ಹಾವೇರಿ: ಕರ್ನಾಟಕ ರಾಜ್ಯದ ಜನರ ನೋವು, ಸಮಸ್ಯೆ, ಭಾವನೆ, ಅಭಿಪ್ರಾಯಗಳನ್ನು ಶೇಖರಿಸಿ, ನಿಮಗೆ ಶಕ್ತಿ ನೀಡುವುದೇ ಪ್ರಜಾಧ್ವನಿ ಯಾತ್ರೆಯ ಉದ್ದೇಶ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.
ಹಾವೇರಿ ಪ್ರಜಾಧ್ವನಿ ಯಾತ್ರೆಯ ಸಮಾವೇಶದಲ್ಲಿ ಮಾತನಾಡಿದ ಡಿ.ಕೆ. ಶಿವಕುಮಾರ್, ಕರ್ನಾಟಕ ರಾಜ್ಯದ ಜನರ ನೋವು, ಸಮಸ್ಯೆ, ಭಾವನೆ, ಅಭಿಪ್ರಾಯಗಳನ್ನು ಶೇಖರಿಸಿ, ನಿಮಗೆ ಶಕ್ತಿ ನೀಡುವುದೇ ಪ್ರಜಾಧ್ವನಿ ಯಾತ್ರೆ. ಚಿಕ್ಕೋಡಿ, ಬೆಳಗಾವಿ, ಬಾಗಲಕೋಟೆ, ಹೊಸಪೇಟೆ, ಕೊಪ್ಪಳ, ಗದಗ ಮುಗಿಸಿ ಇಲ್ಲಿಗೆ ಬಂದಿದ್ದೇವೆ. ಮಧ್ಯಾಹ್ನ ಕಾರ್ಯಕ್ರಮದಲ್ಲಿ ಹಾವೇರಿಯಲ್ಲಿ ಬಹಳ ದೊಡ್ಡ ಮಟ್ಟದ ಜನ ಸೇರಿದ್ದೀರಿ. ಎಲ್ಲ ಕಡೆಗಳಲ್ಲಿ ನಮಗೆ ಉತ್ತಮ ಜನ ಬೆಂಬಲ ಸಿಗುತ್ತಿದೆ. ಕಾಂಗ್ರೆಸ್ ಮಹಾ ಅಲೆಯನ್ನು ನೀವೆಲ್ಲರೂ ಆರಂಭಿಸಿದ್ದೀರಿ ಎಂದರು.
ನೀವು ಬಿಜೆಪಿಗೆ ಯಾಕೆ ಬೆಂಬಲ ನೀಡಬೇಕು? ಈ ಸರ್ಕಾರ 40% ಕಮಿಷನ್ ಪಡೆದಿದ್ದಕ್ಕಾ, ನಿರುದ್ಯೋಗ ಯುವಕರಿಗೆ ಉದ್ಯೋಗ ನೀಡಲು ಹಣ ಪಡೆದಿದ್ದಕ್ಕಾ, ಹೊಟೇಲ್ ಗಳಲ್ಲಿ ತಿಂಡಿಗಳಿಗೆ ಬೆಲೆ ನಿಗದಿ ಮಾಡಿದಂತೆ ಒಂದೊಂದು ಹುದ್ದೆಗೂ ಹಣ ನಿಗದಿ ಮಾಡಿರುವುದಕ್ಕಾ, ಕೋವಿಡ್ ಸಮಯದಲ್ಲಿ ಜನ ಸತ್ತಿದ್ದಾಕ್ಕಾ?ಅವರ ಬದುಕು ನಿರ್ನಾಮ ಮಾಡಿದ್ದಕ್ಕಾ, ರೈತರ ಆದಾಯ ಡಬಲ್ ಮಾಡದಿರುವುದಕ್ಕೆ ಬಿಜೆಪಿಗೆ ಬೆಂಬಲ ನೀಡಬೇಕಾ? ಎಂದು ಪ್ರಶ್ನಿಸಿದರು.
ನಾವು ಕಲ್ಯಾಣ ಕರ್ನಾಟಕದಲ್ಲಿ ಆರ್ಥಿಕ ನೀತಿ ಹಾಗೂ 5 ಸಾವಿರ ಕೋಟಿ ಅನುದಾನ ಘೋಷಿಸಿದ್ದೇವೆ. ರಾಜ್ಯದ ಮುಖ್ಯಮಂತ್ರಿಗಳು ಈ ಜಿಲ್ಲೆಯವರು. ಇತ್ತೀಚೆಗೆ ಅವರು ಜಾಗತಿಕ ಬಂಡವಾಳ ಹೂಡಿಕೆ ಸಮಾವೇಶ ಮಾಡಿದರು. ಇದರಲ್ಲಿ ರಾಜ್ಯಕ್ಕೆ 10 ಲಕ್ಷ ಕೋಟಿ ಬಂಡವಾಳ ಬರಲಿದೆ ಎಂದರು. ಬೊಮ್ಮಾಯಿ ಅವರೇ, ನೀವು ಸಿಎಂ ಆಗಿದ್ದೀರಿ, ನಿಮ್ಮ ಜಿಲ್ಲೆಗೆ ಯಾರು ಎಷ್ಟು ಬಂಡವಾಳ ಹೂಡಿಕೆ ಮಾಡಲು ಮುಂದಾಗಿದ್ದಾರೆ ಎಂಬ ಪಟ್ಟಿಯನ್ನು ಬಿಡುಗಡೆ ಮಾಡಿ ಎಂದು ಡಿಕೆಶಿ ಹೇಳಿದತು.
ಪ್ರಧಾನಮಂತ್ರಿಗಳು ರಾಜ್ಯಕ್ಕೆ ಬಂದಿದ್ದು, ಅವರು ಗುತ್ತಿಗೆದಾರರ ಸಂಘದ ಅದ್ಯಕ್ಷ ಕೆಂಪಣ್ಣ ಅವರು 40% ಕಮಿಷನ್ ವಿಚಾರವಾಗಿ ನೀಡಿದ ದೂರಿನ ಬಗ್ಗೆ ಉತ್ತರ ನೀಡಬೇಕು. ತಾಂಡಾಗಳಿಗೆ ಸರ್ಟಿಫಿಕೇಟ್ ನೀಡಲು ಬಂದಿದ್ದಾರೆ. ತಾಂಡಾ ಗಳನ್ನು ನಿರ್ಮಿಸಿ ಕಂದಾಯ ತಾಂಡ ಎಂದು ಪರಿವರ್ತನೆ ಮಾಡಿದ್ದು ಕಾಂಗ್ರೆಸ್ ಸರ್ಕಾರ. ನೀವು ಇಂದು ಕೇವಲ ಸರ್ಟಿಫಿಕೇಟ್ ನೀಡುತ್ತಿದ್ದೀರಿ. ಆದರೆ ಈ ತಾಂಡಾಗಳನ್ನು ಮಾಡಿದ್ದು ಕಾಂಗ್ರೆಸ್. ಉಳುವವನಿಗೆ ಭೂಮಿ ಕೊಟ್ಟಿದ್ದು ಕಾಂಗ್ರೆಸ್ ಎಂದು ಡಿಕೆಶಿ ಹೇಳಿದರು.
ಯತ್ನಾಳ್, ವಿಶ್ವನಾಥ್, ನಿರಾಣಿ, ಯೋಗೇಶ್ವರ್ ಅವರು ಹೇಳಿಕೆಗಳನ್ನು ನೀಡಿರುವ ಬಗ್ಗೆ ಉತ್ತರವನ್ನು ನೀಡಲಿಲ್ಲ, ಅವರ ವಿರುದ್ಧ ಶಿಸ್ತುಕ್ರಮವನ್ನು ತೆಗೆದುಕೊಳ್ಳಲಿಲ್ಲ. ಇದು ಬಿಜೆಪಿ ಸಾಧನೆ. ಈ ದೊಂಬರಾಟವನ್ನು ಮಾಧ್ಯಮಗಳ ಮೂಲಕ ನೋಡುತ್ತಿದ್ದೇವೆ ಎಂದ ಡಿಕೆಶಿ, ಬೊಮ್ಮಾಯಿ, ಈಶ್ವರಪ್ಪ, ಕಟೀಲ್ ಅವರೇ ನಿಮ್ಮ ಉದ್ಧಾರ ಎಷ್ಟಾಯ್ತು? ಮುಂದೆ ಕಾಂಗ್ರೆಸ್ 140 ಸೀಟುಗಳನ್ನು ಪಡೆದು ಅಧಿಕಾರಕ್ಕೆ ಬರಲಿದೆ ಎಂದರು.



















































