ದೊಡ್ಡಬಳ್ಳಾಪುರ: ಬೆಳಕಿಗಾಗಿ ಹಚ್ಚಿಟ್ಟಿದ್ದ ದೀಪ ಕೆಳಗೆ ಬಿದ್ದು ಹೊತ್ತಿಕೊಂಡ ಬೆಂಕಿಗೆ ವೃದ್ದರೊಬ್ಬರು ಸಾವಿಗೀಡಾದ ಘಟನೆ ನಗರದ ಕಛೇರಿಪಾಳ್ಯದಲ್ಲಿ ಕಳೆದ ರಾತ್ರಿ 11 ಗಂಟೆ ಸುಮಾರಿಗೆ ನಡೆದಿದೆ.ರಾಮಾಂಜಿನಪ್ಪ ( 70 ವರ್ಷ) ಘಟನೆಯಲ್ಲಿ ಮೃತಪಟ್ಟವರು.
ಮನೆಗೆ ವಿದ್ಯುತ್ ಸಂಪರ್ಕವಿಲ್ಲದ ಕಾರಣ ಮನೆಯಲ್ಲಿ ಬೆಳಕಿಗೆಂದು ದೀಪ ಹಚ್ಚಲಾಗಿತ್ತು, ಈ ವೇಳೆ ದೀಪ ಕೆಳಗೆ ಬಿದ್ದು ಮನೆಯಲ್ಲಿದ್ದ ಬಟ್ಟೆಗಳ ಗಂಟಿಗೆ ಅಂಟಿಕೊಂಡಿದೆ. ಕುಳಿತರೆ ಎದ್ದೇಳಲಾಗದ ಪರಿಸ್ಥಿತಿಯಲ್ಲಿರುವ ವೃದ್ದ ರಾಮಾಂಜಿನಪ್ಪ ಬೆಂಕಿ ನಂದಿಸಲಾಗದೆ ಮಲಗಿದ್ದಲ್ಲೆ ನರಳಾಡಿ ಸಾಗಿವೀಡಾಗಿದ್ದಾರೆ. ಬೆಂಕಿಯ ಕೆನ್ನಾಲಗೆ ನೋಡು ನೋಡುತ್ತಿದ್ದಂತೆ ಮನೆಯನ್ನೆಲ್ಲಾ ಆವರಿಸಿ ಮನೆಯಲ್ಲಿದ್ದ ವಸ್ತುಗಳೆಲ್ಲ ಸುಟ್ಟು ಭಸ್ಮವಾಗಿವೆ.
ಸ್ಥಳಕ್ಕೆ ಭೇಟಿ ನೀಡಿದ ಅಗ್ನಿಶಾಮಕ ಸಿಬ್ಬಂದಿ ಮೃತದೇಹವನ್ನು ಹೊರ ತೆಗೆದು ಬೆಂಕಿಯನ್ನು ನಂದಿಸಿದ್ದಾರೆ. ನಗರ ಠಾಣಾ ಪೊಲೀಸರು ಸ್ಥಳ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.