ವರದಿ: ಶ್ವೇತಾ ಎಸ್.ಕೊಣ್ಣೂರ
ಗದಗ: ಹೋಳಿ ಹಬ್ಬದ ಸಂದರ್ಭದಲ್ಲಿ ಗದಗ್ ವಿಶೇಷ ಸನ್ಬಿವೇಶಕ್ಕೆ ಸಾಕ್ಷಿಯಾಗುತ್ತಿದೆ. ಈ ವರ್ಷವೂ ಎಂದಿನ ಸಡಗರ. ಅದೇ ಸನ್ನಿವೇಶ. ಬಂಗಾರದ ಆಭರಣಗಳಿಂದ ಶೃಂಗಾರ ಗೊಂಡ ರತಿ-ಕಾಮರು ಎಲ್ಲರ ಕುತೂಹಲದ ಕೇಂದ್ರಬಿಂದುವಾಗಿದ್ದರು. ಚಿನ್ನದ ಕಾಮ ರತಿಯರನ್ನು ನೋಡಲು ಭಾರೀ ಸಂಖ್ಯೆಯಲ್ಲಿ ಜನ ಜಮಾಯಿಸಿದ್ದರು.
ಗದಗ ನಗರದ ಕಿಲ್ಲಾ ಓಣಿಯಲ್ಲಿ ಬಂಗಾರ ರತಿ-ಮನ್ಮತರ ಪ್ರಸಂಗ ನೂರಾರು ವರ್ಷಗಳಿಂದ ನಡೆಯುತ್ತಿದೆ. ಇದಕ್ಕೆ ಸರ್ಕಾರಿ ರತಿ-ಕಾಮರು ಎಂತೆಲ್ಲಾ ಕರೆಯುತ್ತಾರೆ. ಇಲ್ಲಿಯ ರತಿಗೆ ಪ್ರತಿವರ್ಷ ಸುಮಾರು 20 ಕೆಜಿಗೂ ಹೆಚ್ಚು ಬಂಗಾರದ ಲೇಪನನಗಳನ್ನ ಧರಿಸಲಾಗುತ್ತದೆ. ಕೆ.ಜಿ.ಗಟ್ಟಲೆ ಚಿನ್ನದ ಸರಗಳಿಂದ ಶೋಭಾಯಮಾನಗೊಳ್ಳುವ ರತಿ-ಮನ್ಮಥರನ್ನು ಅಲಂಕಾರ ಮಾಡುತ್ತಾರೆ. ತಮ್ಮ ಮನೆಯಲ್ಲಿರುವ ಬಂಗಾರ ಈ ರತಿಗೆ ನೀಡಿದ್ರೆ ಬರುವ ವರ್ಷದಲ್ಲಿ ಮತ್ತಷ್ಟು ಬಂಗಾರ ಹೆಚ್ಚಾಗುತ್ತೆ ಎಂಬ ನಂಬಿಕೆ ಸ್ಥಳೀಯರದ್ದು.
ಸುಮಾರು 156 ವರ್ಷಗಳ ಇತಿಹಾಸವಿರುವ ಗದಗ ನಗರದ ರತಿ-ಕಾಮರ ಹೋಳಿ ಆಚರಣೆಗೆ ತನ್ನದೆ ಆದ ವೈಶಿಷ್ಠ್ಯವಿದೆ. ಐದು ದಿನಗಳವರೆಗೆ ಈ ರತಿ ಮನ್ಮಥರನ್ನ ಪ್ರತಿಷ್ಠಾಪಿಸಲಾಗುತ್ತೆ. ಪ್ರತಿ ನಿತ್ಯ ಎರಡು ಭಾರಿ ಸಿಹಿ ಅಡುಗೆ ಎಡೆಮಾಡುವ ಮೂಲಕ ಪೂಜೆ ಮಾಡುತ್ತಾರೆ. ಈ ರತಿ ಕಾಮರಿಗೆ ಗೌರವ ಸಲ್ಲಿಸಿದರೆ ಮದುವೆಯಾಗದವರಿಗೆ ಕಂಕಣ ಭಾಗ್ಯ, ಮಕ್ಕಳಾಗದವರಿಗೆ ಸಂತಾನ ಭಾಗ್ಯ, ನಿರುದ್ಯೋಗಿಗಳಿಗೆ ನೌಕರಿ, ಹೀಗೆ ಬೇಡಿ ಬಂದ ಭಕ್ತರಿಗೆ ಬಯಸಿದ್ದೆಲ್ಲಾ ಸಿಗುತ್ತದೆಂಬುದು ನಂಬಿಕೆ. ಮನೆಯಲ್ಲಿರು ಬಂಗಾರದ ವಡವೆಗಳನ್ನ ರತಿಗೆ ಹಾಕಿದ್ರೆ ಬರುವ ವರ್ಷದಲ್ಲಿ ಹೇಚ್ಚು ಬಂಗಾರ ಲಭಿಸುತ್ತದೆ ಎಂದು ಹಲವರು ಹೇಳಿಕೊಂಡಿದ್ದಾರೆ.
ಗದಗ ನಗರದ ಕಿಲ್ಲಾ ಕಾಲೋನಿಯ ಎಲ್ಲಾ ಮನೆ ಮನೆಗೆ ತೆರಳಿ 20 ಕೆಜಿಗೂ ಅಧಿಕ ಬಂಗಾರ ವಸ್ತುಗಳನ್ನ ಸಂಗ್ರಹಿಸುತ್ತಾರೆ. ಈ ಬಂಗಾರದ ರತಿ-ಕಾಮರನ್ನ ನೋಡಲು ಅನೇಕ ಭಕ್ತ ಸಮೂಹವೇ ಹರಿದು ಬರುತ್ತದೆ. ಜನರು ತಮ್ಮ ಬೇಡಿಕೆಗಳನ್ನು ಸರ್ಕಾರದ ಮುಂದೆ ಇಟ್ಟರೆ ಅದು ಈಡೇರುತ್ತದೋ ಇಲ್ಲವೋ ಗೊತ್ತಿಲ್ಲ. ಕೊರಳಲ್ಲಿ ಕೆ.ಜಿ.ಗಟ್ಟಲೆ ಚಿನ್ನದ ಸರ ಹಾಕ್ಕೊಂಡು ಮೆರೆಯುವ ಗದುಗಿನ ಸರಕಾರಿ ರತಿಕಾಮರೆದುರು ಬೇಡಿಕೊಂಡ್ರೆ ಇಡೆರುತ್ತವೆ ಎಂಬ ಇಲ್ಲಿನ ಜನರ ನಂಬಿಕೆ. ಈ ರೀತಿಯ ಅನನ್ಯ ಪ್ರಸಂಗಕ್ಕೆ ಈ ಊರು ಸಾಕ್ಷಿಯಾಯಿತು.