ಬೆಂಗಳೂರು: ದೊಡ್ಡಬಳ್ಳಾಪುರ-ದೇವನಹಳ್ಳಿ ರಸ್ತೆಯ ನಾಗದೇನಹಳ್ಳಿಯಲ್ಲಿರುವ ಆಂಧ್ರ ಮೂಲದ ಪ್ರತಿಷ್ಠಿತ ಗೀತಂ ಯೂನಿವರ್ಸಿಟಿಯಲ್ಲಿ ವಿದ್ಯಾರ್ಥಿಗಳ ಸರಣಿ ಆತ್ಮಹತ್ಯೆ ಮುಂದುವರೆದಿದೆ. ಕಳೆದ ರಾತ್ರಿ ಬಿಟೆಕ್ ವಿದ್ಯಾರ್ಥಿ, ಆಂಧ್ರಪ್ರದೇಶದ ಕರ್ನೂಲು ಮೂಲದ ಬ್ರಹ್ಮಸಾಯಿರೆಡ್ಡಿ ಅನುಮಾನಾಸ್ಪದ ರೀತಿಯಲ್ಲಿ ಸಾವನ್ನಪ್ಪಿದ್ದಾನೆ.
ಹಾಸ್ಟೆಲ್ ಮಹಡಿ ಮೇಲಿಂದ ಬಿದ್ದು ವಿದ್ಯಾರ್ಥಿ ಸಾವನ್ನಪ್ಪಿದ್ದಾನೆ ಎನ್ನಲಾಗುತ್ತಿದೆ. ವಿವಿಯಲ್ಲಿ ಸಿಬ್ಬಂದಿ ಕಿರುಕುಳ ಮತ್ತು ವಿದ್ಯಾರ್ಥಿಗಳ ಮಾದಕದ್ರವ್ಯ ಬಳಕೆ ಇದಕ್ಕೆ ಕಾರಣ ಇರಬಹುದೇ ಎಂಬ ಬಗ್ಗೆ ಚರ್ಚೆಗಳು ಕೇಳಿಬರುತ್ತಿದ್ದು, ಸ್ಥಳಕ್ಕೆ ಭೇಟಿನೀಡಿ ಪರಿಶೀಲನೆ ನಡೆಸಿರುವ ದೊಡ್ಡಬಳ್ಳಾಪುರ ಗ್ರಾಮಾಂತರ ಠಾಣೆ ಪೊಲೀಸರು ತನಿಖೆ ಕೈಗೊಂಡಿದ್ದಾರೆ.
ವಿವಿಯಲ್ಲಿ ಕಳೆದ ಕೆಲವು ತಿಂಗಳಲ್ಲಿ ಮೂವರು ವಿದ್ಯಾರ್ಥಿಗಳು ಸಾವನ್ನಪ್ಪಿದ್ದಾರೆ. ಕಳೆದ ವರ್ಷ ನವಂಬರ್ ನಲ್ಲಿ ವಿದೇಶಿ ವಿದ್ಯಾರ್ಥಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದ. ಫೆಬ್ರವರಿಯಲ್ಲಿ ರೈಲಿಗೆ ಸಿಕ್ಕಿ ಮತ್ತೋರ್ವ ವಿದ್ಯಾರ್ಥಿ ಸಾವನ್ನಪ್ಪಿದ್ದ. ವಿದ್ಯಾರ್ಥಿಗಳ ಈ ಸರಣಿ ಸಾವಿನ ಪ್ರಕರಣಗಳು ಪೋಷಕರನ್ನು ಆತಂಕಕ್ಕೀಡುಮಾಡಿದೆ.