ಹಾವೇರಿ: ಬಿಜೆಪಿ ಸರ್ಕಾರದಲ್ಲಿ ಬರೀ ಲಂಚ, ಲಂಚ, ಲಂಚ ಮಾತ್ರ ಇದೆ. ಇಂಥಾ ಭ್ರಷ್ಟ ಸರ್ಕಾರ ನಿಮಗೆ ಬೇಕಾ ಬೇಡ್ವಾ ಎಂದು ರಾಜ್ಯದ ಜನ ತೀರ್ಮಾನ ಮಾಡಬೇಕು ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.
ಹಾವೇರಿಯಲ್ಲಿ ಪ್ರಜಾಧ್ವನಿ ಯಾತ್ರೆಯ ಸಮಾವೇಶದಲ್ಲಿ ಮಾತನಾಡಿದ ಸಿದ್ದರಾಮಯ್ಯ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಪಕ್ಷ 104 ಸ್ಥಾನಗಳಲ್ಲಿ ಜಯಗಳಿಸಿದ್ದರಿಂದ ನಮ್ಮ ರಾಜ್ಯಪಾಲರು ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿಯಾಗಲು ಕರೆದು, ನೀವು ಸದನದಲ್ಲಿ ಬಹುಮತ ಸಾಬೀತು ಮಾಡಬೇಕು ಎಂದಿದದ್ರು. ಯಡಿಯೂರಪ್ಪ ಅವರಿಗೆ ಬಹುಮತ ಸಾಬೀತು ಮಾಡಲು ಸಾಧ್ಯವಾಗದ್ದರಿಂದ ಕೇವಲ ಮೂರು ನಾಲ್ಕು ದಿನದಲ್ಲಿ ಮುಖ್ಯಮಂತ್ರಿ ಸ್ಥಾನವನ್ನು ಅವರು ಕಳೆದುಕೊಳ್ಳಬೇಕಾಯಿತು. ನಂತರ ಜೆಡಿಎಸ್ ಜೊತೆಸೇರಿ ನಾವು ಸಮ್ಮಿಶ್ರ ಸರ್ಕಾರ ರಚನೆ ಮಾಡಿದೆವು. ನಾವು 80 ಶಾಸಕರು ಇದ್ದರೂ ಕೂಡ 37 ಶಾಸಕರಿರುವ ಕುಮಾರಸ್ವಾಮಿ ಅವರನ್ನು ಮುಖ್ಯಮಂತ್ರಿ ಮಾಡಿದ್ದೆವು. ಇದಕ್ಕೆ ಕಾರಣ ಕೋಮುವಾದಿ ಬಿಜೆಪಿ ಪಕ್ಷ ಅಧಿಕಾರಕ್ಕೆ ಬರಬಾರದು ಎಂಬುದು. ಬಿಜೆಪಿ ಅಧಿಕಾರಕ್ಕೆ ಬಂದರೆ ಹಿಂಸೆ, ಅಸಹಿಷ್ಣುತೆ, ಸೇಡಿನ ರಾಜಕಾರಣ ಆರಂಭವಾಗುತ್ತದೆ ಎಂಬುದು ನಮ್ಮ ಆತಂಕವಾಗಿತ್ತು. ಜಾತಿ ಧರ್ಮಗಳ ಆಧಾರದ ಮೇಲೆ ಜನರನ್ನು ಕೆರಳಿಸಿ, ಸಮಾಜ ಒಡೆಯುವ ಕೆಲಸ ಮಾಡುತ್ತಾರೆ ಎಂದು ದೂರಿದರು.
ನರೇಂದ್ರ ಮೋದಿ ಅವರೇ ಬಿಜೆಪಿಯ ಬಂಡವಾಳ. ಯಾಕೆಂದರೆ ರಾಜ್ಯದ ಬಿಜೆಪಿ ಜನರಿಗೆ ಹಳಸಲಾಗಿದೆ. ನಮ್ಮದು ಭ್ರಷ್ಟ ಸರ್ಕಾರ ಆದರೂ ಕೂಡ ಮೋದಿ ಅವರನ್ನು ನೋಡಿ ಜನ ನಮಗೆ ಮತ್ತೆ ಮತ ನೀಡುತ್ತಾರೆ ಎಂಬ ಭ್ರಮೆಯಲ್ಲಿ ರಾಜ್ಯ ಬಿಜೆಪಿ ನಾಯಕರು ಇದ್ದಾರೆ. “ ನ ಖಾವೂಂಗ, ನ ಖಾನೆದೂಂಗ” ಎಂದಿದ್ದ ಮೋದಿ ಅವರು ರಾಜ್ಯ ಬಿಜೆಪಿ ನಾಯಕರಿಗೆ ಯಾಕೆ ಲಂಚ ತಿನ್ನಲು ಬಿಟ್ಟಿದ್ದೀರಿ ಮೋದಿಜೀ? ಕೆಂಪಣ್ಣ ಒಬ್ಬ ಸಾಮಾನ್ಯ ವ್ಯಕ್ತಿ ಅಲ್ಲ, ರಾಜ್ಯ ಗುತ್ತಿಗೆದಾರರ ಸಂಘದ ಅಧ್ಯಕ್ಷ. ಇವರು ಮೋದಿ ಅವರಿಗೆ ಪತ್ರ ಬರೆದಿದ್ದಾರೆ. ಹೈಕೋರ್ಟ್ ನ ಹಾಲಿ ನ್ಯಾಯಾಧೀಶರಿಂದ ತನಿಖೆ ಮಾಡಿಸಿ, ಅದಕ್ಕೆ ಅಗತ್ಯವಿರುವ ಎಲ್ಲಾ ದಾಖಲೆಗಳನ್ನು ನಾನು ಕೊಡುತ್ತೇನೆ ಎಂದು ಕೆಂಪಣ್ಣ ಅವರು ಹೇಳಿದ್ದರು. ಬೇರೆಯವರ ಧಮ್, ತಾಕತ್ ಪ್ರಶ್ನೆ ಮಾಡುವ ಬೊಮ್ಮಾಯಿ ಅವರಿಗೆ ಧಮ್, ತಾಕತ್ ಇದ್ದರೆ ನ್ಯಾಯಾಂಗ ತನಿಖೆ ಮಾಡಿಸಲಿ ಎಂದು ಸಿದ್ದರಾಮಯ್ಯ ಸವಾಲು ಹಾಕಿದರು.
ಸಂತೋಷ್ ಪಾಟೀಲ್ ಅವರ ಸಾವಿಗೆ ಕಾರಣರಾದ ಈಶ್ವರಪ್ಪ ಅವರಿಗೆ ಮೂರೇ ತಿಂಗಳಲ್ಲಿ ಪೊಲೀಸರ ಮೂಲಕ ಬಿ ರಿಪೋರ್ಟ್ ಹಾಕಿಸಿದ್ರು. ಹೀಗೆ ಹಲವು ಜನ ಸರ್ಕಾರದ ಲಂಚಕ್ಕೆ ಬೇಸತ್ತು ಆತ್ಮಹತ್ಯೆ ಮಾಡಿಕೊಂಡರು. ಈ ಸರ್ಕಾರ ಗುತ್ತಿಗೆದಾರರಿಗೆ ಕೊಡಬೇಕಾದ 25,000 ಕೋಟಿ ಹಣವನ್ನು ಬಾಕಿ ಇಟ್ಟುಕೊಂಡಿದೆ ಎಂಬ ಕಾರಣಕ್ಕೆ ನಿನ್ನೆ ಗುತ್ತಿಗೆದಾರರ ಸಂಘದವರು ಪ್ರತಿಭಟನೆ ಮಾಡಿದ್ರು. ಈ ಸರ್ಕಾರದಲ್ಲಿ ಬರೀ ಲಂಚ, ಲಂಚ, ಲಂಚ ಮಾತ್ರ ಇದೆ. ಇಂಥಾ ಭ್ರಷ್ಟ ಸರ್ಕಾರ ನಿಮಗೆ ಬೇಕಾ ಬೇಡ್ವಾ ಎಂದು ರಾಜ್ಯದ ಜನ ತೀರ್ಮಾನ ಮಾಡಬೇಕು ಎಂದು ಸಿದ್ದರಾಮಯ್ಯ ಹೇಳಿದರು.
ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಬಿ.ಕೆ. ಹರಿಪ್ರಸಾದ್ ಮಾತನಾಡಿ, ಮುಖ್ಯಮಂತ್ರಿಯವರ ತವರು ಜಿಲ್ಲೆಯಲ್ಲಿ ಇಷ್ಟು ಜನಸಾಗರ ಸೇರಿದೆ ಎಂದರೆ ಮುಖ್ಯಮಂತ್ರಿಗಳು ಹಾಗೂ ಅವರ ಸರ್ಕಾರ ಎಷ್ಟು ಜನಪ್ರಿಯವಾಗಿದೆ ಎಂದು ತಿಳಿಯುತ್ತದೆ. ನಿಮ್ಮ ಈ ಬೆಂಬಲಕ್ಕೆ ಶತಕೋಟಿ ನಮನ ಸಲ್ಲಿಸುತ್ತೇನೆ. ಪ್ರಜಾಧ್ವನಿ ಮೂಲ ಉದ್ದೇಶ ಕರ್ನಾಟಕದಲ್ಲಿ ಬಿಜೆಪಿ ಸರ್ಕಾರ ನಾಲ್ಕು ವರ್ಷಗಳ ಆಡಳಿತ ಮಾಡಿ ಈಗ ಪರಿಕ್ಷೆ ಎದುರಿಸಲಿದೆ. ಈ ಪರೀಕ್ಷೆಯಲ್ಲಿ ನೀವು ಹಣೆಬರಹ ಬರೆಯಲಿದ್ದೀರಿ. ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿದ್ದಾಗ ಹಾಗೂ ನೀವು ಕಷ್ಟದಲ್ಲಿದ್ದಾಗ ಕಾಂಗ್ರೆಸ್ ಹೇಗೆ ಸ್ಪಂದಿಸಿದೆ ಎಂಬುದನ್ನು ಅರಿತು ನೀವು ಹಣೆಬರಹ ಬರೆಯಬೇಕಾಗುತ್ತದೆ ಎಂದರು.

















































