ಬೆಂಗಳೂರು: ರಾಜ್ಯದಲ್ಲಿ ಯಾವುದೇ ರೀತಿಯ ನಾಯಕತ್ವ ಬದಲಾವಣೆ ಇಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕಮಾರ್ ಕಟೀಲ್ ಸ್ಪಷ್ಟಪಡಿಸಿದ್ದಾರೆ.
ಬೆಂಗಳೂರಿನಲ್ಲಿಂದು ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು ಭೇಟಿ ಮಾಡಿ ನಡೆಸಿದ ಮಾತುಕತೆ ಬಗ್ಗೆ ರಾಜ್ಯ ರಾಜಕೀಯದಲ್ಲಿ ಬಗೆಬಗೆಯ ವಿಶ್ಲೇಷಣೆಗಳು ನಡೆದಿರುವಂತೆಯೇ ಸ್ಪಷ್ಟನೆ ನೀಡಿರುವ ನಳಿನ್ ಕುಮಾರ್ ಕಟೀಲ್, ಈಗ ರಾಜಕಾರಣ ಮಾಡುವ ಕೆಲಸಗಳಿಲ್ಲ. ಕೋವಿಡ್ ನಿಯಂತ್ರಣವೊಂದೇ ಕೆಲಸ. ಜನರ ಪ್ರಾಣ ಉಳಿಸುವುದು ಮತ್ತು ರಕ್ಷಿಸುವುದು ನಮ್ಮ ಪ್ರಥಮ ಆದ್ಯತೆಯಾಗಿದೆ. ಅದಕ್ಕೇ ಸಚಿವರು, ಶಾಸಕರು ಮತ್ತು ಪಕ್ಷದ ಮುಖಂಡರು ಒತ್ತು ನೀಡಲಿದ್ದಾರೆ ಎಂದು ತಿಳಿಸಿದರು.
ಸಿಎಂ ಭೇಟಿ ವೇಳೆ ರಾಜ್ಯದಲ್ಲಿ ಕೋವಿಡ್ ಪರಿಸ್ಥಿತಿ ಕುರಿತಂತೆ ಚರ್ಚೆ ನಡೆಸಲಾಯಿತು. ಕೋವಿಡ್ ಸಂಬಂಧ ಬಳಸುವ ಆಂಬುಲೆನ್ಸ್ ಸೇವೆಯನ್ನು ಸಂಪೂರ್ಣ ಉಚಿತವಾಗಿ ಒದಗಿಸುವಂತೆ ಮುಖ್ಯಮಂತ್ರಿಗಳಲ್ಲಿ ವಿನಂತಿ ಮಾಡಿದ್ದಾಗಿ ತಿಳಿಸಿದ್ದರೆ.
ರಾಜ್ಯದಲ್ಲಿ ಕೋವಿಡ್ ಎರಡನೇ ಅಲೆಯ ನಿಯಂತ್ರಣಕ್ಕೆ ಬಿಜೆಪಿ ಮತ್ತು ರಾಜ್ಯ ಸರಕಾರಗಳು ಸಮನ್ವಯತೆಯಿಂದ ಕೆಲಸ ಮಾಡಲಿವೆ. ಜನರ ಪ್ರಾಣ ರಕ್ಷಿಸುವ ವಿಚಾರಕ್ಕೆ ಗರಿಷ್ಠ ಆದ್ಯತೆ ಕೊಡಲಾಗುವುದು ಎಂದು ನಳಿನ್‍ಕುಮಾರ್ ಕಟೀಲ್ ತಿಳಿಸಿದ್ದಾರೆ.
ಪಕ್ಷದ ರಾಷ್ಟ್ರೀಯ ಅಧ್ಯಕ್ಷರ ಸೂಚನೆಯಂತೆ ‘ಸೇವಾ ಹೀ ಸಂಘಟನ್’ ಚಿಂತನೆಯಡಿ ಪಕ್ಷದ ಮುಖಂಡರು ಈಗಾಗಲೇ ಕೋವಿಡ್ ಸಹಾಯವಾಣಿ ಆರಂಭಿಸಿರುವುದು, ನಿಯಂತ್ರಣ ಕೊಠಡಿ ತೆರೆದಿರುವುದು, ವೈದ್ಯಕೀಯ ಕಿಟ್‍ಗಳ ವಿತರಣೆ, ಆಹಾರ ಪೊಟ್ಟಣಗಳ ವಿತರಣೆ, ರಕ್ತದಾನ ಶಿಬಿರಗಳ ಸಂಘಟನೆ ಮಾಡಿದ್ದರ ಕುರಿತು ಮುಖ್ಯಮಂತ್ರಿಗಳಿಗೆ ಮಾಹಿತಿ ನೀಡಲಾಯಿತು ಎಂದವರು ತಿಳಿಸಿದ್ದಾರೆ.
ಕೋವಿಡ್ ನಿಯಂತ್ರಣಕ್ಕಾಗಿ ರಾಜ್ಯ ಸರಕಾರವು ಲಾಕ್‍ಡೌನ್ ವಿಸ್ತರಿಸಿರುವುದು ಮತ್ತು ಗ್ರಾಮೀಣ ಪ್ರದೇಶದಲ್ಲಿ ಕೋವಿಡ್ ಸಮಸ್ಯೆ ಬಾಧಿಸದಂತೆ ಕೈಗೊಳ್ಳಬೇಕಾದ ಕ್ರಮಗಳ ಕುರಿತು ಚರ್ಚಿಸಲಾಯಿತು. ಬೆಡ್ ಸಮಸ್ಯೆ ಪರಿಹಾರ, ಆಕ್ಸಿಜನ್ ಕೊರತೆ ಇರುವಲ್ಲಿಗೆ ತ್ವರಿತ ಸ್ಪಂದಿಸುವ ಮುಖ್ಯಮಂತ್ರಿಗಳ ಕ್ರಮದ ಬಗ್ಗೆ ಮೆಚ್ಚುಗೆ ಸೂಚಿಸಿದ್ದಾಗಿ ನಳಿನ್ ಕುಮಾರ್ ಅವರು ಮಾಧ್ಯಮಗಳಿಗೆ ಬಿಡುಗಡೆ ಮಾಡಿರುವ ಹೇಳಿಕೆಯಲ್ಲಿ ತಿಳಿಸಿದ್ದಾರೆ.