ದೊಡ್ಡಬಳ್ಳಾಪುರ : ಇಂದಿನ ಗ್ರಾಮ ಪಂಚಾಯತಿ ಚುನಾವಣೆಗಳ ಪರಿಸ್ಥಿತಿ ಬದಲಾವಣೆಯಾಗಿದೆ. ಗ್ರಾಮ ಪಂಚಾಯತಿಗೆ ಶಕ್ತಿ ತುಂಬಿದವರು ಮಾಜಿ ಪ್ರಧಾನಿ ರಾಜೀವ್ ಗಾಂಧಿ, ಗ್ರಾಮ ಪಂಚಾಯತಿಗಳನ್ನು ಸದೃಢಗೊಳಿಸುವ ಹೊಣೆ ನಮ್ಮ ಮೇಲಿದೆ ಎಂದು ರಾಜ್ಯಸಭಾ ಸದಸ್ಯ ಎಲ್ ಹನುಮಂತಯ್ಯ ಹೇಳಿದ್ದಾರೆ.
ಇತ್ತೀಚೆಗೆ ನಡೆದ ಗ್ಅಮ ಪಂಚಾಯತ್ ಚುನಾವಣೆಯಲ್ಲಿ ಗೆದ್ದ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳನ್ನು ದೊಡ್ಡಬಳ್ಳಾಪುರದ ಒಕ್ಕಲಿಗರ ಸಮುದಾಯ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು. ಈ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದ ಎಲ್.ಹನುಮಂತಯ್ಯ, ದೇಶದ ಎಲ್ಲ ಗ್ರಾಮ ಪಂಚಾಯತ್ ಗಳಿಗೆ ಹೆಚ್ಚು ಬಲ ತುಂಬಿದ ನಮ್ಮ ನಾಯಕರ ಉದ್ದೇಶವನ್ನ ನಾವು ಸಾಕಾರ ಮಾಡಬೇಕು, ಮಹಿಳೆಯರು ತಮಗೆ ಒಲಿದು ಬಂದ ಸ್ಥಾನಮಾನವನ್ನು ಸದುಪಯೋಗ ಪಡಿಸಿಕೊಳ್ಳಬೇಕು ಎಂದರು.
ಶಾಸಕ ಟಿ.ವೆಂಕಟರಮಣಯ್ಯ ಮಾತನಾಡಿ ತಾಲ್ಲೂಕಿನ 29 ಗ್ರಾಮ ಪಂಚಾಯತಿಗಳಲ್ಲಿ 25 ಗ್ರಾಮ ಪಂಚಾಯತಿಗಳಿಗೆ ಚುನಾವಣೆ ನಡೆದಿದೆ. ಕಾಂಗ್ರೆಸ್ ಬೆಂಬಲದಿಂದ 199 ಮಂದಿ ಅಭ್ಯರ್ಥಿಗಳು ಆಯ್ಕೆಯಾಗಿದ್ದಾರೆ. 14 ಗ್ರಾಮ ಪಂಚಾಯತಿಗಳಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಬಹುಮತ ಪಡೆದಿದ್ದಾರೆ. ಕೆಲವೆಡೆ ಅತಂತ್ರ ಸ್ಥಿತಿ ಇದ್ದು, ಪಕ್ಷೇತರ ಬೆಂಬಲದಿಂದ ಚುಕ್ಕಾಣಿ ಹಿಡಿಯಲಾಗುವುದು ಎಂದರು.
ಕೆಎಂಎಫ್ ಹಾಗೂ ಬಮೂಲ್ ನಿರ್ದೇಶಕ ಬಿ.ಸಿ.ಆನಂದ್ ಕುಮಾರ್ ಮಾತನಾಡಿ, ಗ್ರಾಮ ಪಂಚಾಯತಿಗಳಲ್ಲಿ ಸೋತ ಯಾವುದೇ ಅಭ್ಯರ್ಥಿಗಳು ಎದೆಗುಂದದೆ ಇನ್ನಷ್ಟು ಶ್ರಮ ವಹಿಸಿ ಕಾರ್ಯ ನಿರ್ವಹಿಸಬೇಕು. ಪಕ್ಷಸಂಘಟನೆಯಲ್ಲಿ ನಿರತರಾಗಬೇಕು ಇಂದಿನ ನಿಮ್ಮ ಸೋಲು ಉತ್ತಮ ಜಯದ ಹಾದಿಯಾಗಬೇಕು ಎಂದರು.
ಎಂಎಲ್ ಸಿ ರವಿ ಮಾತನಾಡಿ ಗ್ರಾಮ ಪಂಚಾಯತಿ ಗಳು ದೇಶದ ಅಭಿವೃದ್ದಿಯ ಅಡಿಪಾಯಗಳು. ಗ್ರಾಮ ಪಂಚಾಯತಿ ಗಳು ಅಭಿವೃದ್ಧಿಯಾದರೆ ದೇಶ ಅಭಿವೃದ್ಧಿಯಾಗುವಲ್ಲಿ ಯಾವುದೇ ಸಂಶಯವಿಲ್ಲ. ಸ್ಥಳೀಯ ಸಂಸ್ಥೆಗಳಲ್ಲಿ ಕಾಂಗ್ರೆಸ್ ಪಕ್ಷ ಸದೃಢವಾಗಿದೆ, ಇನ್ನಷು ಬಲವಾಗಿ ಪಕ್ಷಸಂಘಟನೆಗೆ ಎಲ್ಲಾ ಕಾರ್ಯಕರ್ತರು ಮತ್ತು ಚುನಾಯಿತ ಅಭ್ಯರ್ಥಿಗಳು ಹಾಗೂ ಮುಖಂಡರು ಶ್ರಮಿಸಬೇಕು ಎಂದರು.
ಕಾರ್ಯಕ್ರಮದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಭೈರೇಗೌಡ, ತಾ.ಪಂ ಮಾಜಿ ಅಧ್ಯಕ್ಷರಾದ ಶ್ರೀವತ್ಸ, ಶಶಿಧರ್, ಎಪಿಎಂಸಿ ಅಧ್ಯಕ್ಷ ವಿಶ್ವನಾಥ್, ಮಾಜಿ ಅಧ್ಯಕ್ಷ ರಂಗರಾಜು, ಜಿಲ್ಲಾ ಎಸ್.ಸಿ ಘಟಕ ಉಪಾಧ್ಯಕ್ಷ ಎಸ್.ಯು ರಮೇಶ್, ಮುಖಂಡರಾದ ಆಂಜನಮೂರ್ತಿ, ರಾಮಕೃಷ್ಣ, ಕೆಂಪಣ್ಣ, ಕೊನಘಟ್ಟ ರಮೇಶ್ ಮೊದಲಾದ ಗಣ್ಯರು ಉಪಸ್ಥಿತರಿದ್ದರು..