ನವದೆಹಲಿ: ಭಾರತದ ಮುಖ್ಯ ನ್ಯಾಯಮೂರ್ತಿ ಭೂಷಣ್ ರಾಮಕೃಷ್ಣ ಗವಾಯಿ ಅವರು ನವೆಂಬರ್ನಲ್ಲಿ ನಿವೃತ್ತಿ ಹೊಂದುತ್ತಿದ್ದು, ತಮ್ಮ ಉತ್ತರಾಧಿಕಾರಿಯಾಗಿ ನ್ಯಾಯಮೂರ್ತಿ ಸೂರ್ಯಕಾಂತ್ ಅವರನ್ನು ನಾಮನಿರ್ದೇಶನ ಮಾಡಿದ್ದಾರೆ. ಸಿಜೆಐ ಗವಾಯಿ ಅವರು ನವೆಂಬರ್ 23 ರಂದು ನಿವೃತ್ತಿಯಾಗಲಿದ್ದು, ನ್ಯಾಯಮೂರ್ತಿ ಸೂರ್ಯಕಾಂತ್ ಹಿರಿತನದ ಆಧಾರದ ಮೇಲೆ ಭಾರತದ 53ನೇ ಮುಖ್ಯ ನ್ಯಾಯಮೂರ್ತಿ ಆಗಿ ಅಧಿಕಾರ ವಹಿಸಿಕೊಳ್ಳಲಿದ್ದಾರೆ.
1962ರ ಫೆಬ್ರವರಿ 10ರಂದು ಹರಿಯಾಣದ ಹಿಸಾರ್ನಲ್ಲಿ ಜನಿಸಿದ ನ್ಯಾಯಮೂರ್ತಿ ಸೂರ್ಯಕಾಂತ್, 1981ರಲ್ಲಿ ಅಲ್ಲಿನ ಸರ್ಕಾರಿ ಸ್ನಾತಕೋತ್ತರ ಕಾಲೇಜಿನಿಂದ ಪದವಿ ಪಡೆದರು ಹಾಗೂ 1984ರಲ್ಲಿ ರೋಹ್ಟಕ್ನ ಮಹರ್ಷಿ ದಯಾನಂದ ವಿಶ್ವವಿದ್ಯಾಲಯದಿಂದ ಎಲ್ಎಲ್ಬಿ ಪದವಿ ಪಡೆದರು. ಅದೇ ವರ್ಷ ಹಿಸಾರ್ ಜಿಲ್ಲಾ ನ್ಯಾಯಾಲಯದಲ್ಲಿ ವಕೀಲರಾಗಿ ವೃತ್ತಿ ಜೀವನ ಪ್ರಾರಂಭಿಸಿದ ಅವರು, ನಂತರ ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್, ಚಂಡೀಗಢಕ್ಕೆ ಸೇರಿದರು.
2000ರಲ್ಲಿ ಅವರು ಹರಿಯಾಣದ ಅಡ್ವೊಕೇಟ್ ಜನರಲ್ ಆಗಿ ನೇಮಕಗೊಂಡರು ಮತ್ತು 2001ರಲ್ಲಿ ಹಿರಿಯ ವಕೀಲರ ಪಟ್ಟ ಪಡೆದರು. ಅದೇ ವರ್ಷ ಅವರು ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್ನ ನ್ಯಾಯಾಧೀಶರಾದರು. 2018ರಲ್ಲಿ ಅವರನ್ನು ಹಿಮಾಚಲ ಪ್ರದೇಶ ಹೈಕೋರ್ಟ್ನ ಮುಖ್ಯ ನ್ಯಾಯಮೂರ್ತಿಯಾಗಿ ನೇಮಿಸಲಾಯಿತು. 2019ರಲ್ಲಿ ಅವರು ಸುಪ್ರೀಂ ಕೋರ್ಟ್ಗೆ ಬಡ್ತಿ ಪಡೆದರು.
ಸಂವಿಧಾನಪೀಠದ ಪ್ರಮುಖ ತೀರ್ಪುಗಳಲ್ಲಿ ಪಾತ್ರ
ಸುಪ್ರೀಂ ಕೋರ್ಟ್ನಲ್ಲಿದ್ದ ಅವಧಿಯಲ್ಲಿ ನ್ಯಾಯಮೂರ್ತಿ ಸೂರ್ಯಕಾಂತ್ ಹಲವು ಪ್ರಮುಖ ಸಂವಿಧಾನಪೀಠ ತೀರ್ಪುಗಳಲ್ಲಿ ನಿರ್ಣಾಯಕ ಪಾತ್ರವಹಿಸಿದ್ದಾರೆ. ವಿಶೇಷವಾಗಿ 370ನೇ ವಿಧಿಯ ರದ್ದುಪಡಿಸುವ ಸಾಂವಿಧಾನಿಕ ಸಿಂಧುತ್ವವನ್ನು ದೃಢಪಡಿಸಿದ ತೀರ್ಪಿನಲ್ಲಿ ಅವರ ಪಾತ್ರ ಗಮನಾರ್ಹವಾಗಿದೆ.
ಸಂವಿಧಾನ, ಮಾನವ ಹಕ್ಕುಗಳು ಮತ್ತು ಸಾರ್ವಜನಿಕ ಹಿತಾಸಕ್ತಿಗೆ ಸಂಬಂಧಿಸಿದ ಸಾವಿರಕ್ಕೂ ಹೆಚ್ಚು ತೀರ್ಪುಗಳಲ್ಲಿ ಅವರು ತಮ್ಮ ನ್ಯಾಯತತ್ತ್ವ ಮತ್ತು ಸಾಮಾಜಿಕ ದೃಷ್ಟಿಕೋಣವನ್ನು ಪ್ರದರ್ಶಿಸಿದ್ದಾರೆ.
ನ್ಯಾಯಮೂರ್ತಿ ಸೂರ್ಯಕಾಂತ್ ಅವರ ನೇತೃತ್ವದಲ್ಲಿ ಸುಪ್ರೀಂ ಕೋರ್ಟ್ಗೆ ನಿಷ್ಠೆ, ನೈತಿಕತೆ ಮತ್ತು ನ್ಯಾಯದ ತಾತ್ತ್ವಿಕ ಬಲ ಮತ್ತಷ್ಟು ಬಲವರ್ಧನೆಗೊಳ್ಳಲಿದೆ ಎಂಬ ವಿಶ್ವಾಸವನ್ನು ನ್ಯಾಯಾಂಗ ವಲಯ ವ್ಯಕ್ತಪಡಿಸಿದೆ.



























































