(ವರದಿ: ಸುರೇಶ್ ಬಾಬು ದೊಡ್ಡಬಳ್ಳಾಪುರ)
ಬೆಂಗಳೂರು: ಅಭಿವೃದ್ಧಿ ಕಾಮಗಾರಿ ಅಂದರೆ ಸಾಕು ಅದರಲ್ಲಿ ರಾಜಕಾರಣಿಗಳ ಹಾಗೂ ಅಧಿಕಾರಿಗಳ ಭ್ರಷ್ಟಾಚಾರದ ವಾಸನೆ ಇರುವುದು ಸಹಜ.ಬಹುತೇಕ ಸಾರ್ವಜನಿಕ ರಸ್ತೆ, ಸೇತುವೆ, ಕಟ್ಟಡಗಳ ಕಾಮಗಾರಿಗಳನ್ನು ಕೆಆರ್‌ಐಡಿಎಲ್, ನಿರ್ಮಿತಿ ಕೇಂದ್ರಗಳಂತಹಾ ಸಂಸ್ಥೆಗಳಿಗೆ ವಹಿಸುವ ಪ್ರಸಂಗಗಳೇ ಹೆಚ್ಚು. ಯಾಕೆಂದರೆ ಈ ಸಂಸ್ಥೆಗಳು ಜನಪ್ರತಿನಿಧಿಗಳ ಹಾಗೂ ಅಧಿಕಾರಿಗಳ ಹಿಡಿತದಲ್ಲಿರುತ್ತೆ. ಈ ಸಂಸ್ಥೆಗಳು ನಡೆಸಿರುವ ಕಾಮಗಾರಿಗಳಿಗೆ ಸಂಬಂಧಿಸಿದಂತೆ ಭ್ರಷ್ಟಾಚಾರ ನಡೆದಿದೆ ಎಂಬ ಆರೋಪಗಳೂ ರಾಜ್ಯ ರಾಜಕಾರಣದಲ್ಲಿ ಪ್ರತಿಧ್ವನಿಸಿವೆ.
ಇಂತಹಾ ಸನ್ನಿವೇಶದ ನಡುವೆ ಸರ್ಕಾರದ ಮುಲಾಜಿಗೊಳಗಾಗದೆ ಊರ ಜನರೇ ಕಾಮಗಾರಿಗೆ ಮುಂದಾಗಿರುವ ಕುರಮತೂಹಲಕಾರಿ ಬೆಳವಣಿಗೆಗೆ ದೊಡ್ಡಬಳ್ಳಾಪುರ ಸಮೀಪದ ಗ್ರಾಮವೊಂದು ಸಾಕ್ಷಿಯಾಗಿದೆ.
ಗ್ರಾಮಸ್ಥರ ಸಹಭಾಗಿತ್ವದಲ್ಲಿ ಊರಿನ ರಸ್ತೆ ಅಭಿವೃದ್ಧಿ ಕಾಮಗಾರಿಗೆ ತಾಲ್ಲೂಕಿನ ಕೋಡಿಹಳ್ಳಿಯಲ್ಲಿ ಚಾಲನೆ ನೀಡಲಾಯಿತು.
ಕೋಡಿಹಳ್ಳಿ ಗ್ರಾಮದಲ್ಲಿನ ಈ ರಸ್ತೆ 40 ವರ್ಷಗಳಿಂದ ಅಭಿವೃದ್ಧಿ ಕಾಣದೆ ಕಾಲುದಾರಿಯಂತಿತ್ತು. ಪ್ರತಿ ಚುನಾವಣಾ ಸಮಯದಲ್ಲಿ ರಾಜಕೀಯ ನಾಯಕರು ರಸ್ತೆ ಅಭಿವೃದ್ಧಿ ಬಗ್ಗೆ ಭರವಸೆ ನೀಡುತ್ತಿದ್ದರು. ಆದರೆ ಅಭಿವೃದ್ಧಿ ಮಾತ್ರ ಆಗಿರಲಿಲ್ಲ.
ಯಾವಾಗ ಜನಪ್ರತಿಧಿಗಳಿಂದ ಕೆಲಸ ಆಗದು ಎಂಬುದು ಅರಿಯಿತೋ, ಅದಾಗಲೇ ಸ್ವಾವಲಂಬಿ ನಡೆಗೆ ಮುಂದಾದರು ಈ ಊರಿನ ಜನ.
ಜನಪ್ರತಿನಿಧಿಗಳ ನಿರ್ಲಕ್ಷ್ಯದಿಂದ ರೋಸಿ ಹೋದ ಗ್ರಾಮಸ್ಥರು ಒಗ್ಗಟ್ಟಾಗಿ ಊರಿನ ಪ್ರಮುಖ ರಸ್ತೆಯನ್ನು ನಿರ್ಮಿಸಲು ಮುಂದಾದರು. ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಘ, ನ್ಯೂಸ್ ಫೌಂಡೇಶನ್ ಕೂಡಾ ಈ ಗ್ರಾಮಸ್ಥರ ಕೆಲಸಕ್ಕೆ ಕೈಜೋಡಿಸಿದೆ. ಇದೀಗ ಈ ಸಂಸ್ಥೆಗಳ ಸಹಭಾಗಿತ್ವದಲ್ಲಿ ರಸ್ತೆ ನಿರ್ಮಾಣ ಕಾರ್ಯಕ್ಕೆ ಮುನ್ನುಡಿ ಬರೆಯಲಾಗಿದೆ.