ಬೆಂಗಳೂರು: ಡ್ರಗ್ಸ್ ವಿರುದ್ದ ನಿಷ್ಟೂರ ಕ್ರಮ ಕೈಗೊಳ್ಳಲಾಗುತ್ತಿದ್ದರೂ ಮಾದಕ ಮಾಫಿಯಾ ತನ್ನ ದಂಧೆ ನಡೆಯುತ್ತಲೇ ಇದೆ. ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಅಧಿಕಾರಿಗಳು ಕ್ಷಿಪ್ರ ಕಾರ್ಯಾಚರಣೆ ನಡೆಸಿ ನೈಜೀರಿಯಾ ಪ್ರಜೆಯನ್ನು ಬಂಧಿಸಿ, ಆತನ ಹೊಟ್ಟೆಯಲ್ಲಿದ್ದ ಕೋಟ್ಯಾಂತರ ರೂಪಾಯಿ ಮೌಲ್ಯದ ಡ್ರಗ್ಸ್ ವಶ ಪಡಿಸಿಕೊಂಡಿದ್ದಾರೆ.
ಫಿಲ್ಮೀ ಸ್ಟೈಲ್ ದಂಧೆ..
ಸಿನಿಮಾ ಶೈಲಿಯಲ್ಲಿ ಹೊಟ್ಟೆಯೊಳಗೆ ಡ್ರಗ್ಸ್ ಸಾಗಾಟ ಮಾಡುತ್ತಿದ್ದ ನೈಜೀರಿಯಾ ಪ್ರಜೆ. ಈ ಬಗ್ಗೆ ಕಾರ್ಯಾಚರಣೆ ನಡೆಸಿದ ಏರ್ಪೋರ್ಟ್ ಗುಪ್ತಚರ ಇಲಾಖೆಯ ಅಧಿಕಾರಿಗಳು ನಶೆ ಮಾಫಿಯಾದ ಒಬ್ಬನನ್ನು ಬಂಧಿಸಿದ್ದಾರೆ. ಈ ವಿದೇಶಿ ಪ್ರಜೆಯ ಹೊಟ್ಟೆಯಲ್ಲಿ ಬರೋಬ್ಬರಿ 11ಕೋಟಿ ಮೌಲ್ಯದ ಡ್ರಗ್ಸ್ ಪತ್ತೆಯಾಗಿದೆ.
ಜೋಹಾನ್ಸ್ ಬರ್ಗ್ ನಿಂದ ಆಗಸ್ಟ್ 19ರಂದು ಬೆಂಗಳೂರಿಗೆ ವಿಮಾನದಲ್ಲಿ ಬಂದಿದ್ದ ಈತ ವಿಮಾನದಲ್ಲಿ ನೀಡಲಾಗಿದ್ದ ಊಟ, ತಿಂಡಿ ಸ್ವೀಕರಿಸಿಲ್ಲ. ನೀರು ಕುಡಿಯಲೂ ಹಿಂದೇಟು ಹಾಕಿದ್ದ. ಆತನ ಈ ವೈಖರಿ ಅನುಮಾನಕ್ಕೆ ಎಡೆಮಾಡಿಕೊಟ್ಟಿತ್ತು.
ಈತ ಬೆಂಗಳೂರು ತಲುಪುತ್ತಿದ್ದಂತೆಯೇ ಪರಿಶೀಲನೆ ನಡೆಸಿದ ಗುಪ್ರಚರ ಸಿಬ್ಬಂದಿ ಆತನ ಹೊಟ್ಟೆಯಲ್ಲಿ 1.25 ಕೆ ಜಿ ತೂಕದ ಕೊಕೇನ್ ಗುಳಿಗೆಗಳನ್ನು ಪತ್ತೆ ಮಾಡಿದ್ದಾರೆ ಆ ಕೂಡಲೇ ಬೆಂಗಳೂರಿನ ಆಸ್ಪತ್ರೆಗೆ ಕರೆದೊಯ್ದು ಡ್ರಗ್ಸ್ ಗುಳಿಗೆಗಳನ್ನು ಹೊರತೆಗೆಸಿದ್ದಾರೆ.
ಬೆಂಗಳೂರಿನ ಡ್ರಗ್ ಪೆಡ್ಲರ್‌ಗೆ ಈ ಮಾದಕ ವಸ್ತು ಪೂರೈಕೆ ಮಾಡುವ ಕೃತ್ಯದ ಹಿನ್ನೆಲೆಯಲ್ಲಿ ಈತ ಬೆಂಗಳೂರಿಗೆ ಬಂದಿದ್ದಾನೆಂಬ ಸಂಗತಿ ವಿಚಾರಣೆ ವೇಳೆ ಬೆಳಕಿಗೆ ಬಂದಿದೆ.