ಬೆಂಗಳೂರು: ನಮ್ಮ ಸರಕಾರದ ಮೂರು ವರ್ಷಗಳ ಸಾರ್ಥಕ ಸೇವೆ ಮತ್ತು ಸಬಲೀಕರಣದ ಅನಾವರಣ ದೊಡ್ಡಬಳ್ಳಾಪುರದಲ್ಲಿ ನಡೆದಿದೆ ಎಂದು ಅರೋಗ್ಯ ಸಚಿವ ಡಾ.ಸುಧಾಕರ್ ಹೇಳಿದ್ದಾರೆ. .
ರಾಜ್ಯ ಬಿಜೆಪಿ ಸರ್ಕಾರದ 3 ವರ್ಷಗಳ ಸಾಧನೆಯ ಸಂಬಂಧ ಇಂದು ದೊಡ್ಡಬಳ್ಳಾಪುರದ ಬಳಿ “ಜನಸ್ಪಂದನ” ಕಾರ್ಯಕ್ರಮದಲ್ಲಿ ಸಚಿವ ಡಾ. ಸುಧಾಕರ್ ಪ್ರಾಸ್ತಾವಿಕ ಮಾತನಾಡಿ, ಇದು ವ್ಯಕ್ತಿಯ ವೈಭವೀಕರಣ ಕಾರ್ಯಕ್ರಮ ಅಲ್ಲ. ನಮ್ಮ ಸರಕಾರದ ಮೂರು ವರ್ಷಗಳ ಸಾರ್ಥಕ ಸೇವೆ ಮತ್ತು ಸಬಲೀಕರಣದ ಅನಾವರಣ ಇಲ್ಲಿ ನಡೆದಿದೆ ಎಂದು ತಿಳಿಸಿದರು. ರೈತರ ಮಕ್ಕಳಿಗೆ ವಿದ್ಯಾಸಿರಿ ಯೋಜನೆಯನ್ನು ಬೊಮ್ಮಾಯಿಯವರ ಸರಕಾರ ಜಾರಿಗೊಳಿಸಿದೆ. ರಾಜ್ಯದಲ್ಲಿ 12 ಕೋಟಿ ಕೋವಿಡ್ ಲಸಿಕೆ ಕೊಡಲಾಗಿದೆ. ವಿವಿಧ ಯೋಜನೆಗಳ ಮೂಲಕ ಮಾಡಿದ ಸಾಧನೆಯನ್ನು ಇಲ್ಲಿ ತಿಳಿಸುವ ಕಾರ್ಯ ಮಾಡುತ್ತಿದ್ದೇವೆ ಎಂದು ವಿವರಿಸಿದರು.
ಅಮೃತ ಮಹೋತ್ಸವದಡಿ ಮಾಡಿದ ಸಾಧನೆಯನ್ನೂ ಅವರು ತಿಳಿಸಿದರು. 75 ಯೋಜನೆಗಳನ್ನು ಮನೆಮನೆಗೆ ತಲುಪಿಸುವ ಕಾರ್ಯವನ್ನು ರಾಜ್ಯ ಸರಕಾರ ಮಾಡಿದೆ. 3 ಕೋಟಿ ಮನೆಗಳನ್ನು ನೀಡಲಾಗುತ್ತಿದೆ. ಆದ್ದರಿಂದ ಇದು ಜನರ ಉತ್ಸವ ಎಂದು ವಿಶ್ಲೇಷಿಸಿದರು.
ಸಚಿವ ಗೋವಿಂದ ಕಾರಜೋಳ ಅವರು ಮಾತನಾಡಿ, ದೇಶವನ್ನು ಇಬ್ಭಾಗ ಮಾಡಿದ ಕಾಂಗ್ರೆಸ್ ಪಕ್ಷದವರು ಮತ್ತು ರಾಹುಲ್ ಗಾಂಧಿ ಅವರ ಮನೆತನದವರು ತಮ್ಮ ಕೃತ್ಯಕ್ಕೆ ಉತ್ತರ ಹೇಳಬೇಕು ಎಂದು ಆಗ್ರಹಿಸಿದರು. ಮತಬ್ಯಾಂಕ್ ರಾಜಕಾರಣಕ್ಕಾಗಿ ಜನರಿಗೆ ಕಾಂಗ್ರೆಸ್ ಮೋಸ ಮಾಡುತ್ತಿದೆ ಎಂದು ಟೀಕಿಸಿದರು.
ಕಾಂಗ್ರೆಸ್ನವರು ಬಡವರು, ದೀನದಲಿತರ ಬಗ್ಗೆ ಕಳಕಳಿ ಹೊಂದಿಲ್ಲ. ಬಡವರ ಬಗ್ಗೆ ಅವರದು ಮೊಸಳೆ ಕಣ್ಣೀರು ಅಷ್ಟೇ. ಸಿದ್ದರಾಮಯ್ಯನವರೂ ಸಿಎಂ ಆಗಿದ್ದರೂ ಜನರಿಗೆ ಉತ್ತಮ ಕೆಲಸಗಳನ್ನು ಮಾಡಿಲ್ಲ ಎಂದು ಆಕ್ಷೇಪಿಸಿದರು. ಆದರೆ, ಬಡವರ ಪರವಾಗಿ ಬಿಜೆಪಿ ಸರಕಾರ ಕೆಲಸ ಮಾಡುತ್ತಿದೆ ಎಂದು ವಿವರಿಸಿದರು. ನಮ್ಮ ಪಕ್ಷ ಸಾಮಾಜಿಕ ನ್ಯಾಯಕ್ಕಾಗಿ ಬದ್ಧತೆ ಹೊಂದಿದೆ ಎಂದರು.
ಸಚಿವ ಬಿ.ಶ್ರೀರಾಮುಲು ಅವರು ಮಾತನಾಡಿ, ಮಂಗಳೂರಿನ ಪ್ರಧಾನಿಯವರು ಪಾಲ್ಗೊಂಡ ಸಮಾವೇಶದ ಮಾದರಿಯಲ್ಲೇ ಇದೊಂದು ದೊಡ್ಡ ಸಮಾವೇಶ. ಆದರೆ, ಕಾಂಗ್ರೆಸ್ ಪಕ್ಷದವರಿಂದ ಮೊಸರಿನಲ್ಲಿ ಕಲ್ಲು ಹುಡುಕುವ ಕಾರ್ಯ ನಡೆಯುತ್ತಿದೆ ಎಂದು ಆಕ್ಷೇಪಿಸಿದರು.
ಕಾಂಗ್ರೆಸ್ ಪಕ್ಷವು ದೇಶ, ರಾಜ್ಯ ಮತ್ತು ಧರ್ಮ- ಜಾತಿಗಳನ್ನು ಒಡೆಯುವ ಕೆಲಸವನ್ನೇ ಮಾಡಿದೆ. ಈಗ ಭಾರತ್ ಜೋಡೋ ಕೆಲಸ ಮಾಡುತ್ತಿದೆ ಎಂದು ಅವರು ಟೀಕಿಸಿದರು. ಕಾಂಗ್ರೆಸ್ಸಿಗರು ಪಕ್ಷವನ್ನು ಮೊದಲು ಜೋಡಿಸಬೇಕು. ಪ್ರಧಾನಿಯವರನ್ನು ಟೀಕಿಸುವುದು ಸರ್ವಥಾ ಸಲ್ಲದು ಎಂದು ಆಕ್ಷೇಪಿಸಿದರು. ಪಕ್ಷವು ಅನೇಕ ಸುಧಾರಣೆಗಳನ್ನು ಜಾರಿಗೊಳಿಸಿದೆ ಎಂದು ಅವರು ತಿಳಿಸಿದರು.
ಸಚಿವ ಬಿ.ಸಿ.ಪಾಟೀಲ್ ಅವರು ಮಾತನಾಡಿ, ಇದು ಅಸೆಂಬ್ಲಿ ಚುನಾವಣೆಗೆ ಬಿಜೆಪಿಯ ರಣಕಹಳೆ ಇದು ಎಂದರು. ಕೃಷಿ ಸಚಿವಾಲಯವು ಮಾಡಿದ ಸಾಧನೆಯನ್ನು ಅವರು ವಿವರಿಸಿದರು.







































































