ಬೆಂಗಳೂರು: ಸದಾ ಒಂದಿಲ್ಲೊಂದು ಕಿರುಕುಳದಿಂದ ನಿರಾಸೆ ಅನುಭವಿಸುತ್ತಿರುವ ಗೋವಾದಲ್ಲಿನ ಕನ್ನಡಿಗರ ಮುಖದಲ್ಲಿಂದು ಎಂದಿಲ್ಲದ ಸಂತಸ.. ಗೋವಾ ರಾಜ್ಯ ಬಿಜೆಪಿ ಉಸ್ತುವಾರಿ ನಾಯಕ ಸಿ.ಟಿ.ರವಿ ಉಪಸ್ಥಿತಿಯಲ್ಲಿ ಉದ್ಯಾನನಗರಿಯಲ್ಲಿ ಕಾಣಿಸಿಕೊಂಡ ಗೋವಾ ಕನ್ನಡಿಗ ದಿಗ್ಗಜರು ತಮ್ಮ ಬಹುಕಾಲದ ಕನಸು ನನಸಾಗುವುದನ್ನು ಅರಿತು ಸಂಭ್ರಮಿಸಿದರು. ತಮ್ಮ ಪಾಲಿನ ಸಂತಸದ ಕ್ಷಣ ಅಪೂರ್ವ ಎಂದು ಈ ಕನ್ನಡ ನೆಂಟರು ಹೇಳಿದ ಮಾತುಗಳು ನಿಜಕ್ಕೂ ಅವಿಸ್ಮರಣೀಯ.
ಗೋವಾದಲ್ಲಿ ಕನ್ನಡ ಭವನ ನಿರ್ಮಾಣ ಮಾಡುವ ಮೂಲಕ, ತಮ್ಮ ರಾಜ್ಯದಲ್ಲಿ ಕನ್ನಡ ಭಾಷೆಗೆ ಶಕ್ತಿ ತುಂಬುವ ಪ್ರಯತ್ನ ಬಹುಕಾಲದಿಂದಲೇ ನಡೆದಿದೆ. ಈ ಸಂಬಂಧ ಅಖಿಲ ಗೋವಾ ಕನ್ನಡ ಮಹಾ ಸಂಘದ ಪದಾಧಿಕಾರಿಗಳು ಇತ್ತೀಚೆಗೆ ಸಿ.ಟಿ.ರವಿ ಜೊತೆ ಮಾಹಿತಿ ಹಂಚಿಕೊಂಡಿದ್ದರು. ಗೋವಾ ಕನ್ನಡಿಗರ ಈ ಭುವನೇಶ್ವರಿ ಕೈಂಕರ್ಯಕ್ಕೆ ಕರ್ನಾಟಕ ಸರ್ಕಾರದಿಂದ ನೆರವು ಕೊಡಿಸುವ ಭರವಸೆಯನ್ನು ರವಿ ನೀಡಿದ್ದರು. ಅದರಂತೆ, ಬೆಂಗಳೂರಿನಲ್ಲಿ ಇಂದು ಗೋವಾ ಕನ್ನಡಿಗರ ನಿಯೋಗವನ್ನು ಸಿಎಂ ಬಸವರಾಜ್ ಬೊಮ್ಮಾಯಿ ಬಳಿಗೆ ಕರೆದೊಯ್ದ ಸಿ.ಟಿ.ರವಿ, ಭಾರೀ ಮೊತ್ತದ ಹಣಕಾಸು ನೆರವಿನ ವಾಗ್ದಾನ ಕೊಡಿಸಿದರು.
ಈ ಅಹವಾಲು ಆಲಿಸಿದ ಸಿಎಂ ಗೋವಾದಲ್ಲಿನ ಕನ್ನಡಿಗರ ನೆರವಿಗೆ ಕರ್ನಾಟಕ ಸರ್ಕಾರ ಸಿದ್ದವಿದೆ ಎಂದರು. ಇದೇ ವೇಳೆ, ಕನ್ನಡ ಭವನ ನಿರ್ಮಾಣಕ್ಕೆ ಸರ್ಕಾರ ಸಿದ್ಧವಿದೆ. ಇದಕ್ಕೆ ಭೂಮಿಯನ್ನು ಗುರುತಿಸಿ ಡಿಪಿಆರ್ ಸಿದ್ಧಪಡಿಸುವಂತೆ ಸಿಎಂ ಅಧಿಕಾರಿಗಳಿಗೆ ಸೂಚನೆ ನೀಡಿದರು. ಈ ಕನ್ನಡ ಭವನ ನಿರ್ಮಾಣಕ್ಕೆ 10 ಕೋಟಿ ರೂಪಾಯಿ ಮಂಜೂರು ಮಾಡುವುದಾಗಿ ಭರವಸೆ ನೀಡಿದ ಮುಖ್ಯಮಂತ್ರಿ. ಈ ಸಂಬಂಧ ಸೂಕ್ತ ಕ್ರಮವಹಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ಸಂಘದ ಪದಾಧಿಕಾರಿಗಳಾದ ಮಲ್ಲಿಕಾರ್ಜುನ ಬದಾಮಿ, ಮಹೇಶ್ ಬಾಬು ಸುರ್ವೇ, ಅರುಣ್ ಕುಮಾರ್ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.