ಹಾನಗಲ್: ಈ ಉಪ ಚುನಾವಣೆಯಲ್ಲಿ ಹಾನಗಲ್ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿಯನ್ನು ಲಘುವಾಗಿ ಪರಿಗಣಿಸುವ ಅಗತ್ಯವಿಲ್ಲ. ಒಂದು ವೇಳೆ ಅವರು ಹಾಗೇನಾದರೂ ಭಾವಿಸಿದರೆ ಫಲಿತಾಂಸದ ದಿನ ಅವರಿಗೆ ನಿರಾಶೆ ಕಟ್ಟಿಟ್ಟಬುತ್ತಿ ಎಂದು ಮಾಜಿ ಮುಖ್ಯಮಂತ್ರಿಗಳಾದ ಹೆಚ್.ಡಿ.ಕುಮಾರಸ್ವಾಮಿ ಅವರು ಕಾಂಗ್ರೆಸ್-ಬಿಜೆಪಿ ಪಕ್ಷಗಳ ನಾಯಕರಿಗೆ ಎಚ್ಚರಿಕೆ ನೀಡಿದ್ದಾರೆ.
ಹಾನಗಲ್ ಕ್ಷೇತ್ರದಲ್ಲಿ ಜೆಡಿಎಸ್ ಅಭ್ಯರ್ಥಿ ನಿಯಾಜ್ ಶೇಖ್ ಅವರ ಪರ ಪ್ರಚಾರ ಕೈಗೊಂಡ ಸಂದರ್ಭದಲ್ಲಿ ಮಾಧ್ಯಮಗಳ ಜತೆ ಮಾತನಾಡಿದ ಅವರು; “ರಾಷ್ಟ್ರೀಯ ಪಕ್ಷಗಳು ಅಬ್ಬರ-ಆರ್ಭಟದಿಂದ ಪ್ರಚಾರ ಕೈಗೊಂಡಿವೆ. ಆದರೆ, ನಾವು ಜನರ ನಾಡಿಮಿತ ಅರಿತು ಅವರ ಮತಕ್ಕೆ ಗೌರವ ಕೊಟ್ಟು ಪ್ರಚಾರ ಕೈಗೊಂಡಿದ್ದೇವೆ. ಜನ ಬೆಂಬಲ ನಮ್ಮ ಪಕ್ಷಕ್ಕೇ ಇದೆ” ಎಂದರು.
ಪಟ್ಟಣವೂ ಸೇರಿದಂತೆ ಹಾನಗಲ್ ಗ್ರಾಮೀಣ ಪ್ರದೇಶದಿಂದ ಭಾರೀ ಪ್ರಮಾಣದ ಜನರು ಇಂದಿನ ಬಹಿರಂಗ ಸಭೆಗೆ ಬಂದಿದ್ದಾರೆ. ಅನೇಕರು ನನಗೆ ಸಾಲ ಮನ್ನಾ ಆಗಿರುವ ಚೀಟಿಗಳನ್ನು ತಂದು ತೋರಿಸಿದರು. ನಿಮ್ಮಿಂದ ಋಣಮುಕ್ತರಾದೆವು ಎಂದು ನನ್ನ ಮುಂದೆ ಸಂತೋಷ ವ್ಯಕ್ತಪಡಿಸಿದರು. ಇದಕ್ಕಿಂತ ಧನ್ಯತೆಯ ಕ್ಷಣ ಬೇರಾವುದಿದೆ ಎಂದು ಅವರು ಹೇಳಿದರು.
ಈ ಕ್ಷೇತ್ರದಲ್ಲಿ ಸುಮಾರು 20ರಿಂದ 22 ಸಾವಿರ ರೈತ ಕುಟುಂಬಗಳಿಗೆ ಸಾಲ ಮನ್ನಾ ಸೌಲಭ್ಯ ಸಿಕ್ಕಿದೆ. ಆ ಕುಟುಂಬಗಳ ಇಬ್ಬಿಬ್ಬರು ಅಥವಾ ಮೂವರು ಸದಸ್ಯರು ನಮ್ಮ ಪಕ್ಷಕ್ಕೆ ಆಶೀರ್ವಾದ ಮಾಡಿದರೆ 70 ಸಾವಿರ ಮತ ಆಗುತ್ತದೆ. ಅವರೆಲ್ಲರ ನಮ್ಮ ಪಕ್ಷದ ಮೇಲಿದೆ. ನಾವೇ ಗೆಲ್ಲುತ್ತೇವೆ ಎಂದು ಮಾಜಿ ಮುಖ್ಯಮಂತ್ರಿಗಳು ಪ್ರಶ್ನೆಯೊಂದಕ್ಕೆ ಉತ್ತರ ನೀಡಿದರು.
ಈ ಭಾಗದ ಗ್ರಾಮೀಣ ಪ್ರದೇಶದ ರೈತರು ಪ್ರೀತಿ ವಿಶ್ವಾಸದಿಂದ ಜೆಡಿಎಸ್ ಪಕ್ಷವನ್ನು ಬೆಂಬಲಿಸುತ್ತಿದ್ದಾರೆ. ಅವರಾಗಿಯೇ ಬಂದು ನನ್ನಲ್ಲಿ, ʼಅಣ್ಣ.. ನಿಮ್ಮಿಂದ ನಮ್ಮ ಎರಡು ಲಕ್ಷ, ಒಂದು ಲಕ್ಷ ರೂಪಾಯಿ ಸಾಲ ಮನ್ನಾ ಆಯಿತು. ಈಗ ನೆಮ್ಮದಿಯಾಗಿದ್ದೇವೆʼ ಎಂದು ಎಂದು ಚೀಟಿ ತೋರಿಸುತ್ತಿದ್ದಾರೆ. ಅವರೆಲ್ಲರೂ ಇವತ್ತು ನಮ್ಮ ಪಕ್ಷವನ್ನು ಬೆಂಬಲಿಸುತ್ತಿದ್ದಾರೆಂದು ಹೆಚ್‌ಡಿಕೆ ಅವರು ತಿಳಿಸಿದರು.
ಜನರು ಕಾಂಗ್ರೆಸ್ ಮತ್ತು ಬಿಜೆಪಿ ಸರಕಾರಗಳನ್ನು ನೋಡಿದ್ದಾರೆ. ಐದೈದು ವರ್ಷದ ಸರಕಾರಗಳನ್ನು, ಈಗ ಕಳೆದ ಎರಡು ವರ್ಷಗಳ ಬಿಜೆಪಿ ಸರಕಾರವನ್ನೂ ನೋಡಿದ್ದಾರೆ. ಜನರು ಎಷ್ಟು ಸಂಕಷ್ಟಕ್ಕೆ ಸಿಲುಕಿದ್ದಾರೆಂಬುದು ಎಲ್ಲರಿಗೂ ಗೊತ್ತಿದೆ. ಅವರೆಲ್ಲರಿಗೂ ಜೆಡಿಎಸ್ ಸರಕಾರ ಇದ್ದಾಗ ಎಂಥ ಜನಪರ ಕಾರ್ಯಕ್ರಮಗಳು ನೀಡಲಾಗಿದೆ, ನಮಗೆಷ್ಟು ಒಳ್ಳೆಯದಾಗಿದೆ ಎಂದು ಚರ್ಚೆ ಮಾಡುತ್ತಿದ್ದಾರೆ ಎಂದು ಕುಮಾರಸ್ವಾಮಿ ಹೇಳಿದರು.