ನವದೆಹಲಿ: ‘ಆಪರೇಷನ್ ಸಿಂದೂರ್’ ಭಾರತದ ಆಧುನಿಕ ರಕ್ಷಣಾ ಸನ್ನದ್ಧತೆ ಹಾಗೂ ಸ್ವದೇಶಿ ರಕ್ಷಣಾ ತಂತ್ರಜ್ಞಾನದ ಸಾಮರ್ಥ್ಯವನ್ನು ಸಾಬೀತುಪಡಿಸಿದೆ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹೇಳಿದ್ದಾರೆ.
ನವದೆಹಲಿದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಆಕಾಶ್ ಕ್ಷಿಪಣಿ ವ್ಯವಸ್ಥೆ, ಆಕಾಶ್ ತೀರ್ ವಾಯು ರಕ್ಷಣಾ ವ್ಯವಸ್ಥೆ ಹಾಗೂ ಬ್ರಹ್ಮೋಸ್ ಕ್ಷಿಪಣಿ ಕಾರ್ಯಾಚರಣೆಯಲ್ಲಿ ಪ್ರಮುಖ ಪಾತ್ರ ವಹಿಸಿವೆ ಎಂದು ತಿಳಿಸಿದರು. ಭಯೋತ್ಪಾದನೆ ವಿರುದ್ಧ ಸರ್ಕಾರದ ‘ಶೂನ್ಯ ಸಹಿಷ್ಣುತೆ’ ನೀತಿ ಮುಂದುವರಿಯಲಿದೆ ಎಂದರು.
2025-26ರಲ್ಲಿ ದೇಶದ ರಕ್ಷಣಾ ಉತ್ಪಾದನೆ ₹1.78 ಲಕ್ಷ ಕೋಟಿ ದಾಖಲೆಯ ಮಟ್ಟ ತಲುಪಿದ್ದು, ರಕ್ಷಣಾ ರಫ್ತು ₹38,000 ಕೋಟಿ ದಾಟಿದೆ ಎಂದು ಸಿಂಗ್ ಹೇಳಿದರು. ಈ ವರ್ಷ ಉತ್ಪಾದನೆಯನ್ನು ₹2 ಲಕ್ಷ ಕೋಟಿಗೆ ಹಾಗೂ 2029ರ ವೇಳೆಗೆ ₹3 ಲಕ್ಷ ಕೋಟಿಗೆ ಹೆಚ್ಚಿಸುವ ಗುರಿ ಹೊಂದಲಾಗಿದೆ. ಇದೇ ಅವಧಿಯಲ್ಲಿ ರಕ್ಷಣಾ ರಫ್ತನ್ನು ₹50,000 ಕೋಟಿಗೆ ಏರಿಸುವ ಉದ್ದೇಶವೂ ಇದೆ.

ರಕ್ಷಣಾ ಕ್ಷೇತ್ರದ ನವೋದ್ಯಮಗಳು ಹಾಗೂ ಎಂಎಸ್‌ಎಂಇಗಳಿಂದ ₹2,400 ಕೋಟಿಗೂ ಹೆಚ್ಚು ಮೌಲ್ಯದ ಖರೀದಿಗೆ ಅನುಮೋದನೆ ನೀಡಲಾಗಿದೆ. ಹೊಸ ತಂತ್ರಜ್ಞಾನ ಅಭಿವೃದ್ಧಿಗೆ ₹1,500 ಕೋಟಿಗೂ ಹೆಚ್ಚು ಯೋಜನೆಗಳಿಗೆ ಮಂಜೂರಾತಿ ನೀಡಲಾಗಿದ್ದು, 676 ಸ್ಟಾರ್ಟ್‌ಅಪ್‌ಗಳು ಮತ್ತು ನಾವೀನ್ಯಕಾರರು iDEX ಯೋಜನೆಯೊಂದಿಗೆ ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ಹೇಳಿದರು.
ಉತ್ತರ ಪ್ರದೇಶ ಮತ್ತು ತಮಿಳುನಾಡಿನ ರಕ್ಷಣಾ ಕೈಗಾರಿಕಾ ಕಾರಿಡಾರ್‌ಗಳಿಗೆ ₹70,000 ಕೋಟಿ ಹೂಡಿಕೆ ಪ್ರಸ್ತಾಪವಾಗಿದ್ದು, ಈಗಾಗಲೇ ಸುಮಾರು ₹10,000 ಕೋಟಿ ಹೂಡಿಕೆಯಾಗಿದೆ ಎಂದು ರಾಜನಾಥ್ ಸಿಂಗ್ ತಿಳಿಸಿದರು.







































































