ಬೆಂಗಳೂರು: ರಾಜ್ಯದಲ್ಲಿ ಹಿಜಬ್ ವಿವಾದ ಭುಗಿಲೆದ್ದಿದ್ದು, ಹಲವು ಜಿಲ್ಲೆಗಳಲ್ಲಿಂದು ಪ್ರತಿಭಟನೆಯ ಹೈಡ್ರಾಮಗಳೇ ನಡೆದಿವೆ. ಹಲವೆಡೆ ಪರಿಸ್ಥಿತಿ ನಿಯಂತ್ರಿಸಲು ಪೊಲೀಸರು ಲಾಠಿ ಪ್ರಹಾರ ನಡೆಸಿದ್ದಾರೆ.
ಉಡುಪಿ ಕಾಲೇಜಿನಲ್ಲಿ ಶುರುವಾದ ಹಿಜಾಬ್ ವರ್ಸಸ್ ಕೇಸರಿ ಶಾಲು ಜಟಾಪಟಿ ತೀವ್ರ ಸ್ವರೂಪ ಪಡೆದುಕೊಂಡಿದೆ. ಇದೇ ಸಂದರ್ಭದಲ್ಲಿ ರಾಜ್ಯ ಸರ್ಕಾರ ಕೂಡಾ ಸಮವಸ್ತ್ರ ನಿಯಮ ಜಾರಿಗೊಳಿಸಿದೆ. ಈ ಕುರಿತಂತೆ ಪರ-ವಿರೋಧ ಚರ್ಚೆ ಸಾಗಿರುವಂತೆಯೇ ರಿಟ್ ಅರ್ಜಿಗಳು ಹೈಕೋರ್ಟ್ ಮೆಟ್ಟಿಲೇರಿವೆ. ಈ ಅರ್ಜಿಗಳ ವಿಚಾರಣೆ ಇಂದು ನ್ಯಾಯಮೂರ್ತಿ ಕೃಷ್ಣ ದೀಕ್ಷಿತ್ ಅವರಿದ್ದ ಪೀಠದ ಮುಂದೆ ಬಂದಿದೆ.
ಇಡೀ ದೇಶದ ಚಿತ್ತ ಸೆಳೆದಿದ್ದ ಈ ವಿಚಾರಣೆ ವೇಳೆ ಹಿಜಬ್ ಕುರಿತ ವಾದ-ಪ್ರತಿವಾದಗಳನ್ನು ನ್ಯಾಯಮೂರ್ತಿ ಕೃಷ್ಣ ಎಸ್.ದೀಕ್ಷಿತ್ ಅವರು ಸಮಚಿತ್ತದಿಂದಲೇ ಆಲಿಸಿದರು. ವಿವಿಧ ರಾಜ್ಯಗಳ ಹೈಕೋರ್ಟ್‌ಗಳು ನೀಡಿರುವ ತೀರ್ಪುಗಳ ಬಗ್ಗೆಯೂ ನ್ಯಾಯಮೂರ್ತಿಗಳು ಗಮನಹರಿಸಿದರು. ಎರಡೂ ಕಡೆಗಳ ವಕೀಲರ ವಾದಗಳ ಸಂದರ್ಭದಲ್ಲಿ ಹಲವು ಬೆಳವಣಿಗೆಗಳು ಹಾಗೂ ಪರಿಭಾಷೆಗಳ ಕುರಿತಂತೆ ವಕೀಲರಿಂದಲೇ ಸ್ಪಷ್ಟನೆ ಪಡೆದ ವೈಖರಿ ಕೂಡಾ ಕುತೂಹಲದ ಕೇಂದ್ರಬಿಂದುವಾಯಿತು.
ಜಾಣತನದ ವಿಚಾರಣೆ, ಸ್ಪಷ್ಟ ತೀರ್ಪುಗಳ ವಿಚಾರದಲ್ಲಿ ಹಿರಿಮೆಗೆ ಪಾತ್ರರಾಗಿರುವ ನ್ಯಾ. ಕೃಷ್ಣ ಎಸ್.ದೀಕ್ಷಿತ್ ಅವರ ಮುಂದೆ ಇಂದು ದೇಶದ ಶೈಕ್ಷಣಿಕ ವ್ಯವಸ್ಥೆಯಲ್ಲಿನ ಅಪರೂಪದ ಪ್ರಕರಣದ ವಿಚಾರಣೆ ನಡರಯುತ್ತಿದ್ದುದರಿಂದಾಗಿ ಇಡೀ ದೇಶದ ಚಿತ್ತ ಇಂದು ಈ ಕೋರ್ಟ್ ಕಲಾಪದತ್ತ ನೆಟ್ಟಿತ್ತು. ಆನ್‌ಲೈನ್ ಮೂಲಕ ಈ ವಿಚಾರಣೆಯ ನೇರಪ್ರಸಾರ ಇದ್ದುದರಿಂದ ಎಲ್ಲರ ವೀಕ್ಷಣೆ ಹೈಕೋರ್ಟ್‌ನತ್ತಲೇ ಕೇಂದ್ರೀಕೃತವಾಗಿತ್ತು. ಸಂಜೆಯವರೆಗೂ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳು ತಕ್ಷಣಕ್ಕೆ ಮಧ್ಯಂತರ ಆದೇಶ ಪ್ರಕಟಿಸಿಲ್ಲ. ಪ್ರತಿಭಟನೆ ಬೇಡ, ಜನರ ವಿವೇಕದ ಮೇಲೆ ನಮಗೆ ನಮಗೆ ನಂಬಿಕೆ ಇದೆ. ವಿದ್ಯಾರ್ಥಿಗಳು ಶಾಂತಿ ಕಾಪಾಡಬೇಕಿದೆ ಎಂದು ಪೀಠದಿಂದಲೇ ಸಂದೇಶ ನೀಡಿ ಹಿರಿಮೆ ಪ್ರದರ್ಶಿಸಿದ ನ್ಯಾಯಮೂರ್ತಿ ಕೃಷ್ಣ ಎಸ್.ದೀಕ್ಷಿತ್ ಅವರ, ಕಲಾಪವನ್ನು ನಾಳೆಗೆ ಮುಂದೂಡಿದರು.
ಪ್ರೌಢಶಾಲೆ, ಕಾಲೇಜುಗಳಿಗೆ ರಜೆ ಘೋಷಣೆ
ಈ ನಡುವೆ, ಹಿಜಬ್ Vs ಕೇಸರಿ ವಿವಾದವು ಸಂಘರ್ಷದ ಸ್ವರೂಪ ತಾಳಿದೆ. ಹಲವೆಡೆ ಪ್ರತಿಭಟನೆಗಳು, ಕಲ್ಲು ತೂರಾಟ ನಡೆದಿದ್ದು, ಪೊಲೀಸರು ಪರಿಸ್ಥಿತಿ ನಿಯಂತ್ರಿಸಲು ಲಾಠಿ ಚಾರ್ಜ್ ಮಾಡಿದರು. ಕೆಲವೆಡೆ ಪೊಲೀಸರು ನಿಷೇಧಾಜ್ಞೆ ಮೊರೆ ಹೋಗಿದ್ದಾರೆ. ಹಲವಾರು ಮಂದಿ ವಿದ್ಯಾರ್ಥಿಗಳನ್ನು ಬಂಧಿಸಿದ ಸನ್ನಿವೇಶಗಳೂ ನಡೆದವು.
ಈ ಎಲ್ಲಾ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ರಾಜ್ಯ ಸರ್ಕಾರ ನಾಳೆಯಿಂದ 3 ದಿನಗಳ ಕಾಲ ಪ್ರೌಢಶಾಲೆ, ಕಾಲೇಜುಗಳಿಗೆ ರಜೆ ಘೋಷಿಸಿದೆ. ನಾಳೆಯಿಂದ ಮೂರು ದಿನಗಳ ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಿರುವುದಾಗಿ ಸಿಎಂ ಬಸವರಾಜ್ ಬೊಮ್ಮಾಯಿ ಅವರು ದೆಹಲಿಯಲ್ಲಿ ತಿಳಿಸಿದ್ದಾರೆ.
ರಾಜ್ಯದಲ್ಲಿ ವಿದ್ಯಾರ್ಥಿಗಳು, ಶಿಕ್ಷಕರು, ಶಾಲೆ, ಕಾಲೇಜುಗಳ ಆಡಳಿತ ಮಂಡಳಿಗಳು ಹಾಗೂ ನಾಡಿನ ಸಮಸ್ತ ಜನತೆಯಲ್ಲಿ ಶಾಂತಿ ಸೌಹಾರ್ದತೆ ಕಾಪಾಡುವಂತೆ ಮನವಿ ಮಾಡುತ್ತೇನೆ. ಮುಂದಿನ ಮೂರು ದಿನಗಳ ಅವಧಿಗೆ ಶಾಲೆ ಕಾಲೇಜುಗಳಿಗೆ ರಜೆ ಘೋಷಿಸುವಂತೆ ಆದೇಶಿಸಲಾಗಿದ್ದು, ಸಂಬಂಧಿಸಿದ ಎಲ್ಲರೂ ಸಹಕರಿಸಲು ಕೋರುತ್ತೇನೆ.
— Basavaraj S Bommai (Modi Ka Parivar) (@BSBommai) February 8, 2022