ಬೆಂಗಳೂರು: ರಾಜ್ಯದಲ್ಲಿ ಲೈಸೆನ್ಸ್ ನೀಡಲು ಹೊಸ ಕ್ರಮದ ಪ್ರಯತ್ನ ನಡೆಯಲಿದೆ ಎಂದು ಆರೋಗ್ಯ ಸಚಿವ ಡಾ.ಸುಧಾಕರ್ ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ ಬಿಬಿಎಂಪಿ ಹೋಟೆಲ್ ಅಸೋಸಿಯೇಷನ್ ಪ್ರತಿನಿಧಿಗಳ ಜತೆ ಸಮಾಲೋಚನೆ ನಡೆಸಿದ ಸಚಿವರು, ಇಡೀ ದೇಶದಲ್ಲಿ ಬ್ರೇಕ್ ಫಾಸ್ಟ್ ಪರಂಪರೆ ಆರಂಭವಾಗಿದ್ದು ಉಡುಪಿಯಿಂದ ಎಲ್ಲಾ ನಗರಗಳಲ್ಲೂ ಸಾವಿರಾರು ದರ್ಶಿನಿಗಳು ಇವೆ. ಕೋವಿಡ್ ಸಮಯದಲ್ಲಿ ದೊಡ್ಡ ಹೊಡೆತ ತಿಂದ ಉದ್ಯಮ ಹೊಟೇಲ್ ಉದ್ಯಮ. ಆದರೂ ಉಚಿತವಾಗಿ ಹಲವಾರು ಜನರ ಹೊಟ್ಟೆ ತುಂಬಿಸಿ ದೊಡ್ಡ ಕಾರ್ಯವನ್ನು ಮಾಡಿದೆ. ಹೀಗಾಗಿ ಈ ಉದ್ಯಮ ವಲಯ ಕೊಟ್ಟಿರುವ ಸಲಹೆಗಳು ಅತ್ಯಮೂಲ್ಯ. ಹೋಟೆಲ್ಗಳಿಗೆ ಪಾರದರ್ಶಕತೆಯಿಂದ ಲೈಸನ್ಸ್ ಕೊಡುವ ಕೆಲಸ ನಡೆಯಲಿದೆ. ಇದರಿಂದ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಲು ಸಾಧ್ಯ. ಅದಕ್ಕಾಗಿ ಒಂದು ಕೇಂದ್ರೀಕೃತ ವ್ಯವಸ್ಥೆ ಅಥವಾ ಏಕಗವಾಕ್ಷಿ ಪರವಾನಿಗೆ ಕೊಡಲು ಸಾಧ್ಯವಿದೆಯಾ ಅನ್ನುವುದನ್ನು ಪ್ರಣಾಳಿಕೆ ಸಮಿತಿ ಚರ್ಚಿಸಿ ಅದನ್ನು ಜಾರಿ ಮಾಡುವ ಬಗ್ಗೆ ಚಿಂತಿಸಲಿದೆ ಎಂದರು.
ಬಿಜೆಪಿ ಪಕ್ಷದ ಪ್ರಣಾಳಿಕೆ ಸಲಹಾ ಸಂಗ್ರಹ ಅಭಿಯಾನದ ಅಂಗವಾಗಿ ಬೃಹತ್ ಬೆಂಗಳೂರು ಹೋಟೆಲ್ಗಳ ಸಂಘದ ಜೊತೆ ಆಯೋಜಿಸಿದ್ದ 'ಸಲಹಾ ಸಮಾಲೋಚನಾ ಸಭೆ'ಯಲ್ಲಿ ಹೋಟೆಲ್ ಉದ್ಯಮದ ಬೆಳವಣಿಗೆ ಹಾಗೂ ಭವಿಷ್ಯದ ಕುರಿತು ಸಮಾಲೋಚಿಸಲಾಯಿತು.@BJP4Karnataka pic.twitter.com/9MzdM0Knuz
— Dr Sudhakar K (Modi ka Parivar) (@DrSudhakar_) April 3, 2023
ಕೇಂದ್ರದ ಮೋದಿ ಸರ್ಕಾರ ಹೊಟೇಲ್ ಉದ್ಯಮಿಗಳ ಪರವಾಗಿದೆ. ಜಿಎಸ್ಟಿಯನ್ನು 18% ನಿಂದ 5% ಗೆ ಇಳಿಸಲಾಗಿದೆ. ಗ್ಯಾಸ್, ಕಚ್ಚಾ ತೈಲದ ದರ ಕಡಿಮೆ ಮಾಡುವ ಬಗ್ಗೆ ಈ ವಲಯದಿಂದ ಸಲಹೆ ಬಂದಿದೆ. ರಷ್ಯಾ-ಉಕ್ರೇನ್ ಯುದ್ಧದ ಪರಿಣಾಮ ಭಾರತಕ್ಕೆ ಹೊಡೆತ ಬಿದ್ದಿದೆ. ಆದರೂ ಅಮೆರಿಕದ ಒತ್ತಡಕ್ಕೆ ಬಗ್ಗದೆ ರಷ್ಯಾದಿಂದ ತೈಲ ಖರೀದಿ ಮಾಡುತ್ತಿರುವ ಕಾರಣದಿಂದ ಐರೋಪ್ಯ ದೇಶಗಳು, ಪಾಕ್, ಬಾಂಗ್ಲಾಗಳಿಗಿಂತ ಇಲ್ಲಿ ದರ ಕಡಿಮೆ ಇದೆ ಎಂದರು.
ಬಿಜೆಪಿ ಸರ್ಕಾರ ಆಡಳಿತಕ್ಕೆ ಬಂದ ಬಳಿಕ ಸಾಕಷ್ಟು ಸವಾಲುಗಳನ್ನು ಎದುರಿಸಿತ್ತು. ಕೋವಿಡ್ ಲಾಕ್ಡೌನ್ ಸಮಯದಲ್ಲಿ ಆರ್ಥಿಕ ಪರಿಸ್ಥಿತಿ ಕೆಟ್ಟಿತ್ತು. ಆದಾಯ ಕಡಿಮೆ ಇದ್ದರೂ ಸರ್ಕಾರಿ ನೌಕರರಿಗೆ ಒಂದು ರೂಪಾಯಿ ವೇತನ ಕಡಿಮೆ ಮಾಡದ ದೇಶದ ಏಕಮಾತ್ರ ರಾಜ್ಯ ಕರ್ನಾಟಕವಾಗಿದೆ. ಅತಿವೃಷ್ಠಿ ಸಮಸ್ಯೆ ಎಡಬಿಡದೆ ಕಾಡಿದರೂ ಅನೇಕ ಸವಾಲುಗಳ ಮಧ್ಯೆ ಕರ್ನಾಟಕ ಭಾರತದಲ್ಲೇ ಅತಿ ಹೆಚ್ಚು ಜಿಎಸ್ಟಿ ಸಂಗ್ರಹಿಸಿ ಭಾರತದಲ್ಲಿ ನಂಬರ್ 2 ರಾಜ್ಯವಾಗಿದೆ. ಎಲ್ಲಾ ಸಂಕಷ್ಟಗಳನ್ನು ಮೆಟ್ಟಿ ನಿಂತು ಯಶಸ್ಸು ಸಾಧಿಸುವುದು ನಿಜವಾದ ಗೆಲುವು. ಮುಂದಿನ ಬಾರಿಯೂ ಬಿಜೆಪಿಗೆ ಮತ ನೀಡಿ ಅಭಿವೃದ್ಧಿ ಕಾರ್ಯ ಮಾಡಲು ಆಶೀರ್ವಾದ ಮಾಡಿ ಎಂದು ಕೋರಿದರು.