ದೆಹಲಿ: ನೂತನ ಸಿಎಂ ಯಾರೆಂಬ ಬಗ್ಗೆ ಕಾಂಗ್ರೆಸ್ ನಾಯಕರು ತೀರ್ಮಾನಿಸಿದ್ದರೂ ಯಾರ ಹೆಸರನ್ನು ಅಂತಿಮಗೊಳಿಸಲಾಗಿದೆ ಎಂಬ ಬಗ್ಗೆ ಇನ್ನೂ ಘೋಷಣೆ ಮಾಡಿಲ್ಲ. ಅದಾಗಿಯೂ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಲಿದ್ದಾರೆ ಎಂಬ ಮಾಹಿತಿ ಹರಿದಾಡುತ್ತಿದೆ. ಈ ಬಗ್ಗೆ ಸ್ಪಷ್ಟನೆ ನೀಡಿರುವ ಪ್ರದೇಶ ಕಾಂಗ್ರೆಸ್ ಉಸ್ತುವಾರಿಯೂ ಆಗಿರುವ ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸುರ್ಜಿವಾಲ, ಹೈಕಮಾಂಡ್ ಯಾರ ಹೆಸರನ್ನೂ ಘೋಷಿಸಿಲ್ಲ ಎಂದಿದ್ದಾರೆ.
ದೆಹಲಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕರ್ನಾಟಕದಲ್ಲಿ 48 ಗಂಟೆಯೊಳಗೆ ಹೊಸ ಸಿಎಂ ಆಯ್ಕೆಯಾಗಲಿದ್ದು, 72 ಗಂಟೆಯೊಳಗೆ ಹೊಸ ಸಂಪುಟ ರಚನೆಯಾಗಲಿದೆ ಎಂದರು.
ಸುಳ್ಳುಸುದ್ದಿಗಳಿಗೆ ಯಾರೂ ಕಿವಿ ಕೊಡಬೇಡಿ ಎಂದು ಮನವಿ ಮಾಡಿರುವ ಸುರ್ಜೇವಾಲಾ, ನಾವು ಅವಿರೋಧವಾಗಿ ನಾಯಕನ ಆಯ್ಕೆ ಮಾಡಲು ನಿರ್ಧರಿಸಿದ್ದೇವೆ. ಹಾಗಾಗಿ ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ಅವರು ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕನ ಹೆಸರನ್ನು ಘೋಷಿಸಲಿದ್ದಾರೆ ಎಂದು ತಿಳಿಸಿದರು.
ಸೋಲಿನ ಹತಾಶೆಯಿಂದ ಬಿಜೆಪಿಯವರು, ಕೆಲ ಮಾಧ್ಯಮಗಳು ಗಾಳಿಸುದ್ದಿಗಳನ್ನು ಹರಿಬಿಡುತ್ತಿದ್ದಾರೆ. ಜನತೆ ಯಾವುದನ್ನೂ ನಂಬಬಾರದು ಎಂದು ಸುರ್ಜೇವಾಲಾ ಮನವಿ ಮಾಡಿದರು.