ಬೆಂಗಳೂರು: ‘ಬಿಜೆಪಿ ಪಕ್ಷವು ಯಾವುದೇ ಕಾರ್ಯಕರ್ತರನ್ನು ಬಿಟ್ಟುಕೊಡುವ ಪ್ರಶ್ನೆಯೇ ಇಲ್ಲ. ಕಾರ್ಯಕರ್ತರೇ ನಮ್ಮ ಪಕ್ಷದ ಆಸ್ತಿ. ನಮ್ಮದು ಕೇಡರ್ ಆಧರಿತ ಸಂಸ್ಥೆ’ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಅವರು ತಿಳಿಸಿದ್ದಾರೆ.
ವಿಧಾನಸೌಧದಲ್ಲಿ ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡುತ್ತಾ ಸಿ.ಟಿ.ರವಿ ಅವರು ಪ್ರಸ್ತುತ ಬಿಜೆಪಿ ಕಾರ್ಯಕರ್ತರ ನೋವಿನ ಕುರಿತು ತಮ್ಮದೇ ಶೈಲಿಯಲ್ಲಿ ಪ್ರತಿಕ್ರಿಯಿಸಿದರು. ಬಿಜೆಪಿ ಧುರೀಣರಾದರೂ ಸಂಘದ ಕಟ್ಟಾಳು ಆಗಿರುವ ರವಿ ಬಿಜೆಪಿ ಕಾರ್ಯಕರ್ತರ ನೋವಿಗೆ ಪ್ರತಿಬಿಂಬವಾದರು. ‘ಹಲವು ಕಾರಣಕ್ಕೆ ಸ್ವಾಭಾವಿಕವಾಗಿ ಅಸಮಾಧಾನ ಇರುತ್ತದೆ. ಕೆಲವರನ್ನು ವ್ಯಕ್ತಿಗತವಾಗಿ, ಇನ್ನೂ ಹಲವರನ್ನು ಗುಂಪಾಗಿ ಕೂತು ಮಾತನಾಡಿಸುವ ಕೆಲಸ ಇರುತ್ತದೆ’ ಎಂದರು. ‘ದವಡೆಯೂ ನಮ್ಮದೇ; ನಾಲಿಗೆಯೂ ನಮ್ಮದೇ. ಹಲ್ಲು ನಾಲಿಗೆಗೆ ಕಚ್ಚಿದರೆ ಹಲ್ಲು ಉದುರಿಸಿಕೊಳ್ಳುವ ಕೆಲಸ ಯಾರೂ ಮಾಡುವುದಿಲ್ಲ’ ಎಂದವರು ಪ್ರತಿಕ್ರಿಯಿಸಿದ ವೈಖರಿಯೂ ಗಮನಸೆಳೆಯಿತು. .
‘ರಾಷ್ಟ್ರವಾದಕ್ಕೆ ಪಕ್ಷ ಆದ್ಯತೆ ಕೊಡುತ್ತದೆ. ವಿಕಾಸವಾದವೇ ನಮ್ಮ ಪ್ರಥಮ ಆದ್ಯತೆ. ರಾಷ್ಟ್ರಹಿತ ಮತ್ತು ಅಭಿವೃದ್ಧಿಯನ್ನು ಬಿಟ್ಟುಕೊಟ್ಟು ನಾವು ಯಾವತ್ತೂ ಕಾರ್ಯ ಮಾಡಿಲ್ಲ. ನಡೆಯುವವನು ಎಡವುತ್ತಾನೆ ಎಂಬ ಗಾದೆ ಮಾತಿದೆ. ನಮ್ಮ ಕಾರ್ಯದ ವೇಗದಲ್ಲಿ ನಾವು ಕೆಲವನ್ನು ಗಮನಿಸಲು ಸಾಧ್ಯವಾಗದೆ ಇರಬಹುದು. ಅಥವಾ ಅವರ ಅಭಿಪ್ರಾಯಕ್ಕೆ ತಕ್ಕಂತೆ ನಾವು ಕೆಲಸ ಮಾಡಲು ಸಾಧ್ಯ ಆಗದೆ ಇರಬಹುದು. ನಾವು ಕಾರ್ಯಕರ್ತರ ಜೊತೆ ಮಾತನಾಡಿ ವಿಶ್ವಾಸಕ್ಕೆ ತೆಗೆದುಕೊಳ್ಳುತ್ತೇವೆ. ಯಾರನ್ನೂ ದೂರ ಮಾಡುವ ಪ್ರಶ್ನೆ ಇಲ್ಲ’ ಎಂದರು.
‘ಪಕ್ಷದ ಸಂಕಷ್ಟದ ಕಾಲದಲ್ಲೂ ವಿಚಾರಕ್ಕಾಗಿಯೇ ಹೋರಾಟ ಮಾಡಿದ ಪ್ರತಿ ಕಾರ್ಯಕರ್ತರೂ ನಮ್ಮ ಪಕ್ಷದ ಆಸ್ತಿ. ಪಂಚಾಯತ್ ಸದಸ್ಯರೂ ಅಲ್ಲದ ಲಕ್ಷಾಂತರ ಕಾರ್ಯಕರ್ತರಿದ್ದಾರೆ. ಅವರೆಲ್ಲರೂ ನಮ್ಮನ್ನು ಅಧಿಕಾರದಲ್ಲಿ ಕೂರಿಸಿದ್ದಾರೆ. ಸಾವಿರಾರು ಜನ ಕಾರ್ಯಕರ್ತರು ಮೆಟ್ಟಿಲಾಗಿ ಒಬ್ಬ ನಾಯಕನನ್ನು ಮೇಲೆ ಏರಿಸಿರುತ್ತಾರೆ. ಹಾಗಾಗಿ, ಆ ಮೆಟ್ಟಿಲನ್ನು ಮರೆಯುವ ಪ್ರಶ್ನೆಯೇ ಇಲ್ಲ ಎಂದು ಸಿ.ಟಿ.ರವಿ ತಿಳಿಸಿದರು.
ಪ್ರಶ್ನಿಸಿದರೆ ಅಪರಾಧ ಎಂಬ ನಿರಂಕುಶ ಪ್ರವೃತ್ತಿಯ ಪಾರ್ಟಿ ನಮ್ಮದಲ್ಲ ಎಂದ ಅವರು, ನಮ್ಮದು 18 ಕೋಟಿ ಸದಸ್ಯತ್ವ ಇರುವ ರಾಜಕೀಯ ಪಕ್ಷ. ನಾವು ಯಾರನ್ನೂ ಕಳಕೊಳ್ಳಲು ಇಷ್ಟ ಪಡುವುದಿಲ್ಲ. ನಮ್ಮ ತಪ್ಪಿನಿಂದಾಗಿ ಯಾರೂ ದೂರ ಹೋಗಬಾರದು ಎಂದು ಪ್ರತಿಪಾದಿಸಿದರು. ನಾವು ಸೈದ್ಧಾಂತಿಕ ವಿರೋಧಿಗಳ ವಿರುದ್ಧ ಹೋರಾಟ ಮಾಡಬೇಕಿದೆ ಎಂದರು.
ಚಕ್ರವರ್ತಿ ಸೂಲಿಬೆಲೆ ಅವರು ಒಬ್ಬ ಅಪ್ಪಟ ರಾಷ್ಟ್ರವಾದಿ. ಅವರು ವ್ಯತಿರಿಕ್ತವಾಗಿ ಮಾತನಾಡಿದ್ದರೆ ಅವರ ಜೊತೆ ವೈಯಕ್ತಿಕವಾಗಿ ಮಾತನಾಡುತ್ತೇವೆ. ಹತ್ತಾರು ಕಾರಣಕ್ಕೆ ಸಿಟ್ಟು ಬಂದಿರಬಹುದು. ಆ ಸಿಟ್ಟನ್ನು ಶಮನ, ಸಮಾಧಾನ ಮಾಡುವುದು ನಮ್ಮ ಕರ್ತವ್ಯ ಎಂದು ಸಿ.ಟಿ.ರವಿ ತಿಳಿಸಿದರು.
ಅಧಿಕಾರ ಬೇಕೆಂದಾಗ ಅತಿವೃಷ್ಟಿಯಲ್ಲಿ ಬರುವ ಕಸಕಡ್ಡಿಯನ್ನು ಸಹಿಸಿಕೊಳ್ಳಬೇಕು. ಡ್ಯಾಂ ತುಂಬಿದಾಗ ಮಾತ್ರ ವಿದ್ಯುತ್ ಉತ್ಪಾದನೆ ಸಾಧ್ಯವಾಗುತ್ತದೆ. ಆಗ ಪವರ್ ಟರ್ಬೈನ್ ತಿರುಗುತ್ತದೆ. ಅತಿವೃಷ್ಟಿ ಆದಾಗ ವೇಗವಾಗಿ ಅಣೆಕಟ್ಟು ತುಂಬುತ್ತದೆ. ಅದನ್ನು ನೀರಾವರಿ, ವಿದ್ಯುತ್ ಉತ್ಪಾದನೆ ಮಾಡಲು ಬಳಸಬಹುದು. ತೇಲಿಬಂದ ಕಸಕಡ್ಡಿ ಡ್ಯಾಂನಲ್ಲಿ ಫಿಲ್ಟರ್ ಆಗುತ್ತದೆ. ಫಿಲ್ಟರ್ ಮಾಡುವುದಕ್ಕೆ ಸ್ವಲ್ಪ ಸಮಯ ಬೇಕಾಗುತ್ತದೆ ಎಂದು ಮತ್ತೊಂದು ಪ್ರಶ್ನೆಗೆ ಅವರು ತೀಕ್ಷ್ಣ ಉತ್ತರ ಕೊಟ್ಟರು.
ಒಬ್ಬ ದನಗಳ್ಳ ಕಬೀರ್ ಸತ್ತಾಗ ನಮ್ಮ ರಾಜ್ಯದ ರಾಜಕೀಯ ಇತಿಹಾಸದಲ್ಲೇ ದನಗಳ್ಳನಿಗೆ ಪರಿಹಾರ ಕೊಟ್ಟು, ಎನ್ಕೌಂಟರ್ ಮಾಡಿದ ಪೊಲೀಸರನ್ನೇ ಜೈಲಿಗೆ ಹಾಕಿದ ಕಾಂಗ್ರೆಸ್ ಪಕ್ಷದ ನಿಲುವನ್ನು ಜಾತ್ಯತೀತ ಎಂದು ಹೇಳಲಾಗದು. ಅದು ಸಂವಿಧಾನಬದ್ಧ ಎನ್ನಲಾಗದು. ಅವರಿಗೆ ಪ್ರಶ್ನಿಸುವ ಯಾವ ನೈತಿಕತೆಯೂ ಇಲ್ಲ ಎಂದು ರವಿ ಕೈ ನಾಯಕರನ್ನು ತರಾಟೆಗೆ ತೆಗೆದುಕೊಂಡರು.
ಸರಕಾರ ಎಲ್ಲರನ್ನೂ ಸಮಾನ ದೃಷ್ಟಿಯಿಂದ ನೋಡಬೇಕೆಂದು ತಿಳಿಸುವುದಾಗಿ ಸ್ಪಷ್ಟಪಡಿಸಿದ ಅವರು, ಸಿದ್ದರಾಮಯ್ಯರವರು ಭಾನುವಾರ ತಮಿಳುನಾಡಿನಲ್ಲಿ ಪ್ರಶಸ್ತಿ ಸ್ವೀಕರಿಸುವ ವೇಳೆ ನೀಡಿದ ಹೇಳಿಕೆ ಭಾರತದ ಸಮಗ್ರತೆಗೆ ವಿರುದ್ಧವಾದುದು. ಡಾ. ಅಂಬೇಡ್ಕರ್ ಅವರ ಹೆಸರಿನಲ್ಲಿ ಪ್ರಶಸ್ತಿ ಸ್ವೀಕರಿಸಿ ಸಂವಿಧಾನಕ್ಕೆ ವಿರುದ್ಧವಾಗಿ ಮಾತನಾಡಿದ್ದಾರೆ. ಒಡಕಿನ ಮಾತನಾಡಿದ್ದಾರೆ. ಭಾಷೆಯು ಜೋಡಿಸುವ ಸಂಗತಿಯಾಗಿದ್ದು, ಅದು ಒಡಕಿನ ಕೆಲಸ ಮಾಡಬಾರದು ಎಂದರು. ಕನ್ನಡವನ್ನು ಇನ್ನೊಂದು ಭಾಷೆ ವಿರುದ್ಧ ಎತ್ತಿ ಕಟ್ಟಬಾರದು ಎಂದು ಆಕ್ಷೇಪಿಸಿದರು.
ಆರ್ಯ ಎಂಬುದು ಜನಾಂಗ ಸೂಚಕವಲ್ಲ. ಸಿದ್ದರಾಮಯ್ಯ ಅವರು ಇಟೆಲಿ ಇತಿಹಾಸ ಓದಿದವರೇ? ಅವರು ದೇಶದ ಇತಿಹಾಸ ಓದಲಿ ಎಂದು ಆಗ್ರಹಿಸಿದರು. ತಲೆಬುಡ ಇಲ್ಲದ ಸಿದ್ಧಾಂತವನ್ನು ಒಡೆಯಲು ಬಳಸಿರುವುದು ದುರದೃಷ್ಟಕರ. ಅವರಿಗೆ ಡಾ.ಅಂಬೇಡ್ಕರ್ ಅವರ ಹೆಸರಿನ ಪ್ರಶಸ್ತಿ ಕೊಟ್ಟದ್ದು ದುರದೃಷ್ಟಕರ. ಈ ಥರದ ಮಾನಸಿಕತೆಯು ದೇಶದ ಸಮಗ್ರತೆಗೆ ಅಪಾಯಕಾರಿ ಎಂದ ಸಿ.ಟಿ.ರವಿ, 75 ವರ್ಷಾಚರಣೆಗೆ ಸಿದ್ಧತೆಯಲ್ಲಿರುವ ಸಿದ್ದರಾಮಯ್ಯ ಅವರ ಮುತ್ಸದ್ಧಿತನದ ಪ್ರಕಟವಾಗಬೇಕು ಎಂದು ಅಭಿಪ್ರಾಯಪಟ್ಟರು.
ಎಸ್.ಆರ್.ಪಾಟೀಲರು ಸಿಎಂ ಹುದ್ದೆಗೇರುವುದು ಸೂಕ್ತ ಎಂದು ಹಿರಿಯ ಕಾಂಗ್ರೆಸ್ಸಿಗ ವೀರಪ್ಪ ಮೊಯಿಲಿ ಅವರು ಹೇಳಿದ್ದಾರೆ. ಖರ್ಗೆ ಅವರಿಗೆ ಸಿಎಂ ಕುರ್ಚಿ ತೋರಿಸಿ ಮೋಸ ಮಾಡಲಾಗುತ್ತಿದೆ. ಕೆಪಿಸಿಸಿ ಅಧ್ಯಕ್ಷರು ಸಿಎಂ ಆಗುತ್ತಾರೆಂಬ ಹಂತದಲ್ಲಿ ಎಲ್ಲ ಪಿತೂರಿ ಮಾಡಿ ಪರಮೇಶ್ವರ್ ಅವರನ್ನು ಸೋಲಿಸಿದರು. ಅವರೆಲ್ಲರನ್ನು ನೀವು ಪಕ್ಕಕ್ಕೆ ಇಡುವಿರಾ? ಕಾಂಗ್ರೆಸ್ ಪಕ್ಷದಲ್ಲಿ ಅರ್ಧ ಡಜನ್ಗೂ ಹೆಚ್ಚು ಸಿಎಂ ಆಕಾಂಕ್ಷಿಗಳಿದ್ದಾರೆ ಎಂದು ತಮ್ಮದೇ ದಾಟಿಯಲ್ಲಿ ವಿಶ್ಲೇಷಿಸಿದರು.
ರಾಜ್ಯದಲ್ಲಿ ನಾವು ಮತ್ತೆ ಅಧಿಕಾರಕ್ಕೆ ಬರುವುದು ಖಚಿತ. ಶಾಸಕಾಂಗ ಪಕ್ಷದ ಸಭೆ ಹಾಗೂ ಸಂಸದೀಯ ಮಂಡಳಿ ತೀರ್ಮಾನದಂತೆ ನಮ್ಮಲ್ಲಿ ನಾಯಕನ ಆಯ್ಕೆ ನಡೆಯಲಿದೆ ಎಂದು ಪ್ರಶ್ನೆಗೆ ಉತ್ತರ ನೀಡಿದರು. ಬೊಮ್ಮಾಯಿ ಅವರ ನಾಯಕತ್ವದಲ್ಲೇ ಚುನಾವಣೆ ಎದುರಿಸುತ್ತೇವೆ ಎಂದವರು ಹೇಳಿದರು.







































































