ಹಾಸನ: ಹಾಸನದಲ್ಲಿ ಕೋವಿಡ್ ಸೋಂಕಿತರ ಚಿಕಿತ್ಸೆಗಾಗಿ ಆಕ್ಸಿಜನ್ ಘಟಕ ಅಳವಡಿಸಲಾಗುತ್ತಿದೆ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ತಿಳಿಸಿದ್ದಾರೆ.
ಹಾಸನ ಜಿಲ್ಲೆಯಲ್ಲಿ ಕೋವಿಡ್ ನಿಯಂತ್ರಣ ಸಂಬಂಧ ಸಭೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ಆಕ್ಸಿಜನ್ ಪೂರೈಕೆ ಹೆಚ್ಚಿಸಲು ಹೊಸ ಘಟಕ ಅಳವಡಿಸುವ ಬಗ್ಗೆ ಚರ್ಚೆಯಾಗಿದೆ. ಈಗಾಗಲೇ 13 ಕೆಎಲ್ ನ ಘಟಕ ಮೆಡಿಕಲ್ ಕಾಲೇಜಿನಲ್ಲಿದೆ. ಜೊತೆಗೆ 20 ಕೆಎಲ್ ಘಟಕ ಮೂರ್ನಾಲ್ಕು ವಾರದಲ್ಲಿ ಆರಂಭವಾಗಲಿದೆ. ಆಕ್ಸಿಜನ್ ಜನರೇಟರ್ ಗಳನ್ನು ಸಕಲೇಶಪುರ ಹಾಗೂ ಚನ್ನರಾಯಪಟ್ಟಣಕ್ಕೆ ನೀಡಲು ಆದೇಶಿಸಲಾಗಿದೆ ಎಂದು ತಿಳಿಸಿದರು.
ರೆಮ್ ಡಿಸಿವಿರ್ ಔಷಧಿ ಪೂರೈಕೆ, ಆಕ್ಸಿಜನ್ ಪೂರೈಕೆ, ಆರೋಗ್ಯ ಸಿಬ್ಬಂದಿ ಕೊರತೆ ಬಗ್ಗೆ ಸಂಸದರು, ಶಾಸಕರು ಬೇಡಿಕೆ ಇಟ್ಟಿದ್ದಾರೆ. ವಾರದಲ್ಲಿ ಮೂರು ದಿನ ಬಿಟ್ಟು, ಉಳಿದ ನಾಲ್ಕು ದಿನ ಕಡ್ಡಾಯವಾಗಿ ಲಾಕ್ ಡೌನ್ ಮಾಡಬೇಕು ಎಂದು ಒತ್ತಾಯಿಸಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವರು ಈ ಕುರಿತು ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿ ತಿಳಿಸುವುದಾಗಿ ಹೇಳಿದ್ದಾರೆ ಎಂದರು.
ಜಿಲ್ಲೆಗೆ 800 ಸಿಲಿಂಡರ್ ಬೇಕು ಎಂಬ ಬೇಡಿಕೆ ಬಂದಿದೆ. ಈ ಅಂದಾಜನ್ನು ಮತ್ತೊಮ್ಮೆ ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುವುದು. ಒಂದು ಸಮಿತಿ ರಚಿಸಿ ಪ್ರತಿ ಆಸ್ಪತ್ರೆಗೆ ಕಳುಹಿಸಿ ಆಕ್ಸಿಜನ್, ರೆಮ್ ಡಿಸಿವಿರ್ ಅಗತ್ಯವೆಷ್ಟಿದೆ ಎಂದು ಮಾಹಿತಿ ಪಡೆಯಬೇಕು ಎಂದು ಸೂಚಿಸಲಾಗಿದೆ. ಸಾವಿನ ಪ್ರಮಾಣ 0.68% ರಷ್ಟಿದೆ. ಸೋಂಕು ಉಲ್ಬಣವಾದ ನಂತರ ತಡವಾಗಿ ದಾಖಲಾಗಿರುವ ಕಾರಣದಿಂದ ಕೆಲವು ಸಾವು ಉಂಟಾಗಿದೆ. ಇದನ್ನು ಕಡಿಮೆ ಮಾಡಬೇಕೆಂದು ಸೂಚಿಸಲಾಗಿದೆ. ಟಾಸ್ಕ್ ಫೋರ್ಸ್ ಸಮಿತಿ ಬೂತ್ ಹಂತದಲ್ಲಿ ಕ್ರಿಯಾಶೀಲವಾಗಿ ಕೆಲಸ ಮಾಡಬೇಕು. ಹಿಮ್ಸ್ ನಲ್ಲಿ ಪೂರ್ಣ ಪ್ರಮಾಣದ ನೋಡಲ್ ಅಧಿಕಾರಿ ನಿಯೋಜಿಸಲು ಸೂಚಿಸಲಾಗಿದೆ. ಈ ಅಧಿಕಾರಿಯೇ ಎಲ್ಲ ಪ್ರಕ್ರಿಯೆ ನೋಡಿಕೊಳ್ಳಲಿದ್ದಾರೆ ಎಂದರು.
ಈಗ ಬಿಗಿಯಾದ ಕ್ರಮಗಳು ಜಾರಿಯಲ್ಲಿರುವ ಹಿನ್ನೆಲೆಯಲ್ಲಿ ಕೋವಿಡ್ ಲಸಿಕೆ ವಿತರಣೆ ಬಗ್ಗೆ ಸರ್ಕಾರ ತೀರ್ಮಾನಿಸಲಿದೆ. ಗೃಹಸಚಿವರು ಈ ಬಗ್ಗೆ ಸಭೆ ಮಾಡಿ ತೀರ್ಮಾನಿಸಬೇಕು ಎಂದಿದ್ದಾರೆ ಎಂದು ತಿಳಿಸಿದರು.