ಬೆಂಗಳೂರು: ಆಡಳಿತದಲ್ಲಿ ಸುಧಾರಣೆ ತರುತ್ತೇವೆ ಅನಗತ್ಯ ವೆಚ್ಚಕ್ಕೆ ಕಡಿವಾಣ ಹಾಕುತ್ತೇವೆ ಎನ್ನುವ ಸರ್ಕಾರ ಮೊದಲು ಸಚಿವಾಲಯದ ನೌಕರರಿಗೆ ನ್ಯಾಯ ಒದಗಿಸಲಿ, ನಿವೃತ್ತರಾದವರನ್ನು ಪುನಃ ಅದೇ ಜಾಗಕ್ಕೆ ಹೊರಗುತ್ತಿಗೆ ಆಧಾರದ ಮೇಲೆ ನೇಮಿಸುವುದನ್ನು ಬಿಡಲಿ ಎಂದು ಕರ್ನಾಟಕ ರಾಜ್ಯ ಸಚಿವಾಲಯದ ನೌಕರರ ಸಂಘ ಆಗ್ರಹಿಸಿದೆ.
ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಹಾಗೂ ಸಚಿವಾಲಯದ ನೌಕರರ ಸಮಸ್ಯೆಗಳನ್ನು ಆದಷ್ಟು ಬೇಗ ಪರಿಹರಿಸದೇ ಹೋದಲ್ಲಿ ಸಚಿವಾಲಯವನ್ನು ಬಂದ್ ಮಾಡುವ ಎಚ್ಚರಿಕೆಯನ್ನೂ ಸಂಘ ನೀಡಿದೆ.
ಜಂಟಿ ಸುದ್ದಿಗೋಷ್ಠಿಯಲ್ಲಿ ಸಂಘದ ಅಧ್ಯಕ್ಷ ಗುರುಸ್ವಾಮಿ ಮಾತನಾಡಿ, ಸರ್ಕಾರ ಆಡಳಿತ ಸುಧಾರಣೆಯ ನೆಪೊದಲ್ಲಿ ಸಚಿವಾಲಯದಲ್ಲಿ ಕಿರಿಯ ಸಹಾಯಕರ ಹುದ್ದೆಗಳನ್ನು ಕಡಿತಗೊಳಿಸಲೆತ್ನಿಸಿ ಅನ್ಯಾಯ ಮಾಡುತ್ತಿದೆ. ಈಗಾಗಲೇ ಸಚಿವ ಸಂಪುಟದಲ್ಲಿ ಸಮಗ್ರವಾಗಿ ಚರ್ಚಿಸದೆಯೇ ಸಚಿವಾಲಯದ ನೌಕರರು ತಹಶೀಲ್ದಾರರಾಗುವ ಸೇವೆಯನ್ನು ತಪ್ಪಿಸಿದೆ. ಕೆಲವು ಸಚಿವರು ಹಾಗೂ ಕೆಎಎಸ್ ಅಧಿಕಾರಿಗಳು ತಮ್ಮ ಆಪ್ತರನ್ನು ಹೊರಗುತ್ತಿಗೆ ಮೇಲೆ ನೇಮಿಸಿಕೊಳ್ಳುವ ಮೂಲಕ ಸಚಿವಾಲಯದಲ್ಲಿ ಕೆಲವರು ಸರ್ಕಾರಿ ನೌಕರರ ಮೇಲೆ ದಬ್ಬಾಳಿಕೆ ಸರ್ವಾಧಿಕಾರ ಧೋರಣೆ ತಾಳುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ಸಚಿವಾಲಯದಲ್ಲಿ ನಿವೃತ್ತರಾದವರನ್ನೇ ಮತ್ತೆ ಪುನಃ ಹೊರಗುತ್ತಿಗೆ ಮೇಲೆ ನೇಮಕ ಮಾಡಿಕೊಳ್ಳುವ ಮೂಲಕ ಬಹುತೇಕರಿಗೆ ಸರ್ಕಾರಿ ನೌಕರಿ ಸಿಗುವ ಅವಕಾಶವನ್ನು ಕಸಿದುಕೊಳ್ಳುತ್ತಿದ್ದಾರೆ.ಅನಾವಶ್ಯಕ ವೆಚ್ಚಕ್ಕೆ ಕಡಿವಾಣ ಹಾಕುತ್ತೇವೆ ಎನ್ನುವ ಸರ್ಕಾರ ಮೊದಲು ನಿವೃತ್ತರಾದವರನ್ನು ಪುನಃ ನೇಮಿಸಿಕೊಳ್ಳುವುದನ್ನು ಬಿಡಲಿ. ಅದರ ಬದಲಿಗೆ ಒಂದಿಷ್ಟು ನಿರುದ್ಯೋಗಿಗಳಿಗೆ ಉದ್ಯೋಗ ಕೊಡಲಿ ಎಂದರು.
ಎನ್.ಪಿ.ಎಸ್ ನೌಕರರ ಸಂಘದ ಅಧ್ಯಕ್ಷ ಶಾಂತರಾಮ್ ಮಾತನಾಡಿ, ಸಚಿವಾಲಯದಲ್ಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಬೇಕು. ಆಡಳಿತ ಸುಧಾರಣೆ ಹೆಸರಿನಲ್ಲಿ ಸಚಿವಾಲಯದ ಯಾವುದೇ ಇಲಾಖೆ, ಹುದ್ದೆಗಳಿಗೆ ಕಡಿತ ಹಾಕಬಾರದು. ತಾಂತ್ರಿಕವಾಗಿ ಸಮಸ್ಯೆ ಪರಿಹರಿಸಿ ನೈಜತೆಯನ್ನು ಅರಿತು ಆಡಳಿತಾತ್ಮಕ ಸುಧಾರಣೆ ಅನಗತ್ಯ ವೆಚ್ಚಕ್ಕೆ ಕಡಿವಾಣ ಹಾಕಲಿ. ಸಚಿವಾಲಯದ ವೃಂದ ಮತ್ತು ನೇಮಕಾತಿ ನಿಯಮಗಳನ್ನುಉಲ್ಲಂಘಿಸಿ ಸಚಿವಾಲಯದ ಇತರೆ ಇಲಾಖೆಗಳ ನ್ ಕೇಡರ್ ಹುದ್ದೆಗಳನ್ನು ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯ ಗಮನಕ್ಕೆತಾರದೇ ನೇಮಕ ಮಾಡಕೊಳ್ಳುವುದರ ಜೊತೆಗೆ ನೇರವಾಗಿ ಆರ್ಥಿಕ ಇಲಾಖೆಯಿಂದ ಒಪ್ಪಿಗೆಯನ್ನೂ ಸಹ ಪಡೆಯುತ್ತಿರುವುದು ಕಾನೂನುಬಾಹಿರ ಎಂದು ಖಂಡಿಸಿದರು.
ಕರ್ನಾಟಕ ಸರ್ಕಾರದ ಸಚಿವಾಲಯದ ಸುಮಾರು 34 ಇಲಾಖೆಗಳು ಕೇಂದ್ರೀಕೃತ ವ್ಯವಸ್ಥೆಯಡಿ ವಿಧಾನಸೌಧ, ವಿಕಾಸಸೌಧ ಹಾಗೂ ಬಹುಮಹಡಿ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿವೆ. ಆದರೂ ಕೆಲವು ಇಲಾಖೆಯ ವಿಭಾಗಗಳನ್ನು ಸಚಿವಾಲಯದ ಸುತ್ತಲಿನ ವಾತಾವರಣದಿಂದ ಬಹುದೂರ ಕೊಂಡೊಯ್ಯುವ ಆದೇಶಗಳನ್ನು ಹೊರಡಿಸಿ ಹೊರಗಿನ ಕ್ಷೇತ್ರ ಲಾಖೆಗಳಿಗೆ ಹಾಗೂ ತಾತ್ಕಾಲಿಕ ಆಯೋಗಗಳಿಗೆ ಸಚಿವಾಲಯದ ಮತ್ತು ಕಟ್ಟಡಗಳಲ್ಲಿ ಅವಕಾಶ ಒದಗಿಸುವುದರಿಂದ ಸಚಿವಾಲಯವು ಒಂದೇ ವ್ಯಾಪ್ತಿಯಲ್ಲಿ ಕೆಲಸ ನಿರ್ವಹಿಸಲು ತೊಡಕುಂಟಾಗುತ್ತಿದೆ. ಹೀಗಾಗಿ ಸಚಿವಾಲಯದ ಎಲ್ಲಾ ಇಲಾಖೆಗಳನ್ನು ಒಂದೆಡೆ ತರಬೇಕೆಂದು ಸಂಘ ಆಗ್ರಹಿಸಿದೆ ಎಂದರು.
ವಿವಿಧ ಬೇಡಿಕೆಗಳಿಗಾಗಿ ಹಾಗೂ ಸರ್ಕಾರವನ್ನು ಎಚ್ಚರಿಸಲು ಆಚರಿಸಲು ಸೆ.2 ರಂದು ಬಹುಮಹಡಿಗಳ ಕಟ್ಟಡದ ಎದುರಿಗೆ ಸಾಂಕೇತಿಕ ಧರಣಿ ಹಮ್ಮಿಕೊಂಡಿದ್ದು, ಬೇಡಿಕೆಗಳನ್ನು ತ್ವರಿತವಾಗಿ ಈಡೇರಿಸಿ ನ್ಯಾಯ ಒದಗಿಸದೇ ಹೋದಲ್ಲಿ ಸಚಿವಾಲಯವನ್ನು ಮುಚ್ಚಬೇಕಾಗುತ್ತದೆ ಎಂದು ಸಚಿವಾಲಯ ನೌಕರರ ಸಂಘ ಎಚ್ಚರಿಸುತ್ತಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಸಂಘದ ಪದಾಧಿಕಾರಿಗಳಾದ ಬಿ.ಆರ್.ಕುಮಾರಸ್ವಾಮಿ, ಹರ್ಷಾ, ಮಂಜುಳ, ಮಾರುತಿ, ವಿದ್ಯಾಶ್ರೀ, ಕೆ.ಟಿ.ಜಗದೀಶ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.