೇಕೆ? ಎಂದು ಕಾರ್ಯಕರ್ತರು ತಮ್ಮ ಪಕ್ಷದ ನಾಯಕರ ವಿರುದ್ಧವೇ ಆಕ್ರೋಶ ಹೊರಹಾಕುತ್ತಿದ್ದಾರೆ.
ಸಿದ್ದರಾಮಯ್ಯ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದಲೂ ದೇವನಹಳ್ಳಿ ಸುತ್ತಮುತ್ತಲ ರೈತರು ನ್ಯಾಯಕ್ಕಾಗಿ ಹೋರಾಟ ನಡೆಸುತ್ತಿದ್ದಾರೆ. KIADB ಭೂಸ್ವಾಧೀನಾಧಿಕಾರಿಯಾಗಿರುವ ‘ಹಿರಿಯ ಕೆ.ಎ.ಎಸ್.ಅಧಿಕಾರಿ ಬಾಳಪ್ಪ ಹಂದಿಗುಂದ’ ವಿರುದ್ಧ ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ ಸಹಿತ ಕೇಂದ್ರ ಸರ್ಕಾರಕ್ಕೆ ‘ಸಿಟಿಜನ್ ರೈಟ್ಸ್ ಫೌಂಡೇಷನ್’ ವತಿಯಿಂದ ದೂರು ಸಲ್ಲಿಕೆಯಾಗಿತ್ತು. ಜರಿ ನಿರ್ದೇಶನಾಲಯಕ್ಕೂ ದೂರು ಸಲ್ಲಿಕೆಯಾಗಿದೆ. ಸಿಎಂ ಸಿದ್ದರಾಮಯ್ಯ ಹಾಗೂ ಕೈಗಾರಿಕಾ ಸಚಿವ MB ಪಾಟೀಲ್ ವಿರುದ್ದವೂ ಎಂದು ಆರೋಪಗಳು ಕೇಳಿಬಂದಿವೆ. ಆದರೂ, ಈ ವಿಚಾರದಲ್ಲಿ ರಾಜ್ಯ ಬಿಜೆಪಿ ನಾಯಕರು ಮೌನ ಯಾಕೆ ಎಂಬುದು ಬಿಜೆಪಿ ಕಾರ್ಯಕರ್ತರು ಪ್ರಶ್ನಿಸುತ್ತಿದ್ದಾರೆ.
ಹಿಂದೊಮ್ಮೆ, ಸಿ.ಟಿ.ರವಿಯವರು ಈ ವಿಚಾರವನ್ನು ಮುಂದಿಟ್ಟು ರಾಜ್ಯ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದರು.ಆದರೆ ಇನ್ಯಾರು ಕೂಡಾ ಸಿದ್ದರಾಮಯ್ಯ ಸರ್ಕಾರದ ಈ ಹಗರಣವನ್ನು ಗಂಭೀರವಾಗಿ ಪರಿಗಣಿಸಿಲ್ಲ. ಸಿ.ಟಿ.ರವಿ ಅವರಿಗೆ ಮಾತ್ರ ಕಾಳಜಿಯೇ? ಇತರ ನಾಯಕರಿಗೆ ಆಸಕ್ತಿ ಇಲ್ಲವೇ? ಎಂದು ದೇವನಹಳ್ಳಿ ಭಾಗದ ಬಿಜೆಪಿ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಅಲ್ಲಿ ಮೋದಿ ವಿರುದ್ಧ, ಇತ್ತ ಸಿದ್ದರಾಮಯ್ಯ ವಿರುದ್ಧ..!
ಹಿಂದೆ ಕೇಂದ್ರ ಕೃಷಿ ಕಾಯ್ದೆಯ ವಿರುದ್ಧ ದೆಹಲಿಯಲ್ಲಿ rally ಮಾಡಿದವರೇ ಇದೀಗ ಬೆಂಗಳೂರಿನಲ್ಲಿ ಹೋರಾಟ ನಡೆಸಿದ್ದಾರೆ. ದೆಹಲಿಯಲ್ಲಿ ಹೋರಾಟ ನಡೆಸಿದ್ದ ಸಂಯುಕ್ತ ಕಿಸಾನ್ ಮೋರ್ಚಾ ಮುಖಂಡ ಟಿಕಾಯತ್ ನೇತೃತ್ವದಲ್ಲೆ ಬೆಂಗಳೂರಿನಲ್ಲೂ ದೇಶದ ವಿವಿಧ ರಾಜ್ಯಗಳ ರೈತ ಸಂಘಟನೆಗಳ ನಾಯಕರು ದೇವನಹಳ್ಳಿ ರೈತರ ಹೋರಾಟದಲ್ಲಿ ಭಾಗಿಯಾಗಿದ್ದಾರೆ. ಈ ಸಂಯುಕ್ತ ಕಿಸಾನ್ ಮೋರ್ಚಾ ಈ ಹಿಂದೆ ದೆಹಲಿಯಲ್ಲಿ ಮೋದಿ ಸರ್ಕಾರದ ಕೃಷಿ ನೀತಿ ವಿರುದ್ಧ ಸುದೀರ್ಘ ಪ್ರತಿಭಟನೆ ನಡೆಸಿದಾಗ ಆ ಸನ್ನಿವೇಶವನ್ನು ಕಾಂಗ್ರೆಸ್ ನಾಯಕರು ತಮಗೆ ಬೇಕಾದಂತೆ ಬಳಸಿಕೊಂಡಿದ್ದರು. ಇದೀಗ ಅದೇ ಮೋರ್ಚಾ ಮುಖಂಡರು ಕಾಂಗ್ರೆಸ್ ಸರ್ಕಾರದ ವಿರುದ್ಧ ಹೋರಾಟ ನಡೆಸಿದ್ದು, ಇದನ್ನೇ ದಿದ್ದರಾಮಯ್ಯ ಸರ್ಕಾರದ ವಿರುದ್ಧ ಅಸ್ತ್ರವಾಗಿಸಲು ರಾಜ್ಯ ಬಿಜೆಪಿಯವರಿಗೆ ಅವಕಾಶ ಸಿಕ್ಕಿದರೂ ಯಾರೊಬ್ಬ ಚುನಾಯಿತ ನಾಯಕರೂ ಚಕಾರ ಎತ್ತುತ್ತಿಲ್ಲ ಎಂಬುದು ಕಾರ್ಯಕರ್ತರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಕಾಂಗ್ರೆಸ್ ಜೊತೆ ರಾಜ್ಯ ಬಿಜೆಪಿ ನಾಯಕರ ಹೊಂದಾಣಿಕೆ?
‘ಯತ್ನಾಳ್ ಹೇಳಿರುವಂತೆ ಬಹುಶಃ ರಾಜ್ಯ ಬಿಜೆಪಿ ನಾಯಕರು ಕಾಂಗ್ರೆಸ್ ಸರ್ಕಾರದ ಜೊತೆ ಹೊಂದಾಣಿಕೆ ಮಾಡಿದ್ದಾರೆ’ ಎಂದು ಕೆಲವು ಕಾರ್ಯಕರ್ತರು ಆಕ್ರೋಶ ಹೊರ ಹಾಕಿದ್ದಾರೆ. ಸಿದ್ದರಾಮಯ್ಯ, MB ಪಾಟೀಲ್ ವಿರುದ್ಧ ಆರೋಪ ಕೇಳಿಬಂದಿದೆಯಾದರೂ ಬಿಜೆಪಿ ನಾಯಕರು ಮೌನ ವಹಿಸಿದ್ದಾರೆ. ಹಿಂದೆ ಸಂಯುಕ್ತ ಕಿಸಾನ್ ಮೋರ್ಚಾದ ದೆಹಲಿ ಪ್ರತಿಭಟನೆಯನ್ನು ಮುಂದಿಟ್ಟು ಮೋದಿ ವಿರುದ್ಧ ಕಾಂಗ್ರೆಸ್ ಲೇವಡಿ ಮಾಡಿರುವ ವಿಚಾರ ಬಿಜೆಪಿ ನಾಯಕರಿಗೆ ಗೊತ್ತೇ ಇಲ್ಲವೇ? ಈಗ ಅದೇ ರೈತ ಸಂಘಟನೆಗಳು ಸಿದ್ದರಾಮಯ್ಯ ಸರ್ಕಾರದ ವಿರುದ್ಧ ಹೋರಾಟ ಮಾಡುತ್ತಿದ್ದಾಗ ಹಳೆಯ ಸೇಡನ್ನು ರಾಜ್ಯ ಬಿಜೆಪಿಯವರು ತೀರಿಸಬೇಕಿತ್ತು ಅಲ್ಲವೇ ಎಂಬುದು ಬಿಜೆಪಿ ಕಾರ್ಯಕರ್ತರ ಪ್ರಶ್ನೆಯಾಗಿದೆ.
ಅಂದರೆ, ಕರ್ನಾಟಕ ಬಿಜೆಪಿ ನಾಯಕರಿಗೆ ಮೋದಿ ಬೇಕಾಗಿಲ್ಲ. ಮೋದಿಯವರಿಗೆ ಈ ಹಿಂದೆ ಆಗಿರುವ ಅಪಮಾನ ಬಗ್ಗೆ ರಾಜ್ಯ ಬಿಜೆಪಿಯವರಿಗೆ ಕ್ಯಾರೇ ಇಲ್ಲ ಎಂದು ಬಿಜೆಪಿ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.




























































