ಉಡುಪಿ: ಪ್ರತಿ ವರ್ಷ ಅಷ್ಟಮಿ ಬಂದಾಗ ಕರಾವಳಿಯ ರವಿ ಕಟಪಾಡಿಯವರು ಯಾವ ವೇಷ ಹಾಕ್ತೇರೆ ಎನ್ನುವ ಕುತೂಹಲ ಸಹಜ. ಯಾಕಂದ್ರೆ ಅವ್ರ ವೇಷ ಭಿನ್ನ, ವಿಭಿನ್ನ ಅಷ್ಟೇ ಅಲ್ಲ ವಿಶೇಷ ಆಕರ್ಷಕ. ಬಡ ರೋಗಿಗಳಿಗೆ ಸಹಾಯ ಮಾಡಬೇಕು ಎನ್ನುವ ಮನಸ್ಸು ಇತರರಿಗೆ ಮಾದರಿ.
ಉಡುಪಿಯ ಕಟಪಾಡಿ ನಿವಾಸಿ ರವಿ, ಕಳೆದ ಆರು ವರ್ಷಗಳಿಂದ ಅಷ್ಟಮಿ ಮತ್ತು ವಿಟ್ಲಪಿಂಡಿ ದಿನದಂದು ವೇಷ ಧರಿಸಿದ್ದಾರೆ. ಊರೂರು ತಿರುಗಿ ಲಕ್ಷಾಂತರ ದೇಣಿಗೆ ಸಂಗ್ರಹಿಸಿದ್ದಾರೆ.
ಇವರೊಬ್ಬ ಸಾಮಾನ್ಯ ಕೂಲಿ ಕಾರ್ಮಿಕ. ಕಳೆದ ಏಳು ವರ್ಷಗಳಿಂದ ವಿವಿಧ ವೇಷ ಹಾಕಿ ಸುಮಾರು 72 ಲಕ್ಷ ರೂಪಾಯಿ ಸಂಗ್ರಹಿಸಿ, ಪೂರ್ತಿ ಹಣವನ್ನು ಬಡ, ಅನಾರೋಗ್ಯ ಪೀಡಿತ 33 ಮಕ್ಕಳಿಗೆ ವಿತರಿಸಿ ಮಾನವೀಯತೆ ಮೆರೆದಿದ್ದಾರೆ.
ಕೊರೋನಾ ಕಾರಣದಿಂದ ಅಷ್ಟಮಿ ವೇಷಕ್ಕೆ ಅವಕಾಶ ಇರಲಿಲ್ಲ, ಆದರೂ ಈ ಸಮಾಜಸೇವಕ ರವಿಯವರಿಗೆ ವಿಶೇಷ ಅವಕಾಶ ನೀಡಲಾಗಿತ್ತು. ಅವಕಾಶ ಬಳಸಿಕೊಂಡು ರವಿ, ಈ ಬಾರಿ ಹಾಲಿವುಡ್ ಸಿನಿಮಾದ ಫ್ಯಾಂಟಸಿ ವೇಷ ಡಾರ್ಕ್ ಅಲೈಟ್ ಆಗಿ ಎರಡು ದಿನಗಳ ಕಾಲ ರವಿ ಉಡುಪಿಯಲ್ಲಿ ಓಡಾಡಿ ಲಕ್ಷಾಂತರ ರೂಪಾಯಿ ಹಣ ಸಂಗ್ರಹಿಸಿದ್ದಾರೆ.
ರವಿಯವರ ಮಾನವೀಯ ಕಾಳಜಿ ಗಮನಿಸಿ, ಬಾಲಿವುಡ್ ತಾರೆ ಅಮಿತಾಬ್ ಬಚ್ಚನ್ ನಡೆಸಿ ಕೊಡುವ ಕರೋಡ್ ಪತಿಯಲ್ಲಿ ಅವಕಾಶ ನೀಡಿದ್ರು, ಅದರಲ್ಲಿ ಬಂದ ಎಂಟು ಲಕ್ಷ ರೂಪಾಯಿಯನ್ನು ಪೂರ್ತಿಯಾಗಿ ಕಷ್ಟದಲ್ಲಿರುವವರಿಗೆ ಕೊಟು ಉದಾರತೆ ಮರೆದಿರುವುದೂ ಗಮನಾರ್ಹ.