ಚಿಕ್ಕಬಳ್ಳಾಪುರ: ಆರೋಗ್ಯ ಕ್ಷೇತ್ರದಲ್ಲಿ ದುಡಿಯುತ್ತಿರುವ ಆಶಾಕಾರ್ಯಕರ್ತೆಯರಿಗರ ಮೂರು ತಿಂಗಳಿಂದ ಗೌರವಧನ ಬಿಡುಗಡೆಯಾಗಿಲ್ಲ. ಹೀಗಿರುವಾಗ ಕೋವಿಡ್ ಸಂಕಟ ಕಾಲದಲ್ಲಿ ದುಡಿಯುವುದು, ಬದುಕು ಸಾಗಿಸುವುದು ಹೇಗೆ ಎಂಬ ಧರ್ಮಸಂಕಟದಲ್ಲಿದ್ದಾರೆ ಆಶಾ ಕಾರ್ಯಕರ್ತೆಯರು.
ಈ ಕುರಿತಂತೆ ಕೆಲವು ದಿನಗಳ ಹಿಂದೆ ಸರಣಿ ಸತ್ಯಗ್ರಹ ನಡೆಸಿರುವ ಆಶಾ ಕಾರ್ಯಕರ್ತೆಯರು ತಮ್ಮ ಸಮಸ್ಯೆಗಳ ಬಗ್ಗೆ ಸರ್ಕಾರದ ಗಮನ ಸೆಳೆದಿದ್ದರು.
ಈ ಸಮಸ್ಯೆ ಬಗ್ಗೆ ಆಶಾ ಕಾರ್ಯಕರ್ತೆಯರು ಆರೋಗ್ಯ ಸಚಿವರ ಗಮನಸೆಳೆದಿದ್ದಾರೆ. ಗೌರವಧನ ಸಿಕ್ಕಿಲ್ಲ. ಹಾಗಾಗಿ ಜೀವನ ನಡೆಸುವುದು ಹೇಗೆ. ದಯವಿಟ್ಟು ನಮ್ಮ ಸಮಸ್ಯೆ ಪರಿಹರಿಸಿ ಎಂದು ಚಿಕ್ಕಬಳ್ಳಾಪುರ ಸಮೀಪದ ಮಂಚೇನಹಳ್ಳಿ ಗ್ರಾಮದಲ್ಲಿ ಸೋಮವಾರ ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಅವರನ್ನು ಭೇಟಿಯಾಗಿ ಒತ್ತಾಯಿಸಿದರು. ಪರಿಸ್ಥಿತಿ ಮನವರಿಕೆಯಾದ ಹಿನ್ನೆಲೆಯಲ್ಲಿ, ಮನವಿಗೆ ಸ್ಪಂದಿಸಿದ ಸುಧಾಕರ್ ಆರೋಗ್ಯ ಇಲಾಖೆ ಕಾರ್ಯದರ್ಶಿಗೆ ಫೋನ್ ಮಾಡಿ ತಕ್ಷಣ ಗೌರವಧನ ಬಿಡುಗಡೆ ಮಾಡಲು ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದರು.
ಗೌರಿಬಿದನೂರು ತಾಲ್ಲೂಕು ಮಂಚೇನಹಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರದ ಬಳಿ ‘ವೈದ್ಯರ ನಡೆ ಹಳ್ಳಿಗಳ ನಡೆ’ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ವೇಳೆ ಈ ಬೆಳವಣಿಗೆ ನಡೆಯಿತು. 24 ಗಂಟೆಯೊಳಗೆ ಆಶಾ ಕಾರ್ಯಕರ್ತೆಯರಿಗೆ ಗೌರವಧನ ನೀಡಬೇಕು ಎಂದು ಸಚಿವರು ಆರೋಗ್ಯ ಇಲಾಖೆ ಆಯುಕ್ತರಿಗೆ ತಾಕೀತು ಮಾಡಿದ ವೈಖರಿ ಎಲ್ಲರ ಗಮನಸೆಳೆಯಿತು.
‘ಆಶಾ’ಗಳ ಪ್ರಮುಖ ಬೇಡಿಕೆ ಹೀಗಿತ್ತು..
- ಪ್ರತಿ ತಿಂಗಳಿಗೆ 4 ಸಾವಿರ ರೂಪಾಯಿ ಗೌರವಧನ ನೀಡಬೇಕು.
- ಕಳೆದ ಮೂರು ತಿಂಗಳಿಂದ ಪ್ರತಿ ಆಶಾ ಕಾರ್ಯಕರ್ತೆಯರಿಗೆ 12 ಸಾವಿರ ರೂಪಾಯಿ ಬಾಕಿಯಿದೆ. ಇದನ್ನು ಪರಿಹರಿಸಬೇಕು.
ಆರೋಗ್ಯಾಧಿಕಾರಿಗಳ ಸ್ಪಷ್ಟನೆ..?
ಖಜಾನೆಯಲ್ಲಿ ತಾಂತ್ರಿಕ ಸಮಸ್ಯೆಯಿಂದ ಹೀಗಾಗಿದೆ ಎಂಬ ಸ್ಪಷ್ಟನೆ ಜಿಲ್ಲಾ ಆರೋಗ್ಯಾಧಿಕಾರಿ ಡಾ.ಇಂದಿರಾ ಕಬಾಡೆ ಅವರದ್ದು.