‘ವರಿಷ್ಠರ ಧ್ವನಿ ರವಿ ಮಾತಿನಲ್ಲಿ ಅಡಗಿದೆಯೇ..? ಸಿ.ಟಿ.ರವಿ ಬೀಸಿದ ಚಾಟಿ ನಂತರ ಬಿಜೆಪಿಯಲ್ಲಿನ ಬೇಗುದಿ ತಣ್ಣಗಾಗಬಹುದೇ..? ಶಾಸಕರು ಸಂಕಷ್ಟದಲ್ಲಿರುವ ಜನರ ನೆರವಿಗೆ ಧಾವಿಸುವರೇ..?
ಬೆಂಗಳೂರು: ನಾಯಕತ್ವ ವಿಚಾರಕ್ಕೆ ಜಗಳವಾಡುವ ಸಙದರ್ಭ ಇದಲ್ಲ. ರಾಜಧರ್ಮ ಮಾರ್ಗ ಸೂತ್ರ ಅನಿಸರಿಸುವವರು ಪ್ರಸಕ್ತ ಕೋವಿಡ್ ಸಂಕಟ ಕಾಲದಲ್ಲಿ ಜನರ ಕ್ಷೇಮದತ್ತ ಚಿತ್ತ ಹರಿಸಬೇಕೇ ಹೊರತು ಗದ್ದುಗೆ ಗುದ್ದಾಟಕ್ಕೆ ಇಳಿದಿರುವುದು ಸರಿಯಲ್ಲ.
ರಾಜಕೀಯ ಮುತ್ಸದ್ದಿಗಳು ಹಾಗೂ ಪ್ರಜ್ಞಾವಂತರು ಪ್ರಸ್ತುತ ಬಿಜೆಪಿಯಲ್ಲಿನ ವಿದ್ಯಮಾನ ಕುರಿತಂತೆ ಕೆರಳಿ ಕೆಂಡವಾಗಿದ್ದಾರೆ. ರಾಜ್ಯವನ್ನು ಆಳುತ್ತಿರುವ ಸರ್ಕಾರದ ಮುಖ್ಯಸ್ಥನ ಬಗ್ಗೆ ಜನರು ಈಗ ತಲೆಸಿಕೊಂಡಿಲ್ಲ. ಅವರ ಕ್ಷಮತೆಯ ಬಗ್ಗೆಯೂ ಜನ ಸಿಟ್ಟಿಗೆದ್ದಿಲ್ಲ. ಆದರೆ, ಕೇವಲ ಶಾಸಕರಷ್ಟೇ ಗುಂಪುಗಾರಿಕೆಯಲ್ಲಿ ತೊಡಗಿದ್ದು ಈ ಪ್ರಹಸನವನ್ನು ಜನರು ಹಾವು ಏಣಿಯಾಟದಂತೆ ಗಮನಿಸುವಂತಿದೆ. ಇದು ವ್ಯಂಗ್ಯ ರಾಜಕಾರಣವೋ ಅಸಹ್ಯ ವರ್ತನೆಯೋ ಎಂಬುದು ಜನರಿಗೂ ತಿಳಿಯುತ್ತಿಲ್ಲ.
ಯಡಿಯೂರಪ್ಪ ಅವರನ್ನು ಸಮರ್ಥ ಆಡಲಿತಗಾರ, ಪ್ರಶ್ನಾತೀತ ನಾಯಕ ಎಂದು ಬಿಜೆಪಿ ನಾಯಕರು ಹೇಳಿಕೊಳ್ಳುತ್ತಲೇ ಬಂದಿದ್ದಾರೆ. ಹೀಗಿರುವಾಗ ಸಿಎಂ ಬದಲಾವಣೆಯ ಮಾತು ಪ್ರತಿಧ್ವನಿಸುವುದಾದರೂ ಹೇಗೆ? ಎಂಬುದು ಕಮಲ ಪಕ್ಷದ ತಳಮಟ್ಟದ ಕಾರ್ಯಕರ್ತರ ಅಭಿಪ್ರಾಯ.
ರಾಜ್ಯದಲ್ಲಿನ ನಾಯಕರ ನಡೆಯನ್ನು ಗಮನಿಸಿರುವ ಬಿಜೆಪಿ ರಾಷ್ಟ್ರೀಯ ನಾಯಕರು ಕೂಡಾ ಈ ಮಟ್ಟದ ಬೆಳವಣಿಗೆಯನ್ನು ನಿರೀಕ್ಷಿಸಿರಲಿಲ್ಲ. ವಯೋಮಾನಕ್ಕೆ ಅನುಗುಣವಾಗಿ ಅಧಿಕಾರ ಹಂಚುವ ಬಗ್ಗೆ ಕೆಲವೊಮ್ಮೆ ತೀರ್ಮಾನ ಕೈಗೊಳ್ಳಲಾಗಿದೆಯಾದರೂ ಈಗಿನ ಪರಿಸ್ಥಿತಿ ಆ ಸೂತ್ರಕ್ಕೆ ಸೂಕ್ತವಾಗಿಲ್ಲ ಎಂಬುದು ಬಿಜೆಪಿ ವರಿಷ್ಠರ ಅಭಿಪ್ರಾಯ. ಇದೇ ಅಭಿಪ್ರಾಯವನ್ನೇ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಕೂಡಾ ವ್ಯಕ್ತಪಡಿಸಿದ್ದಾರೆ.
ಬಿಜೆಪಿ ನಾಯಕರಾಗಿದ್ದರೂ ಸಂಘದ ಶಿಸ್ತನ್ನು ರೂಢಿಸಿಕೊಂಡಿರುವ ಸಿ.ಟಿ.ರವಿ ನಿನ್ನೆಯವರೆಗೂ ಬಿಜೆಪಿ ನಾಯಕತ್ವ ವಿಚಾರದಲ್ಲಿ ಮೌನವಹಿಸಿದ್ದರು. ಪಕ್ಷದ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕೂಡಾ ಸಿಎಂ ಬದಲಾವಣೆ ಸಾಧ್ಯತೆ ಬಗ್ಗೆ ತುಟಿಕ್ ಪಿಟಿಕ್ ಅನ್ನಲಿಲ್ಲ. ಆದರೆ, ಗುರುವಾರದ ಬೆಳವಣಿಗೆ ನಂತರ ಮೌನ ಮುರಿದಿರುವ ಸಿ.ಟಿ.ರವಿ, ಪಕ್ಷದ ಸೇನಾನಿಯಾಗಿ ಬಿಜೆಪಿಯ ಶಾಸಕ ಸಮೂಹದೊಂದಿಗೆ ಎಚ್ಚರಿಕೆಯ ಸಂದೇಶವನ್ನು ಹಂಚಿಕೊಂಡ ನಡೆಯಲ್ಲಿ ವರಿಷ್ಠರ ಗಂಭೀರತೆ ಪ್ರತಿಬಿಂಬಿಸುವಂತಿತ್ತು.
ಸಿ.ಟಿ. ರವಿ ಹೇಳಿದ್ದಿಷ್ಟು..
ರಾಜ್ಯದಲ್ಲಿ ಯಡಿಯೂರಪ್ಪ ನೇತೃತ್ವದಲ್ಲಿ ನಮ್ಮ ಸರ್ಕಾರ ಇದೆ. ಕೇಂದ್ರದಲ್ಲಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಇದೆ. ಚರ್ಚೆ ಯಾಕೆ ಆಗುತ್ತಿದೆ ಗೊತ್ತಿಲ್ಲ. ಜನ ನಮ್ಮನ್ನ ಆರಿಸಿದ್ದು ಅವರು ಸಂಕಷ್ಟದಲ್ಲಿ ಇದ್ದಾಗ ನೆರವಿಗೆ ಬರಲಿ ಎಂದು. ಈಗ ಜನ ಸಂಕಷ್ಟದಲ್ಲಿ ಇದ್ದಾರೆ. ಅವರ ನೆರವಿಗೆ ನಿಲ್ಲಬೇಕು. ಉಳಿದದ್ದು ಸತ್ಯವೋ ಸುಳ್ಳೋ ಗೊತ್ತಿಲ್ಲ. ಕೆಲವೊಮ್ಮೆ ಆಧಾರ ಇಲ್ಲದೆಯೂ ಸುದ್ದಿ ಬರುತ್ತೆ. ರಾಜಕಾರಣದಲ್ಲಿ ಬೆಂಕಿ ಇಲ್ಲದೆಯೂ ಹೊಗೆ ಆಡುತ್ತೆ. ಇದು ಯಾವುದಕ್ಕೂ ಕಾಲವಲ್ಲ ಎಂದು ಸಿ.ಟಿ.ರವಿ ಸ್ವಪಕ್ಷೀಯರತ್ತ ಚಾಟಿ ಬೀಸಿದ್ದಾರೆ.
ಅಂತೆ- ಕಂತೆಗಳಿಗೆಲ್ಲಾ ಜವಾಬ್ಧಾರಿಯುತ ಸ್ಥಾನದಲ್ಲಿ ಇರುವವರು ಉತ್ತರಿಸಬಾರದು. ಕೇಂದ್ರಿಯ ನಾಯಕತ್ವ ಕಾಲಕ್ಕೆ ತಕ್ಕಂತೆ, ರಾಜ್ಯಗಳಲ್ಲಿನ ಜನರ ಹಿತ ಹಾಗೂ ಪಕ್ಷದ ಹಿತವನ್ನು ಗಮನದಲ್ಲಿ ಇಟ್ಟುಕೊಂಡು ನಿರ್ಣಯ ತೆಗೆದುಕೊಂಡಿದೆ. ಕರ್ನಾಟಕದಲ್ಲೂ ಆ ಕಾಲ ಬಂದಾಗ ವರಿಷ್ಠರು ನಿರ್ಣಯ ತೆಗೆದುಕೊಳ್ಳಬಹುದು. ಆ ವರೆಗೂ ಕೋವಿಡ್ ಸಂಕಷ್ಟದಲ್ಲಿರೋ ಜನರ ನೆರವಿಗೆ ನಿಲ್ಲುವ ಕೆಲಸ ಮಾಡಬೇಕಿದೆ ಎಂದು ಅವರು ತಮ್ಮ ಸಹೋದ್ಯೋಗಿ ಶಾಸಕರಿಗೆ ಕಿವಿಮಾತು ಹೇಳಿದ್ದಾರೆ.