ಬೆಂಗಳೂರು: ರಾಜ್ಯದ ಆಡಳಿತ ವರ್ಗದಲ್ಲಿ ಸಂಚಲನ ಸೃಷ್ಟಿಸಿರುವ ಕೆಐಎಡಿಬಿ ಹಗರಣ ಆರೋಪ ಕುರಿತಂತೆ ಸರ್ಕಾರ ಗಂಭೀರವಾಗಿ ಪರಿಗಣಿಸಿದ್ದು, ತನಿಖಾ ಪ್ರಕ್ರಿಯೆಯನ್ನು ಆರಂಭಿಸಿದೆ. ಕೆಐಎಡಿಬಿ ಭೂಸ್ವಾಧೀನ ಪ್ರಕ್ರಿಯೆ ಹಾಗೂ ಭೂ ಪರಿಹಾರ ವಿತರಣೆ ಕುರಿತಂತೆ ‘ಸಿಟಿಜನ್ ರೈಟ್ಸ್ ಫೌಂಡೇಷನ್’ ಸಲ್ಲಿಸಿರುವ ದೂರಿನ ಹಿನ್ನೆಲೆಯಲ್ಲಿ ಸೂಕ್ತ ಕ್ರಮ ಕೈಗೊಳ್ಳುವಂತೆ ಕೆಐಎಡಿಬಿ ಕಾರ್ಯನಿರ್ವಹಣಾಧಿಕಾರಿಗಳಿಗೆ ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆಯ ಪ್ರಧಾನ ಕಾರ್ಯದರ್ಶಿ ನಿರ್ದೇಶನ ನೀಡಿದ್ದಾರೆ.
ದೇವನಹಳ್ಳಿ ಸುತ್ತಮುತ್ತ ಕೆಐಎಡಿಬಿ ಭೂಸ್ವಾಧೀನ ಪ್ರಕ್ರಿಯೆ ಹಾಗೂ ಪರಿಹಾರ ಹಣ ವಿತರಣೆಯಲ್ಲಿ ಅವ್ಯವಹಾರ ನಡೆದಿದೆ ಎಂದು ಆರೋಪಿಸಿ ‘ಸಿಟಿಜನ್ ರೈಟ್ಸ್ ಫೌಂಡೇಷನ್ ಅಧ್ಯಕ್ಷ ಕೆ.ಎ.ಪಾಲ್ ಅವರು, ಮುಖ್ಯಮಂತ್ರಿ, ಕೈಗಾರಿಕಾ ಸಚಿವರಿಗೆ ದೂರು ನೀಡಿದ್ದರು. ಕೆಐಎಡಿಬಿ ಭೂಸ್ವಾಧೀನಾಧಿಕಾರಿಯಾಗಿರುವ ಕೆಎಎಸ್ ಅಧಿಕಾರಿ ಬಾಳಪ್ಪ ಹಂದಿಗುಂದ ಅವರ ವಿರುದ್ದ ಗುರುತರ ಆರೋಪ ಮಾಡಿ ಈ ದೂರು ಸಲ್ಲಿಕೆಯಾಗಿದೆ. ಸರ್ಕಾರಿ ಜಮೀನನ್ನು ಖಾಸಗಿ ವ್ಯಕ್ತಿಗಳ ಒಡೆತನದ ಭೂಮಿ ಎಂದು ಪರಿಗಣಿಸಿ ಅಕ್ರಮವಾಗಿ ಪರಿಹಾರದ ಹಣ ಪಾವತಿಸಲಾಗಿದೆ ಎಂದು, ನಿವೇಶನ ಹಂಚಿಕೆಯಲ್ಲೂ ಅಕ್ರಮ ನಡೆದಿದೆ ಎಂದೂ, ಒಂದೇ ಜಮೀನಿಗೆ ಎರಡು ಬಾರಿ ಪರಿಹಾರವನ್ನು ಅಕ್ರಮವಾಗಿ ಪಾವತಿಸಲಾಗಿದೆ ಎಂದೂ ಸಿಟಿಜನ್ ರೈಟ್ಸ್ ಫೌಂಡೇಷನ್ ಅಧ್ಯಕ್ಷ ಕೆ.ಎ.ಪಾಲ್ ಆರೋಪಿಸಿದ್ದರು. ಈ ಬಗ್ಗೆ ಹೈಕೋರ್ಟ್ ಪರಿವೀಕ್ಷಣೆಯಲ್ಲಿ ಉನ್ನತ ಮಟ್ಟದ ತನಿಖೆ ನಡೆಸುವಂತೆ ದೂರುದಾರರು ಕೋರಿದ್ದರು.
ಈ ದೂರನ್ನು ಸರ್ಕಾರ ನಿರ್ಲಕ್ಷಿಸಿದ ಹಿನ್ನೆಲೆ ಲೋಕಾಯುಕ್ತರಿಗೆ ಪಾಲ್ ಅವರು ದೂರು ಸಲ್ಲಿಸಿದ್ದರು. ಆದರೂ ಕ್ರಮ ಕೈಗೊಳ್ಳದಿದ್ದಾಗ ಕೆ.ಎ.ಪಾಲ್ ಅವರು ಜಾರಿ ನಿರ್ದೇಶನಾಲಯಕ್ಕೆ ದೂರು ಸಲ್ಲಿಸಿದ್ದಾರೆ.
ಇ.ಡಿ.ಗೆ ಸಲ್ಲಿಸಿರುವ ದೂರಿನಲ್ಲಿ ಬಾಳಪ್ಪ ಹಂದಿಗುಂದ ಮಾತ್ರವಲ್ಲ, ಸಿಎಂ ಸಿದ್ದರಾಮಯ್ಯ ಹಾಗೂ ಕೈಗಾರಿಕಾ ಸಚಿವರ ಬಗ್ಗೆಯೂ ಪಾಲ್ ಅರೊಪ ಮಾಡಿದ್ದಾರೆ.
ಅತ್ತ, ಜಾರಿ ನಿರ್ದೇಶನಾಲಯವು ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸುತ್ತಿದ್ದಂತೆಯೇ ಎಚ್ಚೆತ್ತುಕೊಂಡಿರುವ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್ ಅವರು ತರಾತುರಿಯಲ್ಲಿ ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆಗೆ ನಿರ್ದೇಶನ ನೀಡಿ, ಪ್ರಕರಣ ತನಿಖೆ ಬಗ್ಗೆ ಪರಿಶೀಲಿಸುವಂತೆ ನಿರ್ದೇಶನ ನೀಡಿದ್ದಾರೆ. ಸಚಿವರ ಪತ್ರ ಆಧರಿಸಿ ಕೆಐಎಡಿಬಿ ಸಿಇಒ ಅವರಿಗೆ ಪತ್ರ ಬರೆದಿರುವ ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆಯ ಪ್ರಧಾನ ಕಾರ್ಯದರ್ಶಿ, ಸಿಟಿಜನ್ ರೈಟ್ಸ್ ಫೌಂಡೇಷನ್ ನೀಡಿರುವ ದೂರಿನ ಹಿನ್ನೆಲೆಯಲ್ಲಿ ಸೂಕ್ತ ಕ್ರಮ ಕೈಗೊಂಡು ಸರ್ಕಾರಕ್ಕೆ ವರದಿ ನೀಡುವಂತೆ ಆದೇಶಿಸಿದ್ದಾರೆ.