ಬೆಂಗಳೂರು: ದೇಶದ ಹಿರಿಯ ರಾಜಕೀಯ ಮುತ್ಸದ್ದಿ ದೇವೇಗೌಡರ ಬಗ್ಗೆ ಕಾಂಗ್ರೆಸ್‌ನ ಮಾಜಿ ಶಾಸಕರು ನೀಡಿದ್ದಾರೆನ್ನಲಾದ ಆಕ್ಷೇಪಾರ್ಹ ಹೇಳಿಕೆ ಬಗ್ಗೆ ಸಾರ್ವಜನಿಕ ವಲಯದಲ್ಲಿ ಆಕ್ರೋಶ ಸ್ಫೋಟಗೊಂಡಿದೆ. ಈ ಹೇಳಿಕೆಯ ಆರೋಪ ಬಗ್ಗೆ ವ್ಯಾಪಕ ಟೀಕೆ, ಆಕ್ರೋಶ ವ್ಯಕ್ತವಾಗುತ್ತಿದ್ದಂತೆಯೇ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಕೂಡಾ ಅಸಮಾಧಾನ ಹೊರಹಾಕಿದ್ದಾರೆ. ಈ ಬೆಳವಣಿಗೆ ಕಾಂಗ್ರೆಸ್ ಪಕ್ಷಕ್ಕೂ ಮುಜುಗರದ ಸನ್ನಿವೇಶವನ್ನು ತಂದೊಡ್ಡಿದೆ.
ರಾಜಣ್ಣ ಅವರು ಕ್ಷಮೆಯಾಚಿಸಬೇಕೆಂದು ಸ್ವತಃ ಡಿಕೆಶಿ ಅವರೇ ಹೇಳಿದ್ದರಿಂದ ಅದೇ ಪಕ್ಷದ ಇತರ ನಾಯಕರು ಕೂಡಾ ಪರಿಸ್ಥಿತಿ ಬಗ್ಗೆ ಮತ್ತಷ್ಟು ಚಿಂತಾಕ್ರಾಂತರಾಗಿದ್ದಾರೆ.
ಕೆ.ಎನ್ ರಾಜಣ್ಣ ಅವರು ಹಿರಿಯ ನಾಯಕರಾದ ದೇವೇಗೌಡರ ಬಗ್ಗೆ ಆಡಿದ ಮಾತನ್ನು ಕಾಂಗ್ರೆಸ್ ಪಕ್ಷ ಖಂಡಿಸುತ್ತದೆ.
ಸಮಾಜ ಹಾಗೂ ದೇಶಕ್ಕೆ ಅಪಾರ ಸೇವೆ ಸಲ್ಲಿಸಿರುವ ಹಿರಿಯ ನಾಯಕರ ಬಗ್ಗೆ ಇಂತಹ ಹೇಳಿಕೆ ಸರಿಯಲ್ಲ.
ದೇವೇಗೌಡರು ಪ್ರಧಾನಿಯಾಗಲು ಈ ಹಿಂದೆ ಕಾಂಗ್ರೆಸ್ ಪಕ್ಷ ಬೆಂಬಲ ನೀಡಿತ್ತು. ನಮಗೆ ಅವರ ಬಗ್ಗೆ ಅಪಾರ ಗೌರವವಿದೆ.
– @DKShivakumar pic.twitter.com/NkXW9Vyc0d— Karnataka Congress (@INCKarnataka) July 1, 2022
ಈ ನಡುವೆ ದೇವೇಗೌಡರ ಸಾವಿನ ಬಗ್ಗೆ ಸಿದ್ದರಾಮಯ್ಯ ಬಣದಲ್ಲಿ ಈ ಹಿಂದೆಯೇ ಮಾತುಗಳು ಪ್ರತಿಧ್ವನಿಸಿತ್ತು ಎಂದು ಕುಮಾರಸ್ವಾಮಿ ಗಂಭೀರ ಆರೋಪ ಮಾಡಿದ್ದಾರೆ. ಈ ಬೆಳವಣಿಗೆ ನಂತರ ರಾಜಣ್ಣ ಬಗ್ಗೆ ಸಿದ್ದರಾಮಯ್ಯ ಅವರ ನಿಲುವೇನು ಏಂಬುದೂ ರಾಜಕಾರಣದಲ್ಲಿನ ಕುತೂಹಲ.
ಕೆ.ಎನ್ ರಾಜಣ್ಣ ಹೇಳಿಕೆ ಖಂಡಿಸಿ ತುಮಕೂರು, ರಾಮನಗರ ಸಹಿತ ರಾಜ್ಯದ ವಿವಿಧೆಡೆ ಸರಣಿ ಪ್ರತಿಭಟನೆಗಳು ನಡೆದವು. ರಾಮನಗರದಲ್ಲಿ ಪ್ರತಿಭಟನೆ ನಡೆಸಿದ ಜೆಡಿಎಸ್ ಕಾರ್ಯಕರ್ತರು ರಾಜಣ್ಣ ವಿರುದ್ಧ ಕಿಡಿಕಾರಿದರು.
ಐಜೂರು ವೃತ್ತದಲ್ಲಿ ಜಮಾಯಿಸಿದ ದೇವೇಗೌಡರ ಅಭಿಮಾನಿಗಳು, ರಾಜಣ್ಣ ಭಾವಚಿತ್ರಕ್ಕೆ ಬೆಂಕಿ ಹಚ್ಚಿ ಸಿಟ್ಟು ಹೊರಹಾಕಿದರು. ಹೆಚ್.ಡಿ.ದೇವೇಗೌಡರು ನಾಡಿಗೆ ಕೊಟ್ಟ ಕೊಡುಗೆ ಅಪಾರ, ಅವರ ವಿಚಾರವಾಗಿ ಇಷ್ಟು ಕೀಳಾಗಿ ಮಾತನಾಡಬಾರದು. ಅವರ ಹಿರಿತನಕ್ಕೆ ಎಲ್ಲರೂ ಗೌರವ ಕೊಡಬೇಕು. ಅವರ ಕುರಿತ ಹೇಳಿಕೆ ಕ್ಷಮೆಗೂ ಅರ್ಹವಲ್ಲ ಎಂದ ನಾಯಕರು, ಮುಂದಿನ ದಿನಗಳಲ್ಲಿ ಕೆ.ಎನ್.ರಾಜಣ್ಣಗೆ ಮಧುಗಿರಿಯಲ್ಲೆ ತಕ್ಕ ಉತ್ತರ ಸಿಗಲಿದೆ ಎಂದರು.
ಅನಿತಾ ಕುಮಾರಸ್ವಾಮಿ ಹಿಡಿಶಾಪ
ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡರ ಬಗ್ಗೆ ಆಕ್ಷೇಪಾರ್ಹ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿರುವ ಶಾಸಕಿ ಅನಿತಾ ಕುಮಾರಸ್ವಾಮಿ, ಆಕ್ಷೇಪಾರ್ಹ ಹೇಳಿಕೆ ನೀಡಿದವರು ದೇವೇಗೌಡರ ಕಾಲಿನ ಧೂಳಿಗೆ ಸಮನಿಲ್ಲದ ವ್ಯಕ್ತಿ, ಆಚಾರವಿಲ್ಲದ ನಾಲಿಗೆ ಅವರದ್ದು ಎಂದಿದ್ದಾರೆ. ಅವರ ಬುದ್ಧಿಯನ್ನು ನೋಡಿಯೇ ಮಧುಗಿರಿ ಜನ ಅವರನ್ನು ಸೋಲಿಸಿದ್ದಾರೆ ಎಂದು ಅನಿತಾ ಕುಮಾರಸ್ವಾಮಿ ವಾಗ್ದಾಳಿ ನಡೆಸಿದ್ದಾರೆ.






































































