ಶ್ರೀನಗರ: ಕಣಿವೆ ರಾಜ್ಯ ಜಮ್ಮು ಮತ್ತು ಕಾಶ್ಮೀರದಲ್ಲಿ ಉಗ್ರರ ಉಪಟಳ ಮುಂದುವರಿದಿದೆ. ದೋಡಾ ಜಿಲ್ಲೆಯಲ್ಲಿ ಉಗ್ರರ ವಿರುದ್ದ ನಡೆದ ಕಾರ್ಯಾಚರಣೆ ಸಂದರ್ಭದಲ್ಲಿ ನಾಲ್ವರು ಯೋಧರು ಸಾವನ್ನಪ್ಪಿದ್ದಾರೆ.
ಭಯೋತ್ಪಾದಕರ ಅಡಗುತಾಣಗಳ ಬಗ್ಗೆ ಸುಳಿವಿನ ಆಧಾರದಲ್ಲಿ ದೋಡಾದ ದೇಸಾದ ಅರಣ್ಯ ಪ್ರದೇಶದಲ್ಲಿ ಸೇನಾಪಡೆ ಮತ್ತು ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಕಳೆದ ರಾತ್ರಿವೇಳೆ ಸೇನೆ ಕಾರ್ಯಾಚರಣೆಗಿಳಿದಿದ್ದು, ಆ ಸಂದರ್ಭದಲ್ಲಿ ಉಗ್ರರು ಗುಂಡಿನ ದಾಳಿ ನಡೆಸಿದ್ದಾರೆ. ಇದಕ್ಕೆ ಪ್ರತಿಯಾಗಿ ಯೋಧರು ಪ್ರತಿದಾಳಿ ನಡೆಸಿದ್ದಾರೆ. ಆದರೆ, ಎನ್‌ಕೌಂಟರ್‌ನಲ್ಲಿ ಓರ್ವ ಅಧಿಕಾರಿ ಸೇರಿದಂತೆ ನಾಲ್ವರು ಯೋಧರು ಹುತಾತ್ಮರಾಗಿದ್ದಾರೆ.
ಸೋಮವಾರ ರಾತ್ರಿ 9 ಗಂಟೆಯಿಂದ ಉಗ್ರರ ಜೊತೆ ಗುಂಡಿನ ಕಾಳಗ ಆರಂಭವಾಗಿದ್ದು, ಬೆಟ್ಟ ಪ್ರದೇಶದಲ್ಲಿ ಕಾರ್ಯಾಚರಣೆ ಮುಂದುವರಿದಿದೆ ಎಂದು ಮೂಲಗಳು ತಿಳಿಸಿವೆ.