ಬೆಂಗಳೂರು: ಪ್ರಸ್ತುತ ಪರಿಸ್ಥಿತಿಯಲ್ಲಿ ಶಾಲೆಗಳ ಆರಂಭದ ಬಗ್ಗೆ ರಾಜ್ಯ ಸರ್ಕಾರ ತಪ್ಪು ಹೆಜ್ಜೆ ಇಟ್ಟಿದೆ. ಕೋವಿಡ್ ಸೋಂಕು ಇನ್ನೂ ದೂರವಾಗಿಲ್ಲ, ಮಕ್ಕಳಿಗೆ ಇನ್ನೂ ಲಸಿಕೆ ಬಂದಿಲ್ಲ. ಇಂತಹಾ ಪರಿಸ್ಥಿತಿಯಲ್ಲಿ ಶಾಲೆಗಳ ಆರಂಭ ಸರಿಯಲ್ಲ. ಹೀಗಿರುವಾಗ ಒಂದನೇ ತರಗತಿಂದಲೇ ಭೌತಿಕ ತರಗತಿಗಳ ಆತಂಭಿಸುವುದು ಬೇಡ ಎಂಬ ಆಗ್ರಹ ಕೇಳಿಬಂದಿದೆ.
ಈ ಕುರಿತು ‘ಬೆಂಗಳೂರಿನ ಸಿಟಿಜನ್ ರೈಟ್ಸ್ ಫೌಂಡೇಷನ್’ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ, ಶಿಕ್ಷಣ ಸಚಿವ ನಾಗೇಶ್ ಹಾಗೂ ಆರೋಗ್ಯ ಸಚಿವ ಡಾ.ಸುಧಾಕರ್ ಅವರಿಗೆ ಪತ್ರ ಬರೆದಿದ್ದು, ಒಂದು ವೇಳೆ ಸರ್ಕಾರ ತಪ್ಪು ನಡೆ ಅನುಸರಿಸಿದರೆ ಕಾನೂನು ಹೋರಾಟ ನಡೆಸಿವುದಾಗಿ ಎಚ್ಚರಿಕೆ ನೀಡಿದ್ದಾರೆ.
ಈ ಹಿಂದೆ, ಜಿಂದಾಲ್ ಭೂ ಹಗರಣ ಕುರಿತಂತೆ ಕೆ.ಎ.ಪಾಲ್ ಅವರು ಹೈಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿ ರಾಜ್ಯ ರಾಜಕಾರಣದಲ್ಲಿ ಸಂಚಲನ ಸೃಷ್ಟಿಸಿದ್ದರು. ಇದೇ ಸಾಮಾಜಿಕ ಹೋರಾಟಗಾರ ಕೆ.ಎ.ಪಾಲ್ ನೇತೃತ್ವದ ಸಿಟಿಜನ್ ರೈಟ್ಸ್ ಫೌಂಡೇಷನ್ ಇದೀಗ ಸರ್ಕಾರದ ವಿರುದ್ದ ಮತ್ತೊಂದು ಹೋರಾಟಕ್ಕೆ ಸಿದ್ದತೆ ನಡೆಸಿದ್ದಾರೆ.
ಕೋವಿಡ್-19 ವೈರಾಣು ಹಾವಳಿ ಇನ್ನೂ ಕಡಿಮೆಯಾಗಿಲ್ಲ. ಭಾರತದಲ್ಲಂತೂ ಇದೀಗ ಮೂರನೇ ಅಲೆಯ ಆತಂಕ ಜನರನ್ನು ಕಾಡುತ್ತಿದೆ.
ದಕ್ಷಿಣ ಭಾರತದ ರಾಜ್ಯಗಳಲ್ಲಂತೂ ಕೋವಿಡ್-19 ಸೋಂಕಿನ ಅಬ್ಬರ ಜೋರಾಗಿದೆ. ಕೇರಳ, ಮಹಾರಾಷ್ಟ್ರ ಸಹಿತ ಹಲವು ರಾಜ್ಯಗಳಲ್ಲಿ ಸೋಂಕು ನಿಯಂತ್ರಣ ಸಂಬಂಧ ಸರ್ಕಾರಗಳು ಹರಸಾಹಸ ಪಡುತ್ತಿವೆ. ಅದರಲ್ಲೂ ಕೇರಳದಲ್ಲಿ ಸೋಂಕು ಆತಂಕಕಾರಿ ಪ್ರಮಾಣದಲ್ಲಿ ಹಬ್ಬುತ್ತಿರುವ ಹಿನ್ಬೆಲೆಯಲ್ಲಿ ಅಲ್ಲಿನ ಜನರಿಗೆ ಕರ್ನಾಟಕ ಪ್ರವೇಶಿಸುವ ಸಂದರ್ಭದಲ್ಲಿ ಕಠಿಣ ನಿಯಮ ಜಾರಿಗೊಳಿಸಲಾಗಿದೆ.
ಪರಿಸ್ಥಿತಿ ಹೀಗಿದ್ದರೂ ಕೂಡಾ ಕರ್ನಾಟಕ ಸರ್ಕಾರ ಮಕ್ಕಳ ಬದುಕಿನಲ್ಲಿ ಚೆಲ್ಲಾಟವಾಡುತ್ತಿದೆಯೇ ಎಂಬ ಪ್ರಶ್ನೆ ಉದ್ಭವವಾಗಿದೆ. ಅದಕ್ಕೆ ಉದಾಹರಣೆಯಂತಿದೆ ಶಾಲಾ ಕಾಲೇಜುಗಳ ಆರಂಭದ ನಿರ್ಧಾರ. ಕೋವಿಡ್ ಸೋಂಕು ನಿಯಂತ್ರಣ ಸಂಬಂಧ ಗುಂಪು ಸೇರುವಿಕೆ ಬೇಡ ಎನ್ನುತ್ತಿರುವ ಸರ್ಕಾರ ಅಗತ್ಯ ಮುಂಜಾಗ್ರತಾ ಕ್ರಮ ಕೈಗೊಳ್ಳದೆ ಶಾಲಾ ಕಾಲೇಜು ಆರಂಭಿಸಿದೆ. ಇದೀಗ ಕರ್ನಾಟಕದಲ್ಲಿ 6ನೇ ತರಗತಿ ಆರಂಭವಾಗಿದ್ದು ಸರ್ಕಾರದ ನಿರ್ಧಾರದಿಂದ ಮಕ್ಕಳಿಗೆ ಪ್ರಾಣ ಭೀತಿ ಕಾಡಿದೆ.
ಬಹುತೇಕ ಕಡೆ ಎರಡೆರಡು ವ್ಯಾಕ್ಸಿನೇಷನ್ ಆಗದೇ ಇದ್ದರೆ ಕಾರ್ಯಕ್ರಮದಲ್ಲಿ ಭಾಗಿಯಾಗಲು ಅವಕಾಶವಿಲ್ಲ ಎಂದು ಸರ್ಕಾರವೇ ಹೇಳಿದೆ. ಗಣೇಶೋತ್ಸವ ಸಂದರ್ಭದಲ್ಲೂ ಈ ನಿಯಮ ಜಾರಿ ಮಾಡಲಾಗಿತ್ತು. ಆದರೆ ಶಾಲಾ ಮಕ್ಕಳ ವಿಚಾರದಲ್ಲಿ ಈ ನಿಯಮ ಅನ್ವಯವಾಗಿಲ್ಲ.
ವಿದೇಶಗಳಿಗೆ ತೆರಳಲು, ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಬರೆಯಲು ಕೊರೋನಾ ಲಸಿಕೆ ಪಡೆದಿರಲೇಬೇಕು ಎಂದು ಹೇಳುತ್ತಿರುವುದೇ ಸರ್ಕಾರ. ಹೀಗಿರುವಾಗ ಶಾಲೆಗಳ ವಿಚಾರದಲ್ಲೇಕೆ ವ್ಯತಿರಿಕ್ತ ನಿಲುವು ಏಕೆ?
ಈಗಾಗಲೇ ಆರನೇ ತರಗತಿಯಿಂದ ಶಾಲೆಗಳು ಆರಂಭಕ್ಕೆ ಸರ್ಕಾರ ಅನುಮತಿ ನೀಡಿದ ಸಂದರ್ಭದಲ್ಲಿ ಸಾರ್ವಜನಿಕರ ಅಭಿಪ್ರಾಯನ್ನು ಸಂಗ್ರಹಿಸಿಲ್ಲ. ಇದೀಗ 1ನೇ ತರಗತಿಯಿಂದಲೇ ಶಾಲಾರಂಭಕ್ಕೆ ಎಲ್ಲರ ಒಲವಿದೆ ಎಂದೂ, ದಸರಾ ನಂತರ ಶಾಲೆ ಆರಂಭಿಸಲಾಗುವುದೆಂದು ಶಿಕ್ಷಣ ಸಚಿವರು ಹೇಳಿಕೆ ನೀಡಿದ್ದಾರೆಂದು ಮಾಧ್ಯಮಗಳು 30.09.2021ರಂದು ವರದಿ ಮಾಡಿದೆ. ಆದರೆ 10 ವರ್ಷದೊಳಗಿನ ಮಕ್ಕಳ ಹೆತ್ತವರು ಅಭಿಪ್ರಾಯವನ್ನೇ ವ್ಯಕ್ತಪಡಿಸಿಲ್ಲ.
ರಾಜ್ಯದಲ್ಲಿನ ಕೋವಿಡ್ ಪರಿಸ್ಥಿತಿ ಇನ್ನೂ ಆತಂಕಕಾರಿಯಾಗಿದೆ. ಇಂತಹಾ ಸಂದರ್ಭದಲ್ಲಿ ಶಾಲೆಗಳ ಅರಂಭ ಸರಿಯೇ ಎಂಬ ಬಗ್ಗೆ ಸಮೀಕ್ಷೆಗಳು ನಡೆದಿವೆ. ಪ್ರತಿಷ್ಠಿತ ಉದಯನ್ಯೂಸ್ ಮಾಧ್ಯಮವು ಪೋಷಕರ ಅಭಿಪ್ರಾಯ ಆಧಾರಿಸಿ ಸಮೀಕ್ಷೆ ನಡೆಸಿದೆ. ಈ ಸಮೀಕ್ಷೆಯಲ್ಲಿ ಶಾಲೆ ಆರಂಭಕ್ಕೆ ಶೇಕಡಾ 73ರಷ್ಟು ಮಂದಿ ವಿರೋಧ ವ್ಯಕ್ತಪಡಿಸಿದ್ದಾರೆ. ಹೀಗಿದ್ದರೂ ಕರ್ನಾಟಕ ಸರ್ಕಾರ ಪೋಷಕರ ಅಭಿಪ್ರಾಯ ಪಡೆಯದೇ ಶಾಲೆಗಳ ಆರಂಭಕ್ಕೆ ಅನುಮತಿ ನೀಡಿರುವುದು ಆಕ್ಷೇಪಾರ್ಹ ನಿರ್ಧಾರವಾಗಿದೆ.
ಲಸಿಕೆಯ ಕೊರತೆ:
ಈ ನಡುವೆ, 18 ವರ್ಷದೊಳಗಿನ ಮಕ್ಕಳಿಗೆ ಈಗಿನ್ನೂ ಕೋವಿಡ್ ಸೋಂಕು ನಿರೋಧಕ ಲಸಿಕೆ ಲಬ್ಯವಾಗಿಲ್ಲ. ಹಾಗಾಗಿ ಶಾಲಾ ಮಕ್ಕಳು ಲಸಿಕೆ ಹಾಕಿಸಿಕೊಂಡಿಲ್ಲ. ಹಾಗಾಗಿಯೇ ಹಲವು ತರಗತಿಗಳ ವಿದ್ಯಾರ್ಥಿಗಳ ಕೋವಿಡ್ ಪಾಸಿಟಿವ್ ವರದಿಯಿಂದ ಕಂಗಾಲಾಗಿದ್ದಾರೆ.
ಪರಿಸ್ಥಿತಿ ಹೀಗಿದ್ದರೂ ಕರ್ನಾಟಕ ಸರ್ಕಾರವು 1ನೇ ತರಗತಿಯಿಂದಲೇ ಶಾಲೆಗಳನ್ನು ಆರಂಭಿಸುವ ಕಸರತ್ತಿನಲ್ಲಿ ತೊಡಗಿರುವುದು ವಿಪರ್ಯಾಸ.
ಈ ಮೂಲಕ ತಮ್ಮಲ್ಲಿ ಕಳಕಳಿಯ ವಿನಂತಿ ಏನೆಂದರೆ, ಕರ್ನಾಟಕದಲ್ಲಿ ವಿಷಮ ಪರಿಸ್ಥಿತಿ ಮುಂದುವರಿದಿರುವುದರಿಂದ ಪ್ರಾಥಮಿಕ ಶಾಲೆಗಳು ಆರಂಭಿಸದಂತೆ ಕ್ರಮ ಕೈಗೊಳ್ಳಬೇಕು. ಎಲ್ಲಾ ಮಕ್ಕಳಿಗೆ ಕೋವಿಡ್ 19 ವೈರಾಣು ಸೋಂಕು ನಿರೋಧಕ ಲಸಿಕೀಕರಣ ಪೂರ್ಣಗೊಳ್ಳುವ ವರೆಗೂ ಪ್ರಾಥಮಿಕ ಶಾಲೆಗಳ ಆರಂಭಕ್ಕೆ ಅವಕಾಶ ನೀಡಬಾರದೆಂದು ಸಿಟಿಜನ್ ರೈಟ್ಸ್ ಫೌಂಡೇಶನ್ ಸಿಎಂ, ಶಿಕ್ಷಣ ಸಚಿವರು ಹಾಗೂ ಆರೋಗ್ಯ ಸಚಿವರಿಗೆ ಪತ್ರ ಬರೆದಿದೆ.