ಬೆಂಗಳೂರು: ಕೇಸರಿ ಧ್ವಜ ಕುರಿತಂತೆ ಈಶ್ವರಪ್ಪ ಹೇಳಿಕೆ ವಿರುದ್ದ ಕಾಂಗ್ರೆಸ್ ನಾಯಕರು ಸಮರ ಸಾರಿರುವ ವೈಖರಿಯನ್ನು ಬಿಜೆಪಿ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಟೀಕಿಸಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ ಪ್ರತಿಕ್ರಿಯಿಸಿದ ರವಿ, ಕೇಸರಿ ಬಾವುಟ ಹಾರಿಸುವ ವಿಚಾರದಲ್ಲಿ ಈಗಾಗಲೇ ಸಚಿವ ಈಶ್ವರಪ್ಪ ಸ್ಪಷ್ಟನೆ ನೀಡಿದ್ದಾರೆ ಎಂದರು. ಸಚಿವ ಈಶ್ವರಪ್ಪ ಅವರು ಅಪ್ಪಟ ದೇಶ ಭಕ್ತ, ಅದರಲ್ಲಿ ಅನುಮಾನ ಬೇಡ ಎಂದ ಸಿ.ಟಿ.ರವಿ,. ನಾವು ಯಾವಾಗಲೂ ರಾಷ್ಟ್ರ ಧ್ವಜಕ್ಕೆ ಮೊದಲ ಆದ್ಯತೆ ನೀಡಿದ್ದೇವೆ. ರಾಷ್ಟ್ರ ಧ್ವಜಕ್ಕಿಂತ ಮೇಲೆ ಭಗವಾಧ್ವಜ ಹಾರಬೇಕೆಂದು ಯಾವತ್ತೂ ಹೇಳಿಲ್ಲ. ಆದರೆ, ಭಗವಾಧ್ವಜಕ್ಕೂ ಒಂದು ಸ್ಥಾನ ಇದೆ ಎಂದರು.
ತ್ರಿವರ್ಣ ಧ್ವಜಕ್ಕೂ ಮೊದಲು ದೇಶದಲ್ಲಿ ಕಾಂಗ್ರೆಸ್‌ನ ಚರಕ ಇರುವ ಧ್ವಜ ಇತ್ತು, ತ್ರಿವರ್ಣ ಧ್ವಜ ಎಲ್ಲಿಯವರೆಗೆ ಇರುತ್ತದೆಯೋ ಅಲ್ಲಿಯವರೆಗೂ ರಾಷ್ಟ್ರಧ್ವಜ ಅದೇ ಆಗಿರುತ್ತದೆ ಎಂದರು.