ಈಶ್ವರಪ್ಪ ಹೇಳಿಕೆ ಬಗ್ಗೆ ಆರೆಸ್ಸೆಸ್ ಕಾರ್ಯಕರ್ತರ ಹಾಗೂ ಬಿಜೆಪಿ ಕಾರ್ಯಕರ್ತರ ಆಭಿಪ್ರಾಯ ಹೀಗಿದೆ..
ಬೆಂಗಳೂರು: ಸಚಿವ ಈಶ್ವರಪ್ಪ ಅವರ ಲೂಸ್ ಟಾಕ್ ಇದೀಗ ಬಿಜೆಪಿಗೆ ಮುಜುಗರದ ಸನ್ನಿವೇಶವನ್ನು ತಂದೊಡ್ಡಿದೆ. ಭಗವಾಧ್ವಜವನ್ನು ಆರಾಧಿಸುವ ಸಂಘ ಪರಿವಾರ, ರಾಷ್ಟ್ರಧ್ವಜವನ್ನು ಗೌರವಿಸುತ್ತಾ ಬಂದಿದೆ. ಭಗವಾಧ್ವಜವನ್ನು ‘ಗುರು’ ಸ್ಥಾನದಲ್ಲಿರಿಸಿ ಕಾರ್ಯಕರ್ತರು ದೇಶಪ್ರೇಮದ ಶಿಕ್ಷಣ ಪಡೆಯುತ್ತಾರಾದರೂ ತ್ರಿವರ್ಣ ಧ್ವಜವನ್ನೇ ರಾಷ್ಟ್ರಧ್ವಜವೆಂದೇ ಪರಿಗಣಿಸಿದ್ದಾರೆ. ಆದರೆ ಈಶ್ವರಪ್ಪ ಅವರ ಹೇಳಿಕೆ ಬಿಜೆಪಿಗೆ ಮಾತ್ರವಲ್ಲ, ಸಂಘದ ಕಾರ್ಯಕರ್ತರಿಗೂ ಮುಜುಗರದ ಸನ್ನಿವೇಶ ಸೃಷ್ಟಿಸಿದೆ.
ರಾಷ್ಟ್ರಧ್ವಜವನ್ನು ಸುಟ್ಟವರಿಗೆ ಬಿರಿಯಾನಿ ತಿನ್ನಿಸಿದ್ದ ಕಾಂಗ್ರೆಸನ್ನು ಮೊಣಚು ಮಾತಿನಿಂದಲೇ ತಿವಿಯುತ್ತಾ ಬಂದಿರುವ ಬಿಜೆಪಿ ಧುರೀಣರೂ ಇದೀಗ ಈಶ್ವರಪ್ಪ ಹೇಳಿಕೆಯಿಂದ ಇಕ್ಕಟ್ಟಿನಲ್ಲಿ ಸಿಲುಕಿದ್ದಾರೆ.
ಎಡವಿದ್ದು ಸಿದ್ದಾಂತದಲ್ಲಿ ಅಲ್ಲ, ವಾಕ್ ವೈಖರಿಯಲ್ಲಿ..?
ಅಖಂಡ ಭಾರತದ ಪರಿಕಲ್ಪನೆ ಹೊಂದಿರುವ ಆರೆಸ್ಸೆಸ್, ಭಗವಾಧ್ವಜಕ್ಕೆ ಆದ್ಯ ಗೌರವ ಕೊಡುತ್ತಲೇ ಬಂದಿದೆ. ಸ್ವಾತಂತ್ರ್ಯ ಸಂದರ್ಭದಲ್ಲಿ ರಾಷ್ಟ್ರಧ್ವಜ ಆಯ್ಕೆ ವೇಳೆ ಭಗವಾಧ್ವಜವು ರಾಷ್ಟ್ರಧ್ವಜ ಆಗಬೇಕೆಂಬ ಅಪೇಕ್ಷೆಯು ಸಂಘದವರಂತೆಯೇ ಇತರ ನಾಯಕರದ್ದೂ ಆಗಿತ್ತು ಎಂಬುದೂ ಇತಿಹಾಸ. ಆದರೆ ಬದಲಾದ ಪರಿಸ್ಥಿತಿಯಲ್ಲಿ ಅಂತಿಮವಾಗಿ ತ್ರಿವರ್ಣ ಧ್ವಜವೇ ಒಪ್ಪಿಗೆಯೆನಿಸಿದೆ. ಈ ಮಧ್ಯೆ, ತಿರಂಗದ ನಡುವೆ ಚರಕ ಇದ್ದುದೂ ಸ್ಪಷ್ಟ. ಅದೂ ಪರಿವರ್ತನೆಯಾಗಿ ಇದೀಗ ತಿರಂಗದ ಮಧ್ಯೆ ಚಕ್ರ ಇದೆ. ಅಂದರೆ ಬದಲಾವಣೆಯಾಗಿರುವುದೂ ಸತ್ಯ. ಈ ಬದಲಾವಣೆಯು ಮುಂದೆ ‘ಕೇಸರಿ’ಮಯ ಆಗವಹುದೆಂಬ ಅಭಿಪ್ರಾಯವನ್ನು ಈಶ್ವರಪ್ಪ ಹೇಳಿದ್ದಾರೆ. ಆದರ ಸಿದ್ದಾಂತ ಸರಿಯೆನಿಸಿದ್ದರೂ ಸಮಯ, ಸಂದರ್ಭ ಹಾಗೂ ವಾಕ್‌ವೈಖರಿ ಮಾತ್ರ ಸಮರ್ಪಕವಾಗಿರಲಿಲ್ಲ.
ರಾಷ್ಟ್ರ ಧ್ವಜವನ್ನು ಅರೆಸ್ಸೆಸ್ ಎಂದೂ ತಿರಸ್ಕರಿಸಿಲ್ಲ..
ಈ ನಡುವೆ ಸಂಘವು ರಾಷ್ಟ್ರಧ್ವಜವನ್ನು ತಿರಸ್ಕರಿಸಿದ ಇತಿಹಾಸ ಇಲ್ಲ ಎಂಬುದು ಕಾರ್ಯಕರ್ತರ ಸಮರ್ಥನೆ. ಅಷ್ಟೇ ಅಲ್ಲ, ಭಗವಾಧ್ವಜವನ್ನು ಸಂಘಟನೆ ಹಾಗೂ ಸಂಘದ ಕಾರ್ಯಕ್ರಮಗಳಿಗಷ್ಟೇ ಸೀಮಿತಗೊಳಿಸಲಾಗಿದೆ. ದೇಗುಲ ಅಥವಾ ಧಾರ್ಮಿಕ ಕಾರ್ಯಕ್ರಮಗಳಲ್ಲೂ ಓಂಕಾರ ಧ್ವಜಗಳು ರಾರಾಜಿಸಿವೆಯೋ ಹೊರತು ಭಗವಾಧ್ವಜವನ್ನು ಬಳಕೆ ಮಾಡಿಲ್ಲ. ಅ ಮೂಲಕ ಈ ಭಗವಾಧ್ವಜ ತನ್ನ ಪಾವಿತ್ರ್ಯವನ್ನು ಉಳಿಸಿಕೊಂಡಿದೆ ಎಂಬುದು ಆರೆಸ್ಸೆಸ್ ಕಾರ್ಯಕರ್ತರ ಅಭಿಮತ.
ಸ್ಥಾನ ಭದ್ರತೆಗಾಗಿ ‘ಕೇಸರಿ’ ಬಳಕೆ..?
ಪ್ರಸ್ತುತ, ರಾಜ್ಯ ರಾಜಕಾರಣದಲ್ಲಿ ವಿವಾದದ ತಲ್ಲಣ ಸೃಷ್ಟಿಸಿರುವ ಈಶ್ವರಪ್ಪ ಹೇಳಿಕೆ ಬಗ್ಗೆ ಸಂಘ ಹಾಗೂ ಬಿಜೆಪಿ ಕಾರ್ಯಕರ್ತರಲ್ಲೇ ಅಸಮಾಧಾನ ಉಂಟಾಗಿದೆ. ಒಂದೊಮ್ಮೆ ಪಕ್ಷದ ಸಂಘಟನೆಯಲ್ಲಿ ಅವರು ಭಾಗಿಯಾಗಿದ್ದರೂ ಈಗ ಸಂಘಟನೆಯಲ್ಲಿ ಈಶ್ವರಪ್ಪ ಅವರ ಪಾತ್ರವೇನು? ಎಂದು ಪ್ರಶ್ನಿಸುತ್ತಿದ್ದಾರೆ ಕಮಲ ಕಾರ್ಯಕರ್ತರು. ಭ್ರಷ್ಟಾಚಾರ ಹಾಗೂ ಕಾರ್ಯಕರ್ತರನ್ನು ನಿರ್ಲಕ್ಷಿಸುತ್ತಿದ್ದಾರೆ ಎಂಬ ಆರೋಪದಿಂದ ನುಣುಚಿಕೊಳ್ಳಲು ಈಶ್ವರಪ್ಪ ಅವರು ಈ ರೀತಿ ನಡೆದುಕೊಳ್ಳುತ್ತಿದ್ದಾರೆಂಬುದು ಬಹುತೇಕ ಬಿಜೆಪಿ ಸೇನಾನಿಗಳ ಆಕ್ರೋಶ.
ಕಾರ್ಯಕರ್ತರ ಈ ಅಭಿಪ್ರಾಯದಲ್ಲೂ ಅರ್ಥವಿದೆ. ಈಶ್ವರಪ್ಪ ಸಹಿತ ಹಲವು ಶಾಸಕರು, ಸಂಸದರು ಕಾರ್ಯಕರ್ತರ ಶ್ರಮದಿಂದ ಆಯ್ಕೆಯಾದರೂ ಅವರು ಕಾರ್ಯಕರ್ತರನ್ನು ನಿರ್ಲಕ್ಷಿಸಿದ್ದಾರೆ ಎಂಬ ಆಕ್ರೋಶ ಹಲವರದ್ದು. ಇಂತಹಾ ನಾಯಕರು ಸಂಘಟನೆಯತ್ತ ಆದ್ಯತೆ ನೀಡುವ ಬದಲು ತಮ್ಮ ಕುಟುಂಬ ಸದಸ್ಯರ ಸಿರಿವಂತಿಕೆ, ಸ್ಥಾನಮಾನಕ್ಕೆ ಆದ್ಯತೆ ನೀಡುತ್ತಿರುವುದೇ ಹೆಚ್ಚು ಎಂಬುದು ಸಂಘ ಸ್ಥಾನದಿಂದ ಕಾರ್ಯಕ್ಷೇತ್ರಕ್ಕೆ ಬಂದಿರುವವರ ಅಸಮಾಧಾನದ ಮಾತುಗಳು. ಈ ನಾಯಕರು ‘ಕೇಸರಿ’ ಪದವನ್ನು ತಮ್ಮ ಸ್ಥಾನ ಭದ್ರತೆಗೆ ಬಳಕೆ ಮಾಡುತ್ತಿದ್ದಾರಲ್ಲ ಎಂದು ಕಾರ್ಯಕರ್ತರು ತಮ್ಮ ಬೇಸರವನ್ನು ಹಂಚಿಕೊಂಡಿದ್ದಾರೆ.