ಬೆಂಗಳೂರು: ರಾಜ್ಯದಲ್ಲಿ ಸಿಎಂ ಬದಲಾವಣೆ ಪ್ರಕ್ರಿಯೆ ಆರಂಭವಾಗಿದೆಯೇ? ಸಚಿವ ಯೋಗೇಶ್ವರ್ ಬಂಡಾಯದ ಧ್ವನಿಯ ನಂತರ ಬಿಜೆಪಿಯಲ್ಲಿ ತಳಮಳ ಸೃಷ್ಟಿಯಾಗಿದೆಯೇ? ಈ ಕಾರಣದಿಂದಾಗಿಯೇ ಸಿಎಂ ಬಿಎಸ್‌ವೈ ಪುತ್ರ ವಿಜಯೇಂದ್ರ ದೆಹಲಿಗೆ ದೌಡಾಯಿಸಿದ್ದಾರೆಯೇ? ಎಂಬಿತ್ಯಾದಿ ಮಾತುಗಳು ರಾಜ್ಯ ರಾಜಕಾರಣದಲ್ಲಿ ಕೇಳಿಬರುತ್ತಿದೆ.
ದಿಢೀರ್ ಅಚ್ಚರಿಯ ಬೆಳವಣಿಗೆಯೊಂದರಲ್ಲಿ ಸಿಎಂ ಯಡಿಯೂರಪ್ಪ ಪುತ್ರ ವಿಜಯೇಂದ್ರ ಇಂದು ನಸುಕಿನ ಜಾವವೇ ದಿಲ್ಲಿಗೆ ಹಾರಿದ್ದಾರೆ. ಬೆಳ್ಳಂ ಬೆಳಿಗ್ಗೆ 5.30ರ ಸುಮಾರಿಗೆ ಬರಂಗಳೂರು ವಿಮಾನ ನಿಲ್ದಾಣ ಮೂಲಕ ದೆಹಲಿಗೆ ವಿಜಯೇಂದ್ರ ತೆರಳಿದ್ದು ಈ ದಿಡೀರ್ ದಿಲ್ಲಿ ಯಾತ್ರೆ ರಾಜ್ಯ ರಾಜಕಾರಣದಲ್ಲಿ ಸಂಚಲನಕ್ಕೆ ಕಾರಣವಾಗಿದೆ.
ಕೆಲವು ದಿನಗಳ ಹಿಂದಷ್ಟೇ ಬಿಎಸ್‌ವೈ ಬಗ್ಗೆ ಮುನಿಸಿಕೊಂಡಿರುವ ಸಚಿವ ಯೋಗೇಶ್ವರ್ ಹಾಗೂ ಧಾರವಾಡದ ಬಿಜೆಪಿ ಶಾಸಕ ಅರವಿಂದ್ ಬೆಲ್ಲದ್ ಅವರು ದೆಹಲಿಗೆ ತೆರಳಿ ವರಿಷ್ಠರಿಂದ ಸಂದೇಶ ಪಡೆದುಕೊಂಡಿದ್ದಾರೆನ್ನಲಾಗಿದೆ. ಮರುದಿನ ಸಂಪುಟ ಸಭೆಯಲ್ಲಿ ಪಾಲ್ಗೊಂಡ ನಂತರ ಸಚಿವ ಯೋಗೇಶ್ವರ್ ಅವರು ಸಿಎಂ ಪುತ್ರ ವಿಜಯೇಂದ್ರ ವಿರುದ್ದ ಆಕ್ರೋಶ ಹೊರ ಹಾಕಿದ್ದು ವರಿಷ್ಠರಿಗೆ ದೂರು ನೀಡುವ ನಡೆ ಮುಂದುವರಿಯಲಿದೆ ಎಂದು ರಣಕಹಳೆ ಮೊಳಗಿಸಿದ್ದರು.
ಇದರ ಬೆನ್ನಲ್ಲೇ ಇಂದು ಬೆಳಿಗ್ಗೆಯೇ ವಿಜಯೇಂದ್ರ ದೆಹಲಿಗೆ ತೆರಳಿ ಅಚ್ಚರಿಯ ಬೆಳವಣಿಗೆಗೆ ಸಾಕ್ಷಿಯಾಗಿದ್ದಾರೆ.