ಬೆಂಗಳೂರು: ಮುಖ್ಯಮಂತ್ರಿ ಯಡಿಯೂರಪ್ಪ ಅವರು ಸ್ಮಾರ್ಟ್‌ಕ್ಲಾಸ್ ರೂಂ ಉದ್ಘಾಟಿಸಿ ನಿರ್ಗಮಿಸಿದ ನಂತರ, ಮತ್ತೆ ಅಲ್ಲಿಗೆ ಆಗಮಿಸಿದ ಡಿಸಿಎಂ ಡಾ.ಅಶ್ವತ್ಥನಾರಾಯಣ, ಸ್ಮಾರ್ಟ್‌ಕ್ಲಾಸ್ ರೂಂನಲ್ಲಿ ಪಾಠ ಕೇಳಿ ಗಮನಸೆಳೆದರು.
ಈ ವೇಳೆಯಲ್ಲಿ ಕನ್ನಡ ಪ್ರಾಧ್ಯಾಪಕರೊಬ್ಬರು ಸ್ಮಾರ್ಟ್‌ಕ್ಲಾಸ್ ರೂಂನಿದಲೇ ಮೊದಲ ಪಾಠ ಆರಂಭಿಸಿದರು. ಹೈಸ್ಪೀಡ್ ಇಂಟರ್‌ನೆಟ್, ಆಧುನಿಕ ಫಿಚರ್‌ಗಳುಳ್ಳ ಟ್ಯಾಬ್ಲೆಟ್ ಪಿಸಿ ಮೂಲಕ ಕಲಿಕಾ ನಿರ್ವಹಣಾ ವ್ಯವಸ್ಥೆ ಅಡಿಯಲ್ಲಿ ನಡೆದ ಈ ಬೋಧನೆ- ಕಲಿಕೆಯ ಮಾದರಿಯನ್ನು ಅವರು ನೇರವಾಗಿ ವಿದ್ಯಾರ್ಥಿಯಂತೆಯೇ ವೀಕ್ಷಿಸಿದರು.
ವಿದ್ಯಾರ್ಥಿಗಳ ಜತೆಯಲ್ಲಿ ಪಾಠವನ್ನು ಆಸಕ್ತಿಯಿಂದ ಕೇಳಿದ ಡಿಸಿಎಂ, ತಂತ್ರಜ್ಞಾನದ ಮೂಲಕ ಕನ್ನಡ ಪಾಠ ಕೇಳಿ ಚಕಿತರಾದರು. ಅಲ್ಲದೆ, ಸ್ಮಾರ್ಟ್‌ಕ್ಲಾಸ್ ರೂಂನ ಪರಿಣಾಮಕಾರಿ ದಕ್ಷತೆಯನ್ನು ವೀಕ್ಷಿಸಿ ಸಂತಸಪಟ್ಟರು. ಬೋಧನೆಗೆ ಈ ವ್ಯವಸ್ಥೆ ಎಷ್ಟರಮಟ್ಟಿಗೆ ಪರಿಣಾಮಕಾರಿ ಎಂದು ಬೋಧಕರಿಂದಲೇ ಮಾಹಿತಿ ಪಡೆದರಲ್ಲದೆ, ತಮ್ಮ ಜತೆ ಕೂತು ಪಾಠ ಕೇಳಿದ ವಿದ್ಯಾರ್ಥಿಗಳ ಜತೆಗೂ ಸಂವಾದ ನಡೆಸಿದರು.
ಕೋಲಾರ ಜಿಲ್ಲೆಯ ಮಾಲೂರಿನ ಪ್ರಥಮ ದರ್ಜೆ ಕಾಲೇಜಿನ ಕನ್ನಡ ಸಹಾಯಕ ಪ್ರಾಧ್ಯಾಪಕಿ ಶ್ವೇತಾ ಈ ವೇಳೆ ಪಾಠ ಮಾಡಿದರು. ನಂತರ ಮಹಾರಾಣಿ ಅಮ್ಮಣ್ಣಿ ಕಾಲೇಜಿನ ಪ್ರಾಧ್ಯಾಪಕಿ ಪ್ರೊ.ಶಾಲಿನಿ ಅವರು ರಾಸಾಯನ ಶಾಸ್ತ್ರ ಕ್ಲಾಸ್ ನಡೆಸಿಕೊಟ್ಟರು. ಉನ್ನತ ಶಿಕ್ಷಣ ಪರಿಷತ್ ಉಪಾಧ್ಯಕ್ಷ ಪ್ರೊ.ತಿಮ್ಮೇಗೌಡ, ಕಾಲೇಜು ಶಿಕ್ಷಣ ಇಲಾಖೆಯ ಆಯುಕ್ತ ಪ್ರದೀಪ್ ಅವರೂ ಪಾಠ ಕೇಳಿಸಿಕೊಂಡರು.