ಮಂಗಳೂರು: ತ್ರಿಲೋಕ ಸುಂದರಿಯನ್ನೂ ಮೀರಿಸಿದ ಲಲನೆಯರು.. ಅನನ್ಯ ವೈಭವದ ಸನ್ನಿವೇಶ.. ಎಲ್ಲೆಲ್ಲೂ ಥಳುಕು ಬೆಳಕಿನ ವಯ್ಯಾರ.. ಹೀಗೆ ಕವಿಯ ಬತ್ತಲಿಕೆಯಲ್ಲಿರುವ ಪದಭಂಡಾರವನ್ನೆಲ್ಲಾ ಬಳಸಿದರೂ ಸಾಲದು ಎಂಬ ವರ್ಣಿಸಲಾಗದ ಕಾರ್ಯಕ್ರಮಕ್ಕೆ ಮಂಗಳೂರಿನ ‘ಕರಾವಳಿ ಕಾಲೇಜ್’ ಸಾಕ್ಷಿಯಾಯಿತು. ಬಗೆಬಗೆಯ ವೈಯ್ಯಾರ ಥಳುಕು ಹಾಕಿದ್ದ ಈ ಮಹಾವೈಭವದಲ್ಲಿ ಸಾಂಸ್ಕೃತಿಕ ಮೇಳಗಳ ಸಮ್ಮಿಳನವಾದದ್ದಷ್ಟೇ ಅಲ್ಲ; ಗಣ್ಯಾತಿ ಗಣ್ಯರೂ ಸಮಾಗಮವಾಗಿ ಸಮಾರಂಭದಕ್ಕೆ ವಿಶೇಷ ರಂಗುತುಂಬಿದರು. ಅಂದಹಾಗೆ ಇದು ‘ಜೈಜನ್-22’ ಎಂಬ ವಿಶಿಷ್ಟ ಸಮಾರಂಭ. ಸಾಂಸ್ಕೃತಿಕ ಮಹಾಹಬ್ಬವಾಗಿ ಗಮನಸೆಳೆದ ಈ ಕಾರ್ಯಕ್ರಮವು ಕರಾವಳಿಯ ಸಾಂಸ್ಕೃತಿಕ ಶ್ರೀಮಂತಿಕೆಗೆ ಹಿರಿಮೆಯ ಕಿರೀಟ ತೊಟ್ಟಂತಿತ್ತು.
ದೇಶ ವಿದೇಶಗಳ ವಿದ್ಯಾರ್ಥಿಗಳ ಪಾಲಿಗೆ ವಿಶಿಷ್ಟ ಶಿಕ್ಷಣ ಕಾಶಿ ಎಂದೇ ಪರಿಗಣಿಸಲ್ಪಪಟ್ಟಿರುವ ‘ಕರಾವಳಿ ಕಾಲೇಜು ಕ್ಯಾಂಪಸ್’ ವಿವಿಧ ಧರ್ಮಗಳ ಹಬ್ಬ, ದೇಶ ಪ್ರೇಮದ ಕಾರ್ಯಕ್ರಮ ಸಹಿತ ಬಗೆಬಗೆಯ ಸಮಾರಂಭಗಳ ಮೂಲಕ ಸಂಸ್ಕೃತಿ ಶ್ರೇಷ್ಠತೆಯನ್ನು ಪ್ರತಿಬಿಂಭಿಸುತ್ತಿರುತ್ತವೆ. ಅದೇ ರೀತಿಯ ವಿಶಿಷ್ಟ ಕಾರ್ಯಕ್ರಮ ಈ ಬಾರಿ ‘ಅಂತರ್ ಕಾಲೇಜು ಸಾಂಸ್ಕೃತಿಕ ಹಬ್ಬ (ಕೈಜನ್-2022) ಹೆಸರಲ್ಲಿ ಅದ್ಧೂರಿಯಾಗಿ ನೆರವೇರಿತು.
ಮಂಗಳೂರಿನ ಕೊಟ್ಟಾರ ಚೌಕಿ ಬಳಿಯ ಕ್ಯಾಂಪಸ್‌ನಲ್ಲಿ ನಡೆದ ಈ ಕಾರ್ಯಕ್ರಮ ಹೊಸ ಸಾಂಸ್ಕೃತಿಕ ಜಗತ್ತನ್ನು ನಿರ್ಮಿಸಿದಂತಿತ್ತು. ಕರಾವಳಿ ಕಾಲೇಜು ಸಮೂಹ ಶಿಕ್ಷಣ ಸಂಸ್ಥೆಗಳ ಸ್ಥಾಪಕಾಧ್ಕಕ್ಷ ಗಣೇಶ್ ರಾವ್ ಅವರ ಹುಟ್ಟುಹಬ್ವದ ದಿನದಂದೇ ಈ ಕಾರ್ಯಕ್ರಮ ಆಯೋಜಿತವಾದದ್ದು ಮತ್ತೊಂದು ವಿಶೇಷ.
ಫ್ಯಾಷನ್ ಟೆಕ್ನಾಲಜಿ ಕೋರ್ಸ್ ಮೂಲಕ ದೇಶ-ವಿದೇಶಗಳಲ್ಲಿ ಖ್ತಾತವಾಗಿರುವ ಈ ಕಾಲೇಜಿನಲ್ಲಿ ಸಾಂಸ್ಕೃತಿಕ ಹಬ್ಬ ‘ಕೈಜನ್-22’ಗೆ ಆಕರ್ಷಣೆ ತುಂಬಿದ್ದೇ ಫ್ಯಾಷನ್ ಲೋಕ. ಸೌಂದರ್ಯ ಸ್ಪರ್ಧೆಯ ರೀತಿಯಲ್ಲೇ ಬೆಡಗು ಬಿನ್ನಾಣ ಪ್ರದರ್ಶನವಾಯಿತು. ಕರುನಾಡಿನ ನೃತ್ಯಕಲೆಗಳ ಅನಾವರಣದ ಜೊತೆ ಭರತನಾಟ್ಯ ಸಹಿತ ಶಾಸ್ತ್ರೀಯ ನೃತ್ಯ ವೈಭವವೂ ದೃಶ್ಯ ಕಾವ್ಯ ಬರೆದಂತಿತ್ತು.
ಈ ಸಾಂಸ್ಕೃತಿಕ ಮಹಾಹಬ್ಬಕ್ಕೆ ಚಾಲನೆ ನೀಡುವ ಮೂಲಕ ಕರಾವಳಿ ಕಾಲೇಜು ಸಮೂಹದ ನಿರ್ದೇಶಕಿ ಲತಾ ಜಿ.ರಾವ್ ಮುನ್ನುಡಿ ಬರೆದರು. ಈ ಸಂದರ್ಭದಲ್ಲಿ ಮಾತನಾಡಿದ ಕರಾವಳಿ ಕಾಲೇಜು ಸಮೂಹದ ಸ್ಥಾಪಕಾಧ್ಯಕ್ಷ ಗಣೇಶ್ ರಾವ್, ತಮ್ಮ ಮಾತಿನ ಮೋಡಿ ಮೂಲಕ ವಿದ್ಯಾರ್ಥಿಗಳಲ್ಲಿ ಆತ್ಮಸ್ಥೈರ್ಯ ತುಂಬುವ ಪ್ರಯತ್ನ ಮಾಡಿದರು. ‘ವಿದ್ಯಾರ್ಥಿ ಜೀವನ ಒಂದು ಸುವರ್ಣಯುಗ. ಈ ಅವಧಿಯಲ್ಲಿ ಸ್ಪರ್ಧಾ ಮನೋಭಾವದಿಂದ ಸವಾಲುಗಳನ್ನು ಗೆಲ್ಲಬೇಕುು’ ಎಂದು ಮಾರ್ಗದರ್ಶನ ಮಾಡಿದರು.
‘ಮನುಕುಲ ಶ್ರೇಷ್ಠವಾದದ್ದು. ಒಬ್ಬರಿಗೊಬ್ಬರು ಅರ್ಥಮಾಡಿಕೊಂಡು ಬದುಕುವ ಸೂತ್ರವನ್ನು ಮರೆಯಬಾರದು. ಪರಸ್ಪರ ಪ್ರೀತಿ-ವಿಶ್ವಾಸದಿಂದ ನಡೆದರೆ ಯಾವುದೇ ವಿವಾದಕ್ಕೆ ಅವಕಾಶವೇ ಸಿಗದು’ ಎಂದು ಗಣೇಶ್ ರಾವ್ ಹೇಳಿದರು. ಪ್ರಸ್ತುತ ಪರಿಸ್ಥಿತಿಯಲ್ಲಿ ಎದ್ದಿರುವ ವಿವಾದಗಳಿಗೆ ‘ಸಹಬಾಳ್ವೆ’ಯ ಸೂತ್ರವೊಂದೇ ಪರಿಹಾರ ಎಂಬುದನ್ನು ಅವರು ಪ್ರತಿಪಾದಿಸಿದರು.
ಯು.ಟಿ.ಇಫ್ತಿಕರ್ ಸಹಿತ ಶಿಕ್ಷಣ ಕ್ಷೇತ್ರದ ಮೇಧಾವಿಗಳು, ವಿವಿಧ ಕಾಲೇಜುಗಳ ಪ್ರಾಂಶುಪಾಲರು, ಅಧಿಕಾರಿಗಳು, ಸಾಹಿತಿಗಳು, ಪತ್ರಕರ್ತರು ಸೇರಿದಂತೆ ವಿವಿಧ ಕ್ಷೇತ್ರಗಳ ಪ್ರಮುಖರು ಈ ಸಮಾರಂಭದಲ್ಲಿ ಭಾಗಿಯಾಗಿ ಸಾಂಸ್ಕೃತಿಕ ಮಹಾಹಬ್ಬದ ರಸದೌತನದ ಸವಿಯುಂಡರು.