ದೊಡ್ಡಬಳ್ಳಾಪುರ: ಕರೊನಾ ಮಹಾಮಾರಿ ಬಂದ ಬಳಿಕ ದೇಶದಲ್ಲಿ ಆಯುಷ್ ಚಿಕಿತ್ಸಾ ವಿಧಾನದತ್ತ ಮುಖಮಾಡುತ್ತಿದ್ದಾರೆ. ಆಯುಷ್ ಚಿಕಿತ್ಸೆಯಲ್ಲಿ ಮನುಷ್ಯನಿಗೆ ಬೇಕಾದ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವ ಗುಣ ಇದೆ ಎಂದು ತಾಲ್ಲೂಕು ವೈದ್ಯಾಧಿಕಾರಿ ಡಾ. ತಸ್ಲಿಮಾ ಹೇಳಿದ್ದಾರೆ.
ದೊಡ್ಡಬಳ್ಳಾಪುರ ಸಮೀಪದ ಸೊಣ್ಣಪ್ಪನಹಳ್ಳಿ ಗ್ರಾಮದಲ್ಲಿ ತಾಲ್ಲೂಕು ಆಯುಷ್ ಇಲಾಖಾ ವತಿಯಿಂದ ಹಮ್ಮಿಕೊಂಡಿದ್ದ ಆಯುಷ್ ಸೇವಾ ಗ್ರಾಮ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಪ್ರತಿಯೊಬ್ಬ ಸಾರ್ವಜನಿಕರಲ್ಲಿ ಆಯುಷ್ ಚಿಕಿತ್ಸೆ ಬಗ್ಗೆ ಅರಿವು ಮೂಡಿಸಿ, ಆಯುಷ್ ಚಿಕಿತ್ಸೆಯ ಉಪಯೋಗಗಳನ್ನು ಜನರಿಗೆ ತಿಳಿಸುವ ನಿಟ್ಟಿನಲ್ಲಿ ಹಮ್ಮಿಕೊಂಡಿರುವ ಯೋಜನಯೇ ಆಯುಷ್ ಸೇವಾಗ್ರಾಮ ಕಾರ್ಯಕ್ರಮ ಎಂದರು. ಅಂತೆಯೇ ಸೊಣ್ಣಪ್ಪನಹಳ್ಳಿ ಗ್ರಾಮದಲ್ಲಿ ಜನತೆಯ ಎಲ್ಲರ ಆರೋಗ್ಯವನ್ನು ತಪಾಸಣೆ ಮಾಡಲಾಗಿದೆ. ಯಾವುದೇ ಸಮಸ್ಯೆಯಿಂದ ಬಳಲುತ್ತಿರುವವರಿಗೆ ಆಯುಷ್ ಆಸ್ಪತ್ರೆಯಲ್ಲಿ ಆರ್ಯುವೇದ, ಯೋಗ, ಪ್ರಕೃತಿ ಚಿಕಿತ್ಸೆ, ಯುನಾನಿ, ಸಿದ್ಧ, ಹೋಮಿಯೋಪತಿ ಚಿಕಿತ್ಸಾ ವಿಧಾನದಲ್ಲಿ ಎಲ್ಲಾ ಖಾಯಿಲೆಗಳಿಗೆ ಚಿಕಿತ್ಸೆ ನೀಡಲಾಗುತ್ತದೆ. ಖಾಸಗಿ ಆಸ್ಪತ್ರೆಯಲ್ಲಿ ಹಣವನ್ನು ಪೋಲು ಮಾಡುವುದಕ್ಕಿಂತ ಆಯುಷ್ ಆಸ್ಪತ್ರೆಯಲ್ಲಿ ಚಿಕಿತ್ಸೆ ತೆಗೆದುಕೊಂಡರೆ ಹಣವು ಉಳಿತಾಯವಾವು ಆಗಲಿದೆ. ಆರೋಗ್ಯವು ಉತ್ತಮವಾಗಿರಲಿದೆ ಎಂದರು.
ತಾಲ್ಲೂಕು ಪಂಚಾಯತಿ ಅಧ್ಯಕ್ಷ ನಾರಾಯಣಗೌಡ ಮಾತನಾಡಿ ಮುದ್ದೆ ಊಟದ ಜೊತೆ ಯೋಗ, ಆಯುಷ್ ಇಲಾಖೆಯ ಚಿಕಿತ್ಸೆಗಳನ್ನು ಪಡೆದರೆ ಆರೋಗ್ಯವಂತರಾಗಿರುತ್ತೇವೆ. ತಾಲ್ಲೂಕಿನ ಪ್ರತಿಹಳ್ಳಿಯಲ್ಲಿ ಆಯುಷ್ ಸೇವಾಗ್ರಾಮ ಯೋಜನೆ ಅಡಿ ಪ್ರತಿ ಮನೆ ಮನೆಗೂ ಹೋಗಿ ಆಯುರ್ವೇದ ಚಿಕಿತ್ಸೆ ಬಗ್ಗೆ ಅರಿವು ಮೂಡಿಸಲಾಗುವುದು. ಸಾರ್ವಜನಿಕರು ಆಯುಷ್ ಇಲಾಖೆಯ ಚಿಕಿತ್ಸೆ ಪಡೆಯಲು ಹಿಂದೇಟು ಹಾಕಬಾರದು. ಯಾವುದೇ ಅಡ್ಡಪರಿಣಾಮಗಳಿಲ್ಲ. ಆಯುಷ್ ಇಲಾಖೆ, ಚಿಕಿತ್ಸಾ ಕ್ರಮಗಳ ಬಗ್ಗೆ ಹೆಚ್ಚಿನ ಸಾರ್ವಜನಿಕರಲ್ಲಿ ಹೆಚ್ಚಿನ ಅರಿವು ಮೂಡಿಸಬೇಕಿದೆ ಎಂದರು.