ಬೆಂಗಳೂರು: ಜಿಂದಾಲ್ ಭೂ ಹಂಚಿಕೆ ವಿವಾದ ಕುರಿತಂತೆ ರಾಜ್ಯ ಸರ್ಕಾರವನ್ನು ಹೈಕೋರ್ಟ್ ಮತ್ತೊಮ್ಮೆ ತರಾಟೆಗೆ ತೆಗೆದುಕೊಂಡಿದೆ. ಸಾಮಾಜಿಕ ಹೋರಾಟಗಾರ ಕೆ.ಎ.ಪಾಲ್ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸೋಮವಾರದಂದು ಮತ್ತೆ ವಿಚಾರಣೆಗೆ ಬಂದಿದೆ. ಪ್ರಭಾರ ಮುಖ್ಯ ನ್ಯಾಯಮೂರ್ತಿ ಸತೀಶ್ಚಂದ್ರ ಶರ್ಮಾ ಅವರನ್ನೊಳಗೊಂಡ ವಿಭಾಗೀಯ ಪೀಠದ ಮುಂದೆ ನಡೆದ ವಿಚಾರಣೆ ಸಂದರ್ಭದಲ್ಲಿ ಜಿಂದಾಲ್ ಕಂಪನಿ ಪರವಾಗಿ ಮಾಜಿ ಅಡ್ವಕೇಟ್ ಜನರಲ್ ಉದಯ ಹೊಳ್ಳ ಅವರು ಹಾಜರಾದರೆ, ಅರ್ಜಿದಾರರ ಪರವಾಗಿ ಮಾಜಿ ಸರ್ಕಾರಿ ಅಭಿಯೋಜಕರಾದ ಹಿರಿಯ ವಕೀಲ ಎಸ್.ದೊರೆರಾಜು ವಾದ ಮಂಡಿಸಿದರು.
ಜಿಂದಾಲ್ ಪರವಾಗಿ ವಾದ ಮುಂದಿಟ್ಟ ವಕೀಲರು, ಅರ್ಜಿದಾರರು ಸತ್ಯಕ್ಕೆ ದೂರವಾದ ಆರೋಪಗಳನ್ನು ಮಾಡಿದ್ದಾರೆ ಎಂದು ಮನವರಿಕೆ ಮಾಡುವ ಪ್ರಯತ್ನ ಮಾಡಿದರು. ಆದರೆ ಈ ಸಂಗತಿಗಳನ್ನು ನ್ಯಾಯಮೂರ್ತಿಗಳು ಪುರಸ್ಕರಿಸಿಲ್ಲ. ಅರ್ಜಿದಾರರ ಆರೋಪಗಳಿಗೆ ಈ ವರೆಗೂ ಆಕ್ಷೇಪಣೆ ಸಲ್ಲಿಸದ ಪ್ರತಿವಾದಿಗಳ ನಡೆಯತ್ತ ಕಲಾಪ ಗಮನ ಕೇಂದ್ರೀಕರಿಸಿತು. ಸರ್ಕಾರ ಹಾಗೂ ಜಿಂದಾಲ್ ಕಂಪನಿಯ ವಕೀಲರು ಆಕ್ಷೇಪಣೆಯ ಪ್ರತಿಗಳನ್ನು ಅರ್ಜಿದಾರರ ವಕೀಲರಿಗಷ್ಟೇ ನೀಡುವುದು ಸರಿಯಲ್ಲ. ಅಧಿಕೃತವಾಗಿ ನ್ಯಾಯಾಲಯಕ್ಕೆ ಸಲ್ಲಿಸಬೇಕಿದೆ ಎಂದು ನ್ಯಾಯವಾದಿ ಎಸ್.ದೊರೆರಾಜು ನ್ಯಾಯಪೀಠದ ಗಮನಸೆಳೆದರು. ಈ ವಾದವನ್ನು ಆಲಿಸಿದ ನ್ಯಾಯಪೀಠ ಸರ್ಕಾರ ಸೇರಿದಂತೆ ಪ್ರತಿವಾದಿಗಳ ನಡೆ ಬಗ್ಗೆ ಅಸಮಾಧಾನ ಹೊರಹಾಕಿತಲ್ಲದೆ, ನಾಲ್ಕು ವಾರಗಳೊಳಗಾಗಿ ಆಕ್ಷೇಪಣೆ ಸಲ್ಲಿಸುವಂತೆ ಆದೇಶಿಸಿತು.
ಏನಿದು ಪ್ರಕರಣ..?
ಕೊರೋನಾ ಸಂಕಟ ಕಾಲದಲ್ಲಿ ಖಾಸಗಿ ಜಿಂದಾಲ್ ಕಂಪನಿಗೆ ತರಾತುರಿಯಲ್ಲಿ 3367 ಎಕರೆ ಜಮೀನು ಮಂಜೂರಾತಿ ನಿರ್ಧಾರವನ್ನು ಹಿಂದಿನ ಬಿಎಸ್‌ವೈ ಸರ್ಕಾರ ಕೈಗೊಂಡಿತ್ತು. ಹಿಂದೆ ಕುಮಾರಸ್ವಾಮಿ ಸಿಎಂ ಆಗಿದ್ದಾಗ ಆಗ ಬಳ್ಳಾರಿ ಜಿಲ್ಲೆ ವ್ಯಾಪ್ತಿಯಲ್ಲಿ ಜಿಂದಾಲ್‌ಗೆ ಜಮೀನು ಮಂಜೂರು ಮಾಡುವ ಪ್ರಕ್ರಿಯೆ ಆರಂಭವಾಗಿತ್ತು. ಆಗ ಇದಕ್ಕೆ ವಿರೋಧ ವ್ಯಕ್ತಪಡಿಸಿ ಬಿಜೆಪಿ ವತಿಯಿಂದ ಭಾರೀ ಪ್ರತಿಭಟನೆ ನಡೆದಿತ್ತು. ಆ ಸರ್ಕಾರ ಪತನಗೊಂಡು ಬಿಎಸ್‌ವೈ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಯಡಿಯೂರಪ್ಪ ಅವರ ಮುಂದಾಳುತ್ವದಲ್ಲಿ ಅದೇ ಜಿಂದಾಲ್ ಕಂಪನಿಗೆ ಸಂಡೂರು ಬಳಿ 3667 ಎಕರೆ ಜಮೀನು ನೀಡುವ ತೀರ್ಮಾನ ಕೈಗೊಳ್ಳಲಾಗಿದೆ ಎಂಬುದು ಸಾರ್ವಜನಿಕ ಹಿತಾಸಕ್ತಿ ಅರ್ಜಿಯಲ್ಲಿ ಕೆ.ಎ.ಪಾಲ್ ಮಾಡಿರುವ ಆರೋಪ.
ಸರ್ಕಾರದ ನಡೆಯನ್ನು ಪ್ರಶ್ನಿಸಿ ಕೆ.ಪಾಲ್ ಅವರು ಹೈಕೋರ್ಟ್‌ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದಾರೆ. ಸಚಿವರು ಹಾಗೂ ಶಾಸಕರ ವಿರೋಧವಿದ್ದರೂ, ಕಡಿಮೆ ದರದಲ್ಲಿ ನಿಯಮ ಬಾಹಿರವಾಗಿ ಜಮೀನು ಮಂಜೂರು ಮಾಡಲಾಗಿದೆ ಎಂದು ಈ ದೂರಿನಲ್ಲಿ ಕೋರ್ಟ್ ಗಮನಸೆಳೆದಿರುವ ಅರ್ಜಿದಾರರು, ಇದು ಬಹುಕೋಟಿ ಹಗರಣವಾಗಿದ್ದು ಕಿಕ್‌ಬ್ಯಾಕ್ ಸಂದಾಯದ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದಾರೆ. ಅರ್ಜಿದಾರರ ಪರವಾಗಿ ವಾದಿಸುತ್ತಿರುವ ಮಾಜಿ ಸರ್ಕಾರಿ ಅಭಿಯೋಜಕ ಎಸ್.ದೊರೆರಾಜು, ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸರ್ಕಾರವು ದಾಖಲೆಗಳನ್ನು ನೀಡಲು ಹಿಂದೇಟು ನೀಡುತ್ತಿದೆ ಎಂದು ಕೋರ್ಟ್ ಗಮನಕ್ಕೆ ತಂದಿದ್ದರು.
ಈ ನಡುವೆ, ದೇಶದ ಇತಿಹಾಸದಲ್ಲೇ ಮೊದಲೆಂಬಂತೆ ಮುಖ್ಯಮಂತ್ರಿ, ಉಪಮುಖ್ಯಮಂತ್ರಿಗಳು ಸೇರಿದಂತೆ ಮೂವತ್ತಕ್ಕೂ ಹೆಚ್ಚು ಸಚಿವರಿಗೆ, ಉನ್ನತಾಧಿಕಾರಿಗಳಿಗೆ ವಕೀಲರಾದ ಎಸ್.ದೊರೆರಾಜು ಅವರು ಈ ಪ್ರಕರಣದಲ್ಲಿ ಕೋರ್ಟ್ ನೊಟೀಸ್ ನೀಡಿ ದೇಶವ್ಯಾಪಿ ಸುದ್ದಿಯಾಗಿದ್ದರು.