ಬೆಅಮಗಳೂರು: ವಿಜಯಪುರ ಜಿಲ್ಲೆಯ ಕೃಷ್ಣಾ ನದಿಯ ಆಲಮಟ್ಟಿ ಮತ್ತು ಹಿಪ್ಪರಗಿ ಯೋಜನೆಯಡಿ ಮುಳುಗಡೆಯಾಗಿರುವ ಗ್ರಾಮಗಳ ಕುಟುಂಬಗಳ ಪುನರ್ವಸತಿ ಸಂಬಂಧ ಬಾಕಿ ಇರುವ ಭರವಸೆಯ ಬಗ್ಗೆ ಭರವಸೆ ಸಮಿತಿ ಅಧ್ಯಕ್ಷರಾದ ಶ್ರೀ ಕೆ ರಘುಪತಿ ಭಟ್ ಅವರ ನೇತೃತ್ವದಲ್ಲಿ ವಿಜಯಪುರ ಜಿಲ್ಲೆಯ ಆಲಮಟ್ಟಿ ಕೃಷ್ಣ ಭಾಗ್ಯ ಜಲ ನಿಗಮ ನಿಯಮಿತ ವ್ಯವಸ್ಥಾಪಕ ನಿರ್ದೇಶಕರ ಆಡಳಿತ ಕಚೇರಿ ಸಭಾಂಗಣದಲ್ಲಿ ಇಂದು ಸರ್ಕಾರಿ ಭರವಸೆಗಳ ಸಮಿತಿ ಸಭೆ ನಡೆಸಿ ಚರ್ಚಿಸಿದರು.
ಸರ್ಕಾರಿ ಭರವಸೆಗಳ ಸಮಿತಿ ಅಧ್ಯಕ್ಷ ಕೆ. ರಘುಪತಿ ಭಟ್ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ವಿಜಯಪುರ ಜಿಲ್ಲೆಯ ಕೃಷ್ಣಾ ನದಿಯ ಆಲಮಟ್ಟಿ ಮತ್ತು ಹಿಪ್ಪರಗಿ ಯೋಜನೆಯಡಿ ಮುಳುಗಡೆಯಾಗಿರುವ ಗ್ರಾಮಗಳ ಕುಟುಂಬಗಳಿಗೆ ಪುನರ್ವಸತಿ ಕಲ್ಪಿಸುವ ಕುರಿತು ಅಧಿಕಾರಿಗಳೊಂದಿಗೆ ವಿವರಗಳನ್ನು ಪಡೆದು ಸಂತ್ರಸ್ತರಿಗೆ ಸೂಕ್ತ ಪರಿಹಾರ ಕಲ್ಪಿಸುವ ಬಗ್ಗೆ ಚರ್ಚಿಸಿ ಈ ಬಗ್ಗೆ ಸಮಗ್ರ ವರದಿ ತಯಾರಿಸಿ ಸರ್ಕಾರಕ್ಕೆ ಮಂಡಿಸುವ ಬಗ್ಗೆ ನಿರ್ಣಯಿಸಲಾಯಿತು.
ಜಲಾಶಯದಲ್ಲಿ ಪ್ರವಾಸಿಗರಿಗಾಗಿ ನಿರ್ಮಿಸಿರುವ ಉದ್ಯಾನವನ, ಲೇಸರ್ ಶೋ, ಲಾಲ್ ಬಹದ್ದೂರ್ ಶಾಸ್ತ್ರಿ ಸಾಗರ, ಸಂಗೀತ ನೃತ್ಯ ಕಾರಂಜಿಯತ್ತ ಪ್ರವಾಸಿಗರನ್ನು ಆಕರ್ಷಿಸಲು ಸೂಕ್ತ ಸೌಲಭ್ಯಗಳನ್ನು ಕಲ್ಪಿಸಿ ಪ್ರವಾಸೋದ್ಯಮ ಅಭಿವೃದ್ಧಿ ಪಡಿಸುವ ಬಗ್ಗೆ ಸಲಹೆ ನೀಡಿದರು.
ಈ ಸಂದರ್ಭದಲ್ಲಿ ಆಲಮಟ್ಟಿ ಪುನರ್ವಸತಿ ಸಂತ್ರಸ್ತರು ತಮ್ಮ ಕುಂದುಕೊರತೆಗಳ ಬಗ್ಗೆ ಮನವಿ ಸಲ್ಲಿಸಿ ಸೂಕ್ತ ಪರಿಹಾರ ಕಲ್ಪಿಸುವಂತೆ ವಿನಂತಿಸಿದರು. ಸದರಿ ಸಂತ್ರಸ್ತರ ಮನವಿಯಂತೆ ಭರವಸೆಗಳ ಸಮಿತಿ ಅಧ್ಯಕ್ಷರಾದ ಶ್ರೀ ಕೆ ರಘುಪತಿ ಭಟ್ ಅವರು ತಮ್ಮ ಬೇಡಿಕೆಗಳನ್ನು ವರದಿಯಲ್ಲಿ ಸೇರಿಸಿ ಸರ್ಕಾರಕ್ಕೆ ಸಲ್ಲಿಸುವುದಾಗಿ ತಿಳಿಸಿದರು.
ಕಾಗವಾಡ ಶಾಸಕರು, ಮಾಜಿ ಸಚಿವರಾದ ಶ್ರೀಮಂತ ಬಾಳಾಸಾಹೇಬ ಪಾಟೀಲ್, ಬೈಂದೂರು ಶಾಸಕರಾದ ಸುಕುಮಾರ್ ಶೆಟ್ಟಿ, ಯಾದಗಿರಿ ಶಾಸಕರಾದ ವೆಂಕಟರೆಡ್ಡಿ ಮುದ್ನಾಳ್, ದೇವರಹಿಪ್ಪರಗಿ ಶಾಸಕರಾದ ಸೋಮನಗೌಡ ಪಾಟೀಲ್, ಜಲ ಸಂಪನ್ಮೂಲ ಇಲಾಖೆ ಕಾರ್ಯದರ್ಶಿ ಕೆ ಬಿ ಕುಲಕರ್ಣಿ, ಕರ್ನಾಟಕ ನೀರಾವರಿ ನಿಗಮ ನಿಯಮಿತ ಇದರ ವ್ಯವಸ್ಥಾಪಕ ನಿರ್ದೇಶಕರಾದ ಮಲ್ಲಿಕಾರ್ಜುನ ಬಿ. ಜಿ., ಆನಂದ ಕುಮಾರ್ ಐಪಿಎಸ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯವರು ವಿಜಾಪುರ ಜಿಲ್ಲೆ, ಕೃಷ್ಣಾ ಭಾಗ್ಯ ಜಲ ನಿಗಮದ ಮುಖ್ಯ ಇಂಜಿನಿಯರ್ ಟಿ. ಸುರೇಶ್, ಕರ್ನಾಟಕ ನೀರಾವರಿ ನಿಗಮ ನಿಯಮಿತ (ಉತ್ತರ) ವಲಯ ಬೆಳಗಾವಿ ಇಲ್ಲಿನ ಮುಖ್ಯ ಇಂಜಿನಿಯರ್ ಕೆ. ರಾಜೇಶ್, ಕೃಷ್ಣಾ ಭಾಗ್ಯ ಜಲ ನಿಗಮದ ಅಧೀಕ್ಷಕ ಅಭಿಯಂತರರಾದ ಡಿ. ಬಸವರಾಜ್, ಹಿಪ್ಪರಗಿ ಪುನರ್ವಸತಿ ಮತ್ತು ಪುನರ್ ನಿರ್ಮಾಣ ವೃತ್ತ ಅಥಣಿ ಅಧೀಕ್ಷಕ ಅಭಿಯಂತರರಾದ ಡಿ. ಆರ್. ರಾಥೋಡ್, ಬಾಗಲಕೋಟೆ ಅಪರ ಜಿಲ್ಲಾಧಿಕಾರಿ ಮಹಾದೇವ ಎ. ಮುರಗಿ, ಬಾಗಲಕೋಟೆ ವಿಶೇಷ ಜಿಲ್ಲಾಧಿಕಾರಿ ಸೋಮಲಿಂಗ ಗೆಣ್ಣೂರ, ಶ್ವೇತಾ ಎಂ. ಬಿ. ಸಹಾಯಕ ಆಯುಕ್ತರು ಬಾಗಲಕೋಟೆ, ಸಂತೋಷ ಎಸ್. ಕಾನಗೌಡ ಸಹಾಯಕ ಆಯುಕ್ತರು ಚಿಕ್ಕೋಡಿ, ಬಾಗಲಕೋಟೆ ಜಿಲ್ಲಾ ಪಂಚಾಯತ್ ಜಂಟಿ ಕಾರ್ಯದರ್ಶಿ ಬಸರಿಗಿಡದ್, ಬಿಜಾಪುರ ಜಿಲ್ಲಾ ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ ರಾಹುಲ್ ಸಿಂಧೆ ಹಾಗೂ ಇತರ ಅಧಿಕಾರಿಗಳು ಉಪಸ್ಥಿತರಿದ್ದರು.
























































