ಮಂಗಳೂರು: ಕಾವೂರಿನಲ್ಲಿ ಇನಾಯತ್ ಆಲಿ ಅಭಿಮಾನಿ ಬಳಗದ ವತಿಯಿಂದ ಮಾನವೀಯತೆ, ಸಹಬಾಳ್ವೆ ಮತ್ತು ಸರ್ವಧರ್ಮ ಸೌಹಾರ್ದತೆಯ ಸಂದೇಶ ಸಾರುವ ದೀಪಾವಳಿ ಆಚರಣೆ ನಡೆಯಿತು. ಸಾಧಕರಿಗೆ ಗೌರವ, ಆರ್ಥಿಕ ಸಂಕಷ್ಟದಲ್ಲಿರುವ ಕುಟುಂಬಗಳಿಗೆ ನೆರವು ನೀಡುವ ಮೂಲಕ ಹಬ್ಬವನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು.
ಕಾರ್ಯಕ್ರಮದಲ್ಲಿ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರು, ಅಂಗನವಾಡಿ ಕಾರ್ಯಕರ್ತೆಯರು ಹಾಗೂ ವಿವಿಧ ಸಂಘ-ಸಂಸ್ಥೆಗಳ ಪದಾಧಿಕಾರಿಗಳನ್ನು ಶಾಲು, ಪೇಟ, ಸ್ಮರಣಿಕೆ ಮತ್ತು ಬೆಳ್ಳಿ ನಾಣ್ಯ ನೀಡಿ ಗೌರವಿಸಲಾಯಿತು. ಮದುವೆ ನೆರವೇರಿಸಲು ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದ ಕುಟುಂಬಗಳಿಗೆ ಧನಸಹಾಯ ನೀಡಲಾಯಿತು. ಗೋ ಪೂಜೆ, ಗೂಡುದೀಪಗಳ ಸ್ಪರ್ಧೆ ಮತ್ತು ಪ್ರದರ್ಶನ ಕಾರ್ಯಕ್ರಮದ ಆಕರ್ಷಣೆಯಾಗಿದ್ದವು.
ಕಾರ್ಯಕ್ರಮದಲ್ಲಿ ಮಾತನಾಡಿದ ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಪದ್ಮರಾಜ್ ಆರ್. ಪೂಜಾರಿ, ದೀಪಾವಳಿ ಕೇವಲ ದೀಪ ಬೆಳಗಿಸುವ ಹಬ್ಬವಲ್ಲ; ಬದುಕಿನಲ್ಲಿ ಪ್ರೀತಿ, ಸಹಬಾಳ್ವೆ ಮತ್ತು ಮಾನವೀಯತೆಯ ಬೆಳಕು ಹರಡುವ ಹಬ್ಬ ಎಂದರು.

ಇನಾಯತ್ ಆಲಿ ಅವರ ಪರಿಕಲ್ಪನೆಯಲ್ಲಿ ಪ್ರತಿವರ್ಷ ನಡೆಯುತ್ತಿರುವ ಈ ಆಚರಣೆ ಸರ್ವಧರ್ಮ ಸೌಹಾರ್ದತೆಯ ಪ್ರತೀಕವಾಗಿದೆ. ಧರ್ಮದ ಭೇದವಿಲ್ಲದೆ ಎಲ್ಲರೂ ಒಂದಾಗಿ ಹಬ್ಬ ಆಚರಿಸುವುದರ ಜೊತೆಗೆ ಸಾಧಕರನ್ನು ಗೌರವಿಸಿ, ಸಂಕಷ್ಟದಲ್ಲಿರುವ ಕುಟುಂಬಗಳಿಗೆ ನೆರವಾಗುತ್ತಿರುವುದು ಮಾದರಿ ಪ್ರಯತ್ನ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಖ್ಯಾತ ಹಿನ್ನೆಲೆ ಗಾಯಕ ಹಾಗೂ ನಟ ನವೀನ್ ಸಜ್ಜು ಅವರ ನೇತೃತ್ವದಲ್ಲಿ ನಡೆದ ಸಂಗೀತ ಸಂಜೆ ಕಾರ್ಯಕ್ರಮಕ್ಕೆ ವಿಶೇಷ ಮೆರುಗು ನೀಡಿತು. ಅವರ ಹಾಡುಗಳು ಮಾನವೀಯತೆಯ ಸಂದೇಶವನ್ನು ಜನರಿಗೆ ತಲುಪಿಸಿವೆ ಎಂದು ಪೂಜಾರಿ ಹೇಳಿದರು.
ಸರ್ವಧರ್ಮೀಯರು ಒಂದೇ ವೇದಿಕೆಯಲ್ಲಿ ಸೇರಿ ಸಂಭ್ರಮಿಸುವುದರ ಜೊತೆಗೆ, ಇತರರ ಬದುಕಿನಲ್ಲೂ ಬೆಳಕು ಮೂಡಿಸುವ ಈ ಆಚರಣೆ ಕಾವೂರಿನಲ್ಲಿ ಸೌಹಾರ್ದತೆ ಮತ್ತು ಮಾನವೀಯತೆಯ ಸಂದೇಶ ಸಾರಿತು.















































































