ಗದಗ: ಜಮೀನಿನಲ್ಲಿ ಕೆಲಸ ಮಾಡುತ್ತಿದ್ದ ರೈತರಿಗೆ ಸಿಡಿಲು ಬಡಿದು ಮೂವರು ಸಾವನ್ನಪ್ಪಿದ ಘಟನೆ ಗದಗ ಜಿಲ್ಲೆ ಶಿರಹಟ್ಟಿ ತಾಲೂಕಿನ ಕಡಕೋಳ ಬಳಿ ನಡೆದಿದೆ. ಜಮೀನಿನಲ್ಲಿ ಕೆಲಸ ಮಾಡುತ್ತಿದ್ದ ವೇಳೆ ದುರ್ಘಟನೆ ಸಂಭವಿಸಿದೆ. ಈ ವೇಳೆ 44 ವರ್ಷದ ಮಾರುತಿ ಗೋಗಣ್ಣವರ್, 35 ವರ್ಷದ ಶರಣಪ್ಪ ಅಡವಿ ಹಾಗೂ 23 ವರ್ಷದ ಕುಮಾರ್ ಮಾದರ್ ಎಂಬ ರೈತರು ಸ್ಥಳದಲ್ಲೆ ಮೃತಪಟ್ಟಿದ್ದಾರೆ. ನಾಲ್ವರಿಗೆ ಗಾಯಗಳಾಗಿದ್ದು, ಅವರನ್ನು ಶಿರಹಟ್ಟಿ ತಾಲೂಕು ಆಸ್ಪತ್ರೆ ಹಾಗೂ ಗದಗ ಜಿಮ್ಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಮೃತ ಮೂವರಲ್ಲಿ ಇಬ್ಬರು ಕಡಕೋಳ ಗ್ರಾಮದವರಾಗಿದ್ದು, ಓರ್ವ ರೈತ ಶಿರಹಟ್ಟಿ ನಿವಾಸಿ ಎನ್ನಲಾಗುತ್ತಿದೆ. ಮಳೆ, ಗಾಳಿ ಜೋರಾದ ಕಾರಣ ಜಮೀನಿನಲ್ಲಿದ್ದ ಹುಣಸೆ ಮರದ ಕೆಳಗೆ ಆಸರೆ ಪಡೆದಿದ್ದರು. ಈ ವೇಳೆ ಹುಣಸೆ ಮರಕ್ಕೆ ಸಿಡಿಲು ಬಡಿದಿದೆ.
ಮೃತರನ್ನು ಕಳೆದುಕೊಂಡ ಕುಟುಂಬ ಸದಸ್ಯರ ಆಕ್ರಂದನ ಮುಗಿಲು ಮುಟ್ಟಿದೆ. ಸ್ಥಳಕ್ಕೆ ಶಾಸಕ ರಾಮಣ್ಣ ಲಮಾಣಿ, ಸಿಪಿಐ, ವಿಕಾಸ ಲಮಾಣಿ ಹಾಗೂ ಕಂದಾಯ ನಿರೀಕ್ಷರು ಭೇಟಿನೀಡಿದ್ದಾರೆ. ಗದಗ ಜಿಲ್ಲೆಯ ಶಿರಹಟ್ಟಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇನ್ನೊಂದೆಡೆ ಮುಂಡರಗಿ ತಾಲೂಕಿನ ಡೋಣಿ ಗ್ರಾಮದಲ್ಲಿ ತೆಂಗಿನ ಮರಕ್ಕೆ ಸಿಡಿಲು ಬಡಿದಿದೆ. ಮಹಾಂತೇಶ ಹಣಗಿ ಎಂಬುವರ ಮನೆ ಮುಂದಿನ ತೆಂಗಿನ ಮರಕ್ಕೆ ಸಿಡಿಲು ಬಡಿದಿದೆ.