ದೆಹಲಿ: ರಾಜ್ಯ ವಿಧಾನಸಭೆಯಲ್ಲಿ ಕಾಂಗ್ರೆಸ್ ಗೆದ್ದು ಬೀಗಿದರೂ ಮುಖ್ಯಮಂತ್ರಿ ಆಯ್ಕೆ ಪ್ರಕ್ರಿಯೆಯು ಪಕ್ಷದ ಹೈಕಮಾಂಡ್ ಪಾಲಿಗೆ ಗಜಪ್ರಸವ ಎಂಬಂತಾಯಿತು. ಪ್ರಚಂಡ ಜಯಭೇರಿ ಭಾರಿಸಿರುವ ಕಾಂಗ್ರೆಸ್ ಪಕ್ಷದ ಸರ್ಕಾರ ಅಸ್ತಿತ್ವಕ್ಕೆ ಬರಲು ಕ್ಷಣಗಣನೆ ಆರಂಭವಾಗಿದ್ದು ನೂತನ ಸಿಎಂ ಆಗುವ ಅದೃಷ್ಟ ಸಿದ್ದರಾಮಯ್ಯ ಅವರಿಗೆ ಒಲಿದಿದೆ.
ಕುತೂಹಲಕಾರಿ ತೀರ್ಮಾನದೊಂದಿಗೆ ಮುಖ್ಯಮಂತ್ರಿ ಆಯ್ಕೆಯ ಕಗ್ಗಂಟನ್ನು ಕಾಂಗ್ರೆಸ್ ಹೈಕಮಾಂಡ್ ಬಗೆಹರಿಸಿದೆ. ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರನ್ನು ಸಮಾಧಾನಪಡಿಸಿರುವ ರಾಹುಲ್ ಗಾಂಧಿ ಹಾಗೂ ಮಲ್ಲಿಕಾರ್ಜುನ ಖರ್ಗೆ ಅವರು ಮಾಜಿ ಸಿಎಂ ಸಿದ್ದರಾಮಯ್ಯ ಅವರನ್ನು ನೂತನ ಸರ್ಕಾರದ ಮುಖ್ಯಮಂತ್ರಿಯನ್ನಾಗಿಸಲು ಮುಂದಾದರು.
ಇಂದು ಬೆಳಿಗ್ಗೆಯಿಂದಲೇ ದೆಹಲಿಯಲ್ಲಿರುವ ಕಾಂಗ್ರೆಸ್ ಹೈಕಮಾಂಡ್ ಅಂಗಳ ಹೈ ವೋಲ್ಟೇಜ್ ವಿದ್ಯಮಾನಗಳ ಕೇಂದ್ರಬಿಂದುವಾಯಿತು. ಮಂಗಳವಾರ ಇಳಿಹೊತ್ತಿನವರೆಗೂ ಸರಣಿ ಸಭೆಗಳ ಮೂಲಕ ಕಾಂಗ್ರೆಸ್ ವರಿಷ್ಠರು ಸಿದ್ದರಾಮಯ್ಯ ಹಾಗೂ ಡಿಕೆಶಿ ಜೊತೆ ಹಲವು ಸುತ್ತಿನ ಮಾತುಕತೆ ನಡೆಸಿದ್ದರು. ತಾವೇ ಸಿಎಂ ಆಗಬೇಕೆಂದು ಈ ಇಬ್ವರೂ ನಾಯಕರು ಪಟ್ಟು ಹಿಡಿದಿದ್ದರು. ಈ ಹಿನ್ನೆಲೆಯಲ್ಲಿ ಬುಧವಾರ ಬೆಳಿಗ್ಗೆ ಅಂತಿಮ ಕಸರತ್ತು ನಡೆಸಲು ಸೋನಿಯಾ, ರಾಹುಲ್, ಹಾಗೂ ಖರ್ಗೆ ನಿರ್ಧರಿಸಿದ್ದರು.
ಅಂತಿಮವಾಗಿ ಸಿದ್ದರಾಮಯ್ಯ ಅವರನ್ನೇ ಮುಖ್ಯಮಂತ್ರಿ ಮಾಡುವ ಬಗ್ಗೆ ಹೈಕಮಾಂಡ್ ಇಂದು ಬೆಳಿಗ್ಗೆ ತೀರ್ಮಾನ ಕೈಗೊಂಡಿದೆ. ಇದೇ ವೇಳೆ ರಾಹುಲ್ ಗಾಂಧಿ ಅವರು ಸಿದ್ದರಾಮಯ್ಯ ಅವರಿಗೆ ಆಲ್ ದಿ ಬೆಸ್ಟ್ ಎಂದು ಹೇಳುವ ಮೂಲಕ ಸಿಎಂ ಆಯ್ಕೆ ಬಗ್ಗೆ ಇದ್ದ ಎಲ್ಲಾ ಕುತೂಹಲಗಳಿಗೆ ತೆರೆ ಎಳೆದರು.
ಇದೇ ವೇಳೆ, ಡಿ.ಕೆ.ಶಿವಕುಮಾರ್ ಅವರನ್ಬು ಉಪಮುಖ್ಯಮಂತ್ರಿ ಮಾಡಿ ಎರಡು ಪ್ರಮುಖ ಖಾತೆಗಳನ್ನು ವಹಿಸಲು ಹಾಗೂ ಕೆಪಿಸಿಸಿ ಅಧ್ಯಕ್ಷರಾಗಿ ಮುಂದುವರಿಸಲು ಹೈಕಮಾಂಡ್ ನಿರ್ಧರಿಸಿದೆ ಎನ್ನಲಾಗಿದೆ