ಬೆಂಗಳೂರು: ರಾಜ್ಯ ಹಿಂದುಳಿದ ವರ್ಗಗಳ ಆಯೋಗ ನಡೆಸಲಿರುವ ಶೈಕ್ಷಣಿಕ ಹಾಗೂ ಸಾಮಾಜಿಕ ಸಮೀಕ್ಷೆ–2025ರಲ್ಲಿ ಪಾಲ್ಗೊಳ್ಳುವ ಆಶಾ ಕಾರ್ಯಕರ್ತೆಯರಿಗೆ ₹2,000 ಗೌರವಧನ ನೀಡುವುದಾಗಿ ರಾಜ್ಯ ಸರ್ಕಾರ ಬುಧವಾರ ಘೋಷಿಸಿದೆ.
ಸೆಪ್ಟೆಂಬರ್ 22ರಿಂದ ಅಕ್ಟೋಬರ್ 10ರವರೆಗೆ ನಡೆಯುವ ಈ ಸಮೀಕ್ಷೆಯಲ್ಲಿ ಆಶಾ ಕಾರ್ಯಕರ್ತೆಯರು ಶೇ.90ರಷ್ಟು ಮನೆಗಳಿಗೆ ಭೇಟಿ ನೀಡಿ ಜಾಗೃತಿ ಅಭಿಯಾನ ಅಪ್ಲಿಕೇಶನ್ ಮೂಲಕ ಯೂಎಚ್‌ಐಡಿ ಸಂಖ್ಯೆ ಹಾಗೂ ಮೊಬೈಲ್ ನಂಬರನ್ನು ಸಂಗ್ರಹಿಸುವ ಜವಾಬ್ದಾರಿ ಹೊಂದಿರುತ್ತಾರೆ. ಈ ಕಾರ್ಯಕ್ಕೆ ಅಗತ್ಯವಿರುವ ಮೊತ್ತವನ್ನು ಹಿಂದುಳಿದ ವರ್ಗಗಳ ಆಯೋಗದ ಬಜೆಟ್ ಶೀರ್ಷಿಕೆಯಡಿ ಬಿಡುಗಡೆ ಮಾಡಲಾಗಿದ್ದು, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಮೂಲಕ ವಿತರಿಸಲಾಗುತ್ತದೆ.
ಆದರೆ, ಸರ್ಕಾರದ ಈ ನಿರ್ಧಾರಕ್ಕೆ ಆಶಾ ಕಾರ್ಯಕರ್ತೆಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. “ವೇತನ ಸಂಬಂಧಿ ಬೇಡಿಕೆಗಳನ್ನು ಇಂದಿಗೂ ಸರ್ಕಾರ ಪೂರೈಸಿಲ್ಲ. ಇಂತಹ ಸಂದರ್ಭದಲ್ಲಿ ಹೆಚ್ಚುವರಿ ಹೊರೆ ವಹಿಸುವುದು ಅನ್ಯಾಯ” ಎಂದು ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘದ ಕಾರ್ಯದರ್ಶಿ ಡಿ. ನಾಗಲಕ್ಷ್ಮಿ ಆರೋಪಿಸಿದ್ದಾರೆ.
“ಸರ್ಕಾರ ನೀಡಿರುವ ಆದೇಶ ಮತ್ತು ವಾಸ್ತವಿಕವಾಗಿ ವಹಿಸಿರುವ ಕೆಲಸಗಳ ನಡುವೆ ವ್ಯತ್ಯಾಸವಿದೆ. ಅರಿವು ಮೂಡಿಸುವುದು, ಸ್ಟಿಕ್ಕರ್ ಅಂಟಿಸುವುದು, ಅದರ ಜೊತೆಗೆ ಆನ್‌ಲೈನ್ ಮಾಹಿತಿ ಸಂಗ್ರಹಿಸುವುದು ಕಷ್ಟಸಾಧ್ಯ. ಇದಕ್ಕಾಗಿ ಮೊಬೈಲ್, ಇಂಟರ್ನೆಟ್ ಸೌಲಭ್ಯ ಬೇಕಾಗುತ್ತದೆ. ಆದರೆ ಸರ್ಕಾರ ಯಾವುದೇ ವ್ಯವಸ್ಥೆ ಕಲ್ಪಿಸಿಲ್ಲ. ಕೇವಲ ಜಾಗೃತಿ ಮೂಡಿಸುವ ಕಾರ್ಯ ಮಾಡಿಸಿದರೆ ಪರವಾಗಿಲ್ಲ. ಆದರೆ ಹೆಚ್ಚುವರಿ ಹೊರೆ ಹಾಕಿದರೆ ಒಪ್ಪಿಕೊಳ್ಳುವುದಿಲ್ಲ” ಎಂದು ಅವರು ಸ್ಪಷ್ಟಪಡಿಸಿದ್ದಾರೆ.
























































