ಬೆಂಗಳೂರು: ಸಿಎಂ ಬಸವರಾಜ್ ಬೊಮ್ಮಾಯಿ ಸಂಪುಟ ಮತ್ತೊಮ್ಮೆ ವಿಸ್ತರಣೆಗೆ ತಯಾರಿ ನಡೆದಿದೆ. ಮೊಲ ಬಾರಿ ವಿಸ್ತರಣೆ ವೇಳೆ ಸ್ಥಾನ ಸಿಗದವರು ಈ ಬಾರಿ ಭರ್ಜರಿ ಕಸರತ್ತು ನಡೆಸುತ್ತಿದ್ದಾರೆ.
ಈ ಬಾರಿಯೂ ಯಡಿಯೂರಪ್ಪ ಆಪ್ತರಿಗೇ ಆದ್ಯತೆ ನೀಡುವ ಸಾಧ್ಯತೆಗಳ ಬಗ್ಗೆ ಬಿಜೆಪಿ ಪಾಳಯದಲ್ಲಿ ಮಾತುಗಳು ಹರಿದಾಡುತ್ತಿವೆ. ಆದರೂ ಕೂಡಾ ಜಾರಕಿಹೊಳಿ ಬ್ರದರ್ಸ್, ಬಳ್ಳಾರಿಯ ರೆಡ್ಡಿ ಬ್ರದರ್ಸ್ ಸಹಿತ ಹಲವರು ಸಂಪುಟ ಸೇರಲು ತೆರೆಮರೆಯ ಕಸರತ್ತಿನಲ್ಲಿ ತೊಡಗಿದ್ದಾರೆ. ಆದರೆ, ಅರವಿಂದ ಬೆಲ್ಲದ್, ಸಿ.ಪಿ.ಯೋಗೇಶ್ವರ್, ಬಸನಗೌಡ ಪಾಟೀಲ್ ಯತ್ನಾಳ್ ಅವರು ಸಂಪುಟ ಸೇರದಿರಲು ನಿರ್ಧರಿಸಿದ್ದಾರೆ ಎನ್ನಲಾಗಿದೆ.
ಸದ್ಯದಲ್ಲೇ ಸಂಪುಟ ವಿಸ್ತರಣೆ ನಡೆಯುವ ಸಾಧ್ಯತೆಗಳಿವೆ. ಈ ಕುರಿತಂತೆ ಕಲಬುರಗಿಯಲ್ಲಿ ಹೇಳಿಕೆ ನೀಡಿರುವ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ಪ್ರಾಮಾಣಿಕ ಶಾಸಕರ ಸೇರ್ಪಡೆಗಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಶೀಘ್ರದಲ್ಲೇ ಸಚಿವ ಸಂಪುಟ ವಿಸ್ತರಣೆ ಮಾಡಲಿದ್ದಾರೆಂದು ತಿಳಿಸಿದ್ದಾರೆ.
ನಾಲ್ಕು ಮಂತ್ರಿಗಳ ಸ್ಥಾನ ಖಾಲಿ ಇರುವುದರಿಂದ, ಕಲಬುರಗಿಯಿಂದ ಚುನಾಯಿತ ಪ್ರತಿನಿಧಿಯೊಬ್ಬರಿಗೆ ಸ್ಥಾನ ನೀಡಲು ಮುಖ್ಯಮಂತ್ರಿಯವರು ಚಿಂತನೆ ನಡೆಸುತ್ತಿದ್ದಾರೆಂದು ನಳಿನ್ ತಿಳಿಸಿದರು.