ಬೆಂಗಳೂರು: ಕೊರೋನಾ ಸಂಕಟ ಕಾಲದಲ್ಲಿ ಹಲವಾರು ಜನಸ್ನೇಹೀ ಕ್ರಮಗಳ ಮೂಲಕ ಕರಾವಳಿ ಜಿಲ್ಲೆಯ ಜನಪ್ರಿಯ ಶಾಸಕರೆನಿಸಿರುವ ರಾಜೇಶ್ ನಾಯ್ಕ್ ಉಳಿಪ್ಪಾಡಿಯವರು ಇದೀಗ ಕ್ಷೇತ್ರದ ಜನಸಾಮಾನ್ಯರ ಅನುಕೂಲಕ್ಕಾಗಿ ಮತ್ತೊಂದು ಯಶಸ್ವಿ ಹೆಜ್ಜೆ ಇಟ್ಟಿದ್ದಾರೆ. ಹಳ್ಳಿಗಾಡಿನ ಜನರಿಗೆ ಅನುಕೂಲವಾಗುವಂತೆ ಸಂಚಾರಿ ಆಸ್ಪತ್ರೆ ವ್ಯವಸ್ಥೆ ರೂಪಿಸಲು ರಾಜೇಶ್ ನಾಯ್ಕ್ ಮುಂದಾಗಿದ್ದಾರೆ. ಈ ಸಂಬಂಧ ಅವರು ಬೆಂಗಳೂರಿನಲ್ಲಿಂದು ನಡೆಸಿದ ಕಸರತ್ತು ಗಮನಸೆಳೆದಿದೆ.
ಕೊವಿಡ್ ಸೋಂಕು ಉಲ್ಬಣಗೊಂಡ ಸಂದರ್ಭದಲ್ಲಿ ಕೆಸ್ಸಾರ್ಟಿಸಿ ನಿಗಮವು ‘ಐಸಿಯು ಆನ್ ವೀಲ್’ ಎಂಬ ಪರಿಕಲ್ಪನೆಯಡಿ ಸಂಚಾರಿ ಆಸ್ಪತ್ರೆಯನ್ನು ಸಜ್ಜುಗೊಳಿಸಿದೆ. ಈ ‘ಬಸ್ ಆಸ್ಪತ್ರೆ’ಯನ್ನು ಬಂಟ್ವಾಳ ಕ್ಷೇತ್ರದ ಜನರ ಅನುಕೂಲಕ್ಕಾಗಿ ವ್ಯವಸ್ಥೆಗೊಳಿಸಲು ಶಾಸಕ ರಾಜೇಶ್ ನಾಯ್ಕ್ ಮುಂದಾಗಿದ್ದಾರೆ.
ಬಂಟ್ವಾಳ ವಿಧಾನಸಭಾ ಕ್ಷೇತ್ರದಲ್ಲಿ ಬಹುಪಾಲು ಉರುಗಳು ‘ಹಳ್ಳಿ’ ಎಂಬ ಹಣೆಪಟ್ಟಿನಿಂದ ಹೊರಬಂದಿಲ್ಲ. ಇಂತಹಾ ಊರುಗಳ ಜನರಿಗೆ ಆಸ್ಪತ್ರೆ ಎಂಬ ವ್ಯವಸ್ಥೆ ಬಹಳಷ್ಟು ದೂರ ಇದೆ. ಈ ಅಂತರವನ್ನು ಹೋಗಲಾಡಿಸುವ ನಿಟ್ಟಿನಲ್ಲಿ ಅನೇಕ ಗ್ರಾಮಗಳಿಗೆ ರಾಜೇಶ್ ನಾಯ್ಕ್ ಅವರು ಈಗಾಗಲೇ ಸ್ವಂತ ಖರ್ಚಿನಲ್ಲೇ ಆಂಬ್ಯುಲೆನ್ಸ್ ಕಲ್ಪಿಸಿ ಎಲ್ಲರ ಗಮನಕೇಂದ್ರೀಕರಿಸಿದ್ದರು. ಇದೀಗ ಈ ಹಳ್ಳಿಗಳಿಗೆ ಆಸ್ಪತ್ರೆಯೇ ತಲುಪಬೇಕು ಎಂಬ ಪ್ರಯತ್ನ ಅವರದ್ದು.
ಈ ಸಂಬಂಧ ಸಾರಿಗೆ ಸಚಿವರೂ ಆದ ಉಪ ಮುಖ್ಯಮಂತ್ರಿ ಲಕ್ಷ್ಮಣ್ ಸವದಿ ಅವರನ್ನು ಶಾಸಕ ರಾಜೇಶ್ ನಾಯ್ಕ್ ನೇತೃತ್ವದ ಪ್ರಮುಖರ ನಿಯೋಗ ಬೇಟಿ ಮಾಡಿ ಮಾತುಕತೆ ನಡೆಸಿತು.
ರಾಜ್ಯ ಸಾರಿಗೆ ಸಂಸ್ಥೆಯು ಕೋವಿಡ್ ಆರೈಕೆಗಾಗಿ ಸಿದ್ದಪಡಿಸಿರುವ ಐಸಿಯು ಬೆಡ್ ವ್ಯವಸ್ಥೆಯ ಬಸ್ಸಿನ ಬಗ್ಗೆ ಸಚಿವರಿಂದ ಶಾಸಕರು ಮಾಹಿತಿ ಪಡೆದರು. ಶಾಸಕರ ಪ್ರದೇಶಾಭಿವೃದ್ಧಿ ಅನುದಾನದ ಮೂಲಕ ಬಂಟ್ವಾಳ ಕ್ಷೇತ್ರಕ್ಕೆ ಈ ಬಸ್ಸನ್ನು ಖರೀದಿ ಮಾಡುವ ಬಗ್ಗೆ ರಾಜೇಶ್ ನಾಯ್ಕ್ ಅವರು ಸಚಿವರಲ್ಲಿ ಮಾತುಕತೆ ನಡೆಸಿದರು. ಇದಕ್ಕೆ ಸಕಲ ರೀತಿ ಸಹಕಾರ ನೀಡುವುದಾಗಿ ಸಚಿವರೂ ಭರವಸೆ ನೀಡಿದರು.
ಇದನ್ನೂ ಓದಿ.. ಬಡವರ ಸೂರಿಗಾಗಿ ಶಾಸಕರ ಸೆಣಸಾಟ; ರಾಜೇಶ್ ನಾಯ್ಕ್ ಮನವಿಗೆ ವಸತಿ ಸಚಿವ ಸೋಮಣ್ಣ ಜೈ
ಶೀಘ್ರದಲ್ಲೇ ಈ ಐಸಿಯು ಆನ್ ವೀಲ್ ಎಂಬ ಸಂಚಾರಿ ಆಸ್ಪತ್ರೆ ಬಸ್ಸು, ಬಂಟ್ವಾಳ ಕ್ಷೇತ್ರಕ್ಕೂ ಬರಲಿದೆ. ಈ ಮೂಲಕ ಹಳ್ಳಿ ಜನರಿಗೆ ಅವರ ಊರಲ್ಲೇ ಆಸ್ಪತ್ರೆ ವ್ಯವಸ್ಥೆ ಲಭ್ಯವಾಗಲಿದೆ. ಉಪಮುಖ್ಯಮಂತ್ರಿ ಜೊತೆ ರಾಜೇಶ್ ನಾಯ್ಕ್ ನಡೆಸಿದ ಮಾತುಕತೆ ಸಂದರ್ಭದಲ್ಲಿ ಬಂಟ್ವಾಳ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಧ್ಯಕ್ಷ ದೇವಪ್ಪ ಪೂಜಾರಿ, ಬೂಡ ಅಧ್ಯಕ್ಷ ದೇವದಾಸ್ ಶೆಟ್ಟಿ ಹಾಗೂ ಪಕ್ಷದ ಪ್ರಮುಖರಾದ ಪವನ್ ಕುಮಾರ್ ಉಪಸ್ಥಿತರಿದ್ದರು.