ಮಂಗಳೂರು: ಪುರಾಣ ಪ್ರಸಿದ್ದ ದೇಗುಲಗಳ ಪೈಕಿ ಕಟೀಲು ಕ್ಷೇತ್ರವೂ ದೇಶ ವಿದೇಶಗಳ ಗಮನ ಸೆಳೆದಿದೆ. ರಾಕ್ಷಸರ ಸಂಹಾರಕ್ಕೆಂದು ಭ್ರಾಮರಿಯ ರೂಪ ತಾಳಿದ ದುರ್ಗೆ ದುಷ್ಟರ ಸಂಹಾರ ಮಾಡಿದ ಸ್ಥಳ ಈ ಕಟೀಲು. ಪ್ರಸ್ತುತ ಲಾಕ್‌ಡೌನ್ ಸಙದರ್ಭದಲ್ಲೂ ಈ ಕ್ಷೇತ್ರದ ದೇವರ ದರ್ಶನಕ್ಕೆ ಅಡ್ಡಿಯಿಲ್ಲ. ಆನ್‌ಲೈನ್ ಮೂಲಕ ದೇವಿ ದರ್ಶನದಿಂದ ಭಕ್ತ ಸಮೂಹ ಖುಷಿಪಡುತ್ತಿದೆ.
ದಕ್ಷಿಣಕನ್ನಡ ಜಿಲ್ಲೆಯ ಕಟೀಲು ಕ್ಷೇತ್ರದ ಅಧಿದೇವತೆ ದುರ್ಗಾಪರಮೇಶ್ವರಿ. ಅನ್ನ ದಾಸೋಹ, ಅಕ್ಷರ ದಾಸೋಹ ಮೂಲಕ ಸರ್ವ ಧರ್ಮೀಯರಿಗೂ ಆಶ್ರಯದಾತೆಯಾಗಿ ಕಟೀಲು ಮಾತೆ ಭಕ್ತಕೋಟಿಯ ಚಿತ್ತಸೆಳೆದಿದ್ದಾಳೆ.
https://youtu.be/SwHFTOPHFBM
ಈ ಕ್ಷೇತ್ರಕ್ಕೆ ಅದರದ್ದೇ ಆದ ವೈಭವ ಇದೆ. ಅದರದ್ದೇ ಆದ ಭಕ್ತ ಸಮೂಹವೂ ಇದೆ. ಆದರೆ ಲಾಕ್‌ಡೌನ್ ವಿಚಾರದಿಂದಾಗಿ ಭಕ್ತರಿಗೆ ಈ ದೇಗುಲ ಭೇಟಿ ಸಾಧ್ಯವಿಲ್ಲ. ನಂದಿನಿ ನದಿಯ ನಡುವೆ ನಿಂತಿರುವ ಭವ್ಯ ದೇಗುಲದ ಸುಂದರ ಸನ್ನಿವೇಶವನ್ನು ಕಣ್ತುಂಬಿಕೊಳ್ಳುವ ಅವಕಾಶವೂ ಈಗಿಲ್ಲ.
ಇಂತಹಾ ಸಂದರ್ಭದಲ್ಲಿ ಭಕ್ತರು ದೇವರ ದರ್ಶನದಿಂದ ದೂರವಾಗಬಾರದು ಎಂಬ ಉದ್ದೇಶದಿಂದ ದೇವಾಲಯದ ಪ್ರಮುಖ ಅರ್ಚಕರಾದ ಅನಂತ ಆಸ್ರಣ್ಣ ಹಾಗೂ ಹರಿ ಆಸ್ರಣ್ಣರ ತಂಡ ತಮ್ನದೇ ಅದ ಪ್ರಯತ್ನ ಕೈಗೊಂಡಿದ್ದಾರೆ. ಶ್ರೀ ದೇವಿಯ ನಿತ್ಯದ ಅಲಂಕಾರದ ಸನ್ನಿವೇಶ, ಮಹಾ ಪೂಜೆಯ ವೈಭವದ ದೃಶ್ಯಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುತ್ತಿದ್ದಾರೆ.
ವಾಟ್ಸಪ್, ಫೇಸ್‌ಬುಕ್ ಸಹಿತ ಸೋಷಿಯಲ್ ಮೀಡಿಯಾಗಳಲ್ಲಿ ಹಲವಾರು ಸಮೂಹ ಸೃಷ್ಟಿಯಾಗಿದ್ದು ಈ ಮೂಲಕ ಸಾವಿರಾರು ಭಕ್ತರು ದೇವಿ ದರ್ಶನದ ಸೊಬಗನ್ನು ಸಾಕ್ಷೀಕರಿಸುತ್ತಿದ್ದಾರೆ.