ಮಂಗಳೂರು: ಕಾರ್ಕಳ ಶ್ರೀ ವೆಂಕಟರಮಣ ದೇವಸ್ಥಾನಕ್ಕೆ ಪುರಸಭೆ ನೋಟೀಸ್ ನೀಡಿದ್ದು, ಅಧಿಕಾರಿಗಳ ಕ್ರಮಕ್ಕೆ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ನೋಟೀಸ್ ನೀಡಿರುವ ಪುರಸಭೆಯ ಕ್ರಮವನ್ನು ಖಂಡಿಸಿರುವ ಭಕ್ತ ಸಮೂಹ, ನೋಟೀಸನ್ನು ಹಿಂಪಡೆಯದಿದ್ದರೆ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಕೆ ನೀಡಿದೆ.
ಪಡುತಿರುಪತಿ ಎಂದು ಖ್ಯಾತಿ ಪಡೆದಿರುವ ಕಾರ್ಕಳ ಶ್ರೀ ವೆಂಕಟರಮಣ ದೇವಸ್ಥಾನಕ್ಕೆ ಕಾರ್ಕಳ ಪುರಸಭಾ ಆಡಳಿತವು ನೋಟಿಸ್ ನೀಡಿರುವ ಕ್ರಮ ಖಂಡನೀಯ ಎಂದಿರುವ ಮಾಜಿ ಪುರಸಭಾ ಸದಸ್ಯ ವಿವೇಕಾನಂದ ಶೆಣೈ, ನೋಟೀಸ್ ತಕ್ಷಣ ಹಿಂಪಡೆಯಬೇಕು ಇಲ್ಲವಾದರೆ ಹೋರಾಟ ಅನಿವಾರ್ಯ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಶ್ರೀ ವೆಂಕಟರಮಣ ದೇವರ ಉತ್ಸವಕ್ಕೆ ರಥಬೀದಿಯಲ್ಲಿ ಗುರ್ಜಿ ನಿರ್ಮಾಣ ಮಾಡುವುದು ತಲ ತಲಾಂತರಗಳಿಂದ ನಡೆದು ಬಂದಿದೆ. ಉತ್ಸವದ ನಂತರ ಗುರ್ಜಿ ತೆಗೆದು ಗುರ್ಜಿಯ ಹೊಂಡವನ್ನು ಪ್ರತೀ ವರ್ಷವೂ ತಕ್ಷಣ ಮುಚ್ಚುವ ಕೆಲಸ ಮಾಡಲಾಗುತ್ತದೆ, ಈ ವರ್ಷವೂ ಅದೇ ಆಗಿದೆ ಇದೆಲ್ಲವೂ ಸರ್ವೆ ಸಾಮಾನ್ಯವಾದರೂ ಏನೂ ತಿಳಿಯದಂತೆ ಪುರಸಭಾ ಆಡಳಿತ ದೇವಸ್ಥಾನಕ್ಕೆ ನೋಟೀಸು ನೀಡಿರುವುದು ಆಶ್ಚರ್ಯ ತಂದಿದೆ ಎಂದು ವಿವೇಕ್ ಶೆಣೈ ಹೇಳಿದ್ದಾರೆ.
ನೋಟೀಸು ನೀಡಿದ ಅಧಿಕಾರಿಯ ವಿರುದ್ಧ ಕ್ರಮ ಜರುಗಿಸಿ ತಕ್ಷಣ ವರ್ಗಾವಣೆ ಮಾಡಬೇಕು, ನೋಟೀಸ್ ಹಿಂಪಡೆದು ದೇವರಲ್ಲಿ ಕ್ಷಮೆಯಾಚಿಸಬೇಕು. ಇಲ್ಲವಾದರೆ ಹೋರಾಟ ಅನಿವಾರ್ಯವಾದಿತು ಎಂದು ವಿವೇಕ್ ಶೆಣೈ ಅವರು ಪತ್ರಿಕಾ ಪ್ರಕಟಣೆ ಮೂಲಕ ಸರ್ಕಾರಕ್ಕೂ ಸಂದೇಶ ರವಾನಿಸಿದ್ದಾರೆ.