ಬೆಂಗಳೂರು: ರಾಜ್ಯದಲ್ಲಿ ಮತ್ತೆ ಬಿಜೆಪಿಯನ್ನು ಅಧಿಕಾರಕ್ಕೆ ತರುವ ಸಂಕಲ್ಪ ನಮ್ಮದಾಗಬೇಕು ಎಂದು ಕೇಂದ್ರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವೆ ಶ್ರೀಮತಿ ಸ್ಮೃತಿ ಇರಾನಿ ಬಿಜೆಪಿ ಕಾರ್ಯಕರ್ತರಿಗೆ ಕರೆ ನೀಡಿದ್ದಾರೆ.
ದೊಡ್ಡಬಳ್ಳಾಪುರದಲ್ಲಿ ರಾಜ್ಯ ಬಿಜೆಪಿ ಸರ್ಕಾರದ 3 ವರ್ಷಗಳ ಸಾಧನೆ ಕುರಿತು ನಡೆದ ಜನಸ್ಪಂದನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷದ ಅಸಮರ್ಪಕ ಆಡಳಿತವನ್ನು ಜನತೆ ಪ್ರಶ್ನಿಸಬೇಕು. ಕರ್ನಾಟಕದ ಬಗ್ಗೆ ಪಕ್ಷಪಾತದ ಧೋರಣೆಯನ್ನು ಜನರು ಪ್ರಶ್ನಿಸಬೇಕು ಎಂದರಲ್ಲದೆ, ಮೋದಿ ಮತ್ತು ಬಿಜೆಪಿ ಸರಕಾರವು ಕರ್ನಾಟಕಕ್ಕೆ ಗರಿಷ್ಠ ಅನುದಾನ ನೀಡಿದೆ ಎಂದು ವಿವರಿಸಿದರು.
ರಸ್ತೆ ಮತ್ತು ಹೆದ್ದಾರಿ ನಿರ್ಮಾಣಕ್ಕೆ ಗರಿಷ್ಠ ಅನುದಾನವನ್ನು ಬಿಜೆಪಿಯ ಕೇಂದ್ರ ಸರಕಾರ ನೀಡಿದೆ. ಕೇಂದ್ರದ ವಿವಿಧ ಯೋಜನೆಗಳಡಿ ರಾಜ್ಯಕ್ಕೆ ಕೊಟ್ಟ ಕೊಡುಗೆ ಅನನ್ಯ ಎಂದು ಅವರು ವಿವರ ಕೊಟ್ಟರು. ಕಾಂಗ್ರೆಸ್ ಆಡಳಿತದಲ್ಲಿ ಇದ್ದಾಗ ರೈಲ್ವೆ ಇಲಾಖೆಯೂ ಕರ್ನಾಟಕವನ್ನು ಕಡೆಗಣಿಸಿತ್ತು. ಆದರೆ, ಬಿಜೆಪಿ ಗರಿಷ್ಠ ಅನುದಾನವನ್ನು ನೀಡಿದೆ ಎಂದರು.
ಕರ್ನಾಟಕಕ್ಕೆ ಗರಿಷ್ಠ ಎಫ್‍ಡಿಐ ಲಭಿಸಿದ್ದು, ಇದಕ್ಕಾಗಿ ಮುಖ್ಯಮಂತ್ರಿಗಳನ್ನು ಅಭಿನಂದಿಸುವುದಾಗಿ ತಿಳಿಸಿದರು. ಕರ್ನಾಟಕ ಸೆಮಿ ಕಂಡಕ್ಟರ್ ಹಬ್ ಆಗುತ್ತಿದೆ ಎಂದು ಮೆಚ್ಚುಗೆ ಸೂಚಿಸಿದರು. ರಾಹುಲ್ ಗಾಂಧಿ ಭಾರತ್ ಜೋಡೋ ಮಾತನಾಡುತ್ತಾರೆ. ಆದರೆ, ಕಾಂಗ್ರೆಸ್ ಪಕ್ಷವು ಸ್ವಾತಂತ್ರ್ಯ ಹೋರಾಟಗಾರರನ್ನು ಕಡೆಗಣಿಸಿತ್ತು ಎಂದು ಟೀಕಿಸಿದರು.
2009 ಹಾಗೂ 2010 ರ ಕೇಂದ್ರ ಕಾಂಗ್ರೆಸ್ ಅವಧಿಯಲ್ಲಿ ರಾಜ್ಯಕ್ಕೆ ಬಿಡುಗಡೆ ಮಾಡಿದ ಮೊತ್ತ 2000 ಕೋಟಿ ರೂ. ಮಾತ್ರ. ಆದರೆ ಮೋದಿ ಸರ್ಕಾರ ಒಂದೇ ವರ್ಷದಲ್ಲಿ ಕರ್ನಾಟಕಕ್ಕೆ 5000 ಕೋಟಿ ರೂ. ಬಿಡುಗಡೆ ಮಾಡಿ ರಾಜ್ಯದ ಅಭಿವೃದ್ಧಿಗೆ ಸ್ಪಂದಿಸಿದ್ದಾರೆ – ಶ್ರೀಮತಿ @smritiirani, ಕೇಂದ್ರ ಸಚಿವೆ.#JanaSpandana pic.twitter.com/h7BXgYaiFq
— BJP Karnataka (@BJP4Karnataka) September 10, 2022
ಪ್ರಧಾನಿಯವರು ರಾಜಪಥ ಹೆಸರನ್ನು ಕರ್ತವ್ಯಪಥ ಎಂದು ಬದಲಿಸಿದ್ದಾರೆ. ಆದರೆ, ಗಾಂಧಿ ಕುಟುಂಬವು ಗುಲಾಮತನದ ಸಂಕೇತವನ್ನೇ ಇಟ್ಟುಕೊಂಡಿತ್ತು ಎಂದು ಆಕ್ಷೇಪ ಸೂಚಿಸಿದರು. ಕೋವಿಡ್ ಲಸಿಕೆ ಉಚಿತವಾಗಿ ನೀಡಿದ ವಿಚಾರವನ್ನೂ ಅವರು ವಿವರಿಸಿದರು. ಆದರೆ, ಗಾಂಧಿ ಕುಟುಂಬವು ಜನರಿಗೆ ಲಸಿಕೆ ಪಡೆಯದಂತೆ ತಿಳಿಸುವ ಷಡ್ಯಂತ್ರ ಮಾಡಿತ್ತು ಎಂದು ಟೀಕಿಸಿದರು. ಭಾರತ ಇಬ್ಬಾಗ ಮಾಡುವ ಘೋಷಣೆ ಕೂಗಿದ ವ್ಯಕ್ತಿಗಳನ್ನು ಜೊತೆಗೂಡಿಸಿಕೊಂಡು ರಾಹುಲ್ ಅವರು ತಮ್ಮ ಯಾತ್ರೆ ಮಾಡುತ್ತಿದ್ದಾರೆ ಎಂದು ಆಕ್ಷೇಪಿಸಿದರು. ಇದು ರಾಷ್ಟ್ರದ್ರೋಹ ಎಂದು ತಿಳಿಸಿದರು. ರಾಹುಲ್ ಗಾಂಧಿ ಕುಟುಂಬವು ಅಧಿಕಾರದಾಹವನ್ನು ಹೊಂದಿದೆ ಎಂದು ಟೀಕಿಸಿದರು.
ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ಕಾಂಗ್ರೆಸ್ ಚಮಚಾಗಳು ಅವಮಾನ ಮಾಡಿದ್ದರು ಎಂದು ಅವರು ನುಡಿದರು. ಕಾಂಗ್ರೆಸ್ ಪಕ್ಷದ ಚಿಂತನೆಯನ್ನು ಇಲ್ಲಿನ ಜನರು ಪ್ರಶ್ನಿಸಬೇಕು ಎಂದು ತಿಳಿಸಿದರು.
























































