ಮಂಗಳೂರು: ಕೇಸರಿ ಭದ್ರಕೋಟೆ ಕರಾವಳಿ ಜಿಲ್ಲೆಗಳಲ್ಲಿ ಬಿಜೆಪಿಗೆ ಪುತ್ತಿಲ ಪರಿವಾರವೇ ಸವಾಲು. ನಳಿನ್ ಕುಮಾರ್ ವಿರುದ್ಧ ಸಿಡಿದೆದ್ದಿರುವ ಪುತ್ತಿಲ ಪರಿವಾರದಿಂದಾಗಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಒಂದು ಪ್ರತಿಷ್ಠಿತ ವಿಧಾನಸಭಾ ಕ್ಷೇತ್ರವನ್ನೇ ಬಿಜೆಪಿ ಕಳೆದುಕೊಂಡಿದೆ. ಇದೀಗ ಸಂಸದ ನಳಿನ್ ಕುಮಾರ್ ಕಟೀಲ್ ವಿರುದ್ಧ ಜಿಲ್ಲೆಯಲ್ಲಿರುವ ಕಾರ್ಯಕರ್ತರೇ ತಿರುಗಿಬಿದ್ದಿರುವುದರಿಂದ ಹಿಂದೂ ಮುಖಂಡ ಅರುಣ್ ಕುಮಾರ್ ಪುತ್ತಿಲ ಬೆಂಬಲಿತ ‘ಪುತ್ತಿಲ ಪರಿವಾರ’ವನ್ನು ಸಮಾಧಾನಪಡಿಸಿ ಬಿಜೆಪಿಯಲ್ಲಿ ಉಳಿಸಿಕೊಳ್ಳದ ಹೊರತು ದಕ್ಷಿಣಕನ್ನಡ ಲೋಕಸಭಾ ಕ್ಷೇತ್ರದಲ್ಲಿ ಕಮಲ ಪಕ್ಷಕ್ಕೆ ಬೇರೆ ಉಪಾಯವೇ ಇಲ್ಲ ಎನ್ನುವಂತಾಗಿದೆ.
718 ಗ್ರೂಪ್ಸ್.. 4,23,400ಕ್ಕೂ ಹೆಚ್ಚು ಬೆಂಬಲಿಗರು..!
ಪ್ರಸ್ತುತ ಪರಿಸ್ಥಿತಿಯಲ್ಲಿ ಪುತ್ತಿಲ ಪರಿವಾರವನ್ನು ಬಿಜೆಪಿ ನಿರ್ಲಕ್ಷಿಸುವಂತಿಲ್ಲ. ಹಿಂದೂತ್ವದ ಶಕ್ತಿಯ ಪೈಕಿ ಪುತ್ತಿಲ ಪರಿವಾರವೇ ಯುವಕರ ಆಕರ್ಷಣೆಯ ಗುಂಪು. ಇದೀಗ ‘ಪುತ್ತಿಲ ಪರಿವಾರ’ ಬೆಂಬಲಿತ ಗುಂಪನ್ನು ಸೇರುತ್ತಿರುವ ಸಂಖ್ಯೆ ಕೂಡಾ ದುಪ್ಪಟ್ಟಾಗಿದೆ. ತಾವಿನ್ನೂ ಆರೆಸ್ಸೆಸ್ ಕಾರ್ಯಕರ್ತರೇ ಆಗಿದ್ದು, ಬಿಜೆಪಿ ನಾಯಕರ ವಿಚಾರದಲ್ಲಷ್ಟೇ ಎದುರಾಳಿಗಳು ಎನ್ನುತ್ತಿರುವ ಪುತ್ತಿಲ ಪರಿವಾರ, ತಮ್ಮ ಈ ನಿಲುವು ಹಿಂದೂ ಕಾರ್ಯಕರ್ತರಿಗೆ ನ್ಯಾಯ ಕೊಡಿಸುವ ಉದ್ದೇಶಕ್ಕಷ್ಟೇ ಸೀಮಿತ ಎನ್ನುತ್ತಿದೆ. ಅರುಣ್ ಕುಮಾರ್ ಪುತ್ತಿಲರ ಈ ನಿಲುವಿಗೆ ಕರಾವಳಿಯ ಹಿಂದೂ ಕಾರ್ಯಕರ್ತರು ಫಿದಾ ಆಗಿದ್ದಾರೆ. ಹಾಗಾಗಿಯೇ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸುಮಾರು 718 ವಾಟ್ಸಪ್ ಗ್ರೂಪ್ ಸೃಷ್ಟಿಯಾಗಿದ್ದು, 4,23,400ಕ್ಕೂ ಹೆಚ್ಚು ಪುತ್ತಿಲ ಬೆಂಬಲಿಗರಿದ್ದಾರೆ. ಇವರೆಲ್ಲರೂ ಯಾರ ಒತ್ತಡವೂ ಇಲ್ಲದೆ, ತಾವಾಗಿಯೇ ಪುತ್ತಿರ ಪರಿವಾರಕ್ಕೆ ಸೇರ್ಪಡೆಯಾದವರು ಎಂಬುದು ಗಮನಾರ್ಹ.
ನಳಿನ್ Vs ಬ್ರಿಜೇಶ್; ಕರಾವಳಿ ಬಿಜೆಪಿಯಲ್ಲಿ ಮನೆಯೊಂದು ಮೂರು ಬಾಗಿಲು?
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬಿಜೆಪಿ ನಾಯಕರ ಪಾಳಯದಲ್ಲಿ ಸಂಸದ ನಳಿನ್ ಕುಮಾರ್ ಕಟೀಲ್ ಅವರೇ ಫೆವರೇಟ್. ಬಿ.ಎಲ್.ಸಂತೋಷ್ ಅವರ ಬಲಗೈ ಬಂಟನೆಂಬ ಕಾರಣಕ್ಕಾಗಿ ನಳಿನ್ ಕುಮಾರ್ ಅವರನ್ನು ವಿರೋಧಿಸಲು ರಾಜ್ಯದ ಬಿಜೆಪಿ ನಾಯಕರು ಸಿದ್ದರಿಲ್ಲ. ಯಡಿಯೂರಪ್ಪ ಗುಂಪಿಗೆ ನಳಿನ್ ಬಗ್ಗೆ ತೀವ್ರ ಸಿಟ್ಟು ಇದ್ದರೂ ಪಕ್ಷದ ನೂತನ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು ತಮ್ಮ ಮೊದಲ ಮಂಗಳೂರು ಭೇಟಿಯಲ್ಲಿ ನಳಿನ್ ಕುಮಾರ್ ಕಟೀಲ್ ಅವರನ್ನೇ ಮುಂದಿನ ಲೋಕಸಭಾ ಚುನಾವಣಾ ಅಭ್ಯರ್ಥಿ ಎಂಬಂತೆ ಬಿಂಬಿಸಿದ್ದರು. ವಿಜಯೇಂದ್ರರ ಈ ಹೇಳಿಕೆಯೇ ನಳಿನ್’ಗೆ ಮುಳುವಾಯಿತು. ನಳಿನ್ ಬಗ್ಗೆ ಅಸಮಾಧಾನಗೊಂಡಿರುವ ಕಾರ್ಯಕರ್ತನೇಕರು ಸಿಡಿದೆದ್ದರು. ಇನ್ನೊಂದೆಡೆ ನಳಿನ್ ಕುಮಾರ್ ಕಟೀಲ್ ಅವರಿಗೆ ಪರ್ಯಾಯ ಶಕ್ತಿಯನ್ನಾಗಿ ಬ್ರಿಜೇಶ್ ಚೌಟ ಅವರನ್ನು ವಿಜಯೇಂದ್ರ ಟೀಮ್ ಬೆಳೆಸುತ್ತಿರುವುದು ಕುತೂಹಲಕಾರಿ ಬೆಳವಣಿಗೆ.
ಈ ನಡುವೆ, ದಕ್ಷಿಣ ಕನ್ನಡ ಜಿಲ್ಲೆಯ ಬಿಜೆಪಿ ಘಟಕ ಕೂಡಾ ಪುನರ್ರಚನೆಯಾಗಿದ್ದು ಬಹುತೇಕ ಕಡೆ ಪಕ್ಷದ ನಾಯಕರಲ್ಲಿ ಅಸಮಾಧಾನ ಹೊಗೆಯಾಡತೊಡಗಿದೆ. ನೂತನವಾಗಿ ನೇಮಕಗೊಂಡಿರುವ ಅನೇಕ ಪದಾಧಿಕಾರಿಗಳು ಬ್ರಿಜೇಶ್ ಚೌಟ ಅವರ ಜೊತೆಗಿನ ಫೋಟೋಗಳನ್ನು ಹಂಚಿಕೊಂಡು, ಇವರೇ ಮುಂಬರುವ ಲೋಕಸಭಾ ಚುನಾವಣೆಯ ಅಭ್ಯರ್ಥಿಯಾಗಲಿದ್ದಾರೆ ಎಂಬ ಸಂದೇಶವನ್ನು ರವಾನಿಸುತ್ತಿದ್ದಾರೆ. ಇದರಿಂದ ಕುಪಿತರಾಗಿರುವ ಒಂದು ಗುಂಪು ನೂತನ ಪದಾಧಿಕಾರಿಗಳ ಆಯ್ಕೆ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದು, ಕರಾವಳಿ ಬಿಜೆಪಿಯಲ್ಲಿ ‘ಮನೆಯೊಂದು ಮೂರು ಬಾಗಿಲು’ ಎಂಬಂತಾಗಿದೆ.
ಬಿಲ್ಲವರದ್ದೇ ‘ಸತ್ಯ’
ಈ ನಡುವೆ, ನಳಿನ್ ಕುಮಾರ್ ಕಟೀಲ್ ಅವರೇ ಮುಂಬರುವ ಲೋಕಸಭಾ ಅಭ್ಯರ್ಥಿ ಎಂದು ಪಕ್ಷದ ಒಂದು ಗುಂಪು ಹೇಳಿಕೊಂಡರೆ, ಇನ್ನೊಂದೆಡೆ ಬೃಜೇಶ್ ಚೌಟ ಅವರನ್ನು ಕಣಕ್ಕಿಳಿಸುವ ಸಾಧ್ಯತೆಗಳ ಬಗ್ಗೆ ಮಾತುಗಳು ಕೇಳಿಬರುತ್ತಿದೆ. ಅದೇ ಹೊತ್ತಿಗೆ ಕರಾವಳಿಯ ಪ್ರಬಲ ಸಮುದಾಯವಾಗಿರುವ ಬಿಲ್ಲವರ ಬೇಡಿಕೆಗಳು ಮುನ್ನೆಲೆಗೆ ಬಂದಿದೆ. ಕರಾವಳಿ ಜಿಲ್ಲೆಗಳಲ್ಲಿ ಬಿಲ್ಲವರದ್ದೇ ನಿರ್ಣಾಯಕ ವೋಟ್ ಬ್ಯಾಂಕ್, ಹಿಂದೂ ಹೋರಾಟಗಳಲ್ಲೂ ಮುಂಚೂಣಿಯಲ್ಲಿರುವವರು ಬಿಲ್ಲವರು. ಹೋರಾಟಗಳಲ್ಲಿ ಕಷ್ಟ-ನಷ್ಟ ಅನುಭವಿಸದ್ದೂ ಬಿಲ್ಲವರೇ, ಹಿಂದುತ್ವಕ್ಕಾಗಿ ಪ್ರಾಣ ತೆತ್ತವರಲ್ಲೂ ಬಿಲ್ಲವರೇ ಅನೇಕರು. ಹೀಗಿರುವಾಗ ಬಿಲ್ಲವ ಹೋರಾಟಗಾರ ಸಮಾಧಿ ಮೇಲೆ ಸಾಮ್ರಾಜ್ಯ ಕಟ್ಟುವ ಬದಲು ಈ ಬಾರಿಯಾದರೂ ಬಿಜೆಪಿಯಲ್ಲಿ ಬಿಲ್ಲವರಿಗೆ ಟಿಕೆಟ್ ಕೊಡಲಿ ಎಂದು ಸಮುದಾಯದ ಸಂಘಟನೆಗಳು ಆಗ್ರಹಿಸುತ್ತಾ ಅಖಾಡಕ್ಕಿಳಿದಿವೆ. ಈ ಪೈಕಿ ಪ್ರಬಲ ಹಿಂದೂ ನಾಯಕ ಸತ್ಯಜಿತ್ ಸುರತ್ಕಲ್ ಪರವಾಗಿ ಭಾರೀ ಪ್ರಚಾರ ನಡೆಯುತ್ತಿದೆ.
ದಕ್ಷಿಣಕನ್ನಡ ಜಿಲ್ಲೆಯಲ್ಲಿ ಲೋಕಸಭಾ ಚುನಾವಣಾ ಅಭ್ಯರ್ಥಿ ಸ್ಥಾನಕ್ಕೆ ಸತ್ಯಜಿತ್ ಸುರತ್ಕಲ್ ಅವರದ್ದು ದಶಕಗಳಿಂದಲೂ ಕೇಳಿಬರುತ್ತಿರುವ ಹೆಸರು. 2009ರಲ್ಲೇ ಅವರ ಹೆಸರು ಮುನ್ನೆಲೆಗೆ ಬಂತಾದರೂ, ‘ಈ ಬಾರಿ ನಳಿನ್ ಕುಮಾರ್ ಇರಲಿ, ಮುಂದಿನ ಬಾರಿ ಸತ್ಯಜಿತ್ ನೋಡೋಣ’ ಎಂಬ ಸಂಘದ ಹಿರಿಯರ ಮಾತಿಗೆ ಕೇಸರಿ ಕಾರ್ಯಕರ್ತರು ತಲೆದೂಗಿದ್ದರು. ಆದರೆ ನಂತರ ಅವರ ಹೆಸರು ಬಿಜೆಪಿಯಲ್ಲಿ ರೆಬಲ್ ಎಂಬಂತೆ ಬಿಂಬಿತವಾಯಿತು. ಅದೇ ಹೊತ್ತಿಗೆ, ಬಿಜೆಪಿಯಲ್ಲಿ ಪ್ರಬಲ ಶಕ್ತಿಯೆನಿಸಿದ್ದ ಶ್ರೀಕರ ಪ್ರಭು, ಪಿ.ಪಿ.ಹೆಗ್ದೆ ಸಹಿತ ಹಲವರು ಹಿಂದೂ ನಾಯಕರಾಗಿಯೇ ಬಿಜೆಪಿಯಿಂದಲೇ ದೂರ ಸರಿದರು. ಕಳೆದ ವಿಧಾನಸಭಾ ಚುನಾವಣಾ ಹೊತ್ತಿಗೆ ಅಶೋಕ್ ರೈ, ಅರುಣ್ ಪುತ್ತಿಲ ಅವರನ್ನೂ ದೂರ ಇಡುವ ಪ್ರಯತ್ನ ನಳಿನ್ ಗುಂಪಿನಿಂದ ನಡೆದಿದೆ ಎಂಬ ಆಕ್ರೋಶ ವ್ಯಕ್ತವಾಯಿತು. ಈ ಕಾರಣದಿಂದಲೇ ಆವರೆಗೂ ಬಿಜೆಪಿ ನಾಯಕರಾಗಿದ್ದ ಅಶೋಕ್ ರೈ ಅವರು ಕಾಂಗ್ರೆಸ್ ಶಾಸಕರಾದರು. ನಳಿನ್ ಕುಮಾರ್ ಕಟೀಲ್ ವಿರುದ್ಧ ಸಿಡಿದೆದ್ದ ಅರುಣ್ ಕುಮಾರ್ ಪುತ್ತಿಲ ಅವರು ಪಕ್ಷೇತರಾಗಿ ಬಿಜೆಪಿಗೆ ಪರ್ಯಾಯ ಪ್ರಬಲ ಶಕ್ತಿಯಾಗಿ ಬೆಳೆದಿದ್ದಾರೆ. ಈ ಬೆಳವಣಿಗೆಯಿಂದಾಗಿ ದಕ್ಷಿಣ ಕನ್ನಡದಲ್ಲಿ ನಳಿನ್ ಎದುರಾಳಿಗಳು ಬಿಜೆಪಿಯಿಂದ ದೂರ ಇದ್ದಂತೆ ಕಾಣುವುದಷ್ಟೇ ಅಲ್ಲ, ಬಿಜೆಪಿ ಪಕ್ಷವೂ ದುರ್ಬಲವಾದಂತಿದೆ. ಇದೀಗ ದಕ್ಷಿಣಕನ್ನಡ ಬಿಜೆಪಿಯಲ್ಲಿ ಮೂರು ಪ್ರಭಲ ಗುಂಪುಗಳು ಸೃಷ್ಟಿಯಾಗಿದ್ದೇ ಅಚ್ಚರಿಯ ಬೆಳವಣಿಗೆ.
ಬಿಜೆಪಿಗೆ ‘ಪುತ್ತಿಗೆ ಪರಿವಾರ’ ಗಡುವು..!
ಕರಾವಳಿ ಭಾಗದಲ್ಲಿ ಭಾರೀ ಸಂಚಲನ ಮೂಡಿಸಿರುವ ಹಿಂದೂ ಕಾರ್ಯಕರ್ತ ಅರುಣ್ ಪುತ್ತಿಲ ಅವರು ಬಿಜೆಪಿ ಜೊತೆ ಕೈ ಜೋಡಿಸಲು ಸಿದ್ದರಾಗಿದ್ದಾರೆ. ಈ ಕುರಿತಂತೆ ಪುತ್ತೂರಿನಲ್ಲಿ ಸೋಮವಾರ ನಡೆದ ಪುತ್ತಿಲ ಪರಿವಾರ ಸಮಾಲೋಚನಾ ಸಭೆಯಲ್ಲಿ, ಬಿಜೆಪಿ ಜತೆ ವಿಲೀನಕ್ಕೆ ಒಲವು ವ್ಯಕ್ತವಾಗಿದೆ. ಆದರೆ ಕಠಿಣ ಷರತ್ತುಗಳನ್ನು ಪುತ್ತಿಲ ಪರಿವಾರ ಮುಂದಿಟ್ಟಿದೆ. ಲೋಕಸಭಾ ಚುನಾವಣೆಗೂ ಮುನ್ನ ಪುತ್ತೂರು ಗ್ರಾಮಾಂತರ ಮತ್ತು ನಗರ ಮಂಡಲ ಒಟ್ಟು ಸೇರಿಸಿ ಅಧ್ಯಕ್ಷ ಹಾಗೂ ಪದಾಧಿಕಾರಿ ಸ್ಥಾನ ತಮ್ಮ ಬೆಂಬಲಿಗರಿಗೆ ನೀಡಿದರೆ ಬಿಜೆಪಿಗೆ ಸೇರ್ಪಡೆಯಾಗುವುದಾಗಿ ಅರುಣ್ ಪುತ್ತಿಲ ಹೇಳಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸುಮಾರು 718 ವಾಟ್ಸಾಪ್ ಗ್ರೂಪ್ ಗಳಲ್ಲಿ 4,23,400 ಬೆಂಬಲಿಗರಿದ್ದಾರೆ. ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಗೆಲ್ಲಬೇಕಾದರೆ ದೊಡ್ಡ ಸಂಗತಿಯೇ ಇಲ್ಲ, ವ್ಯವಸ್ಥೆಗಳ ಅಗತ್ಯವೂ ಇಲ್ಲ ಎಂದಿರುವ ಅರುಣ್ ಪುತ್ತಿಲ, ಮಾತೃ ಪಕ್ಷದವರು ಈ ಬಗ್ಗೆ ಮೂರು ದಿನಗಳೊಳಗೆ ಸೂಕ್ತ ನಿರ್ಧಾರ ಕೈಗೊಳ್ಳಬೇಕು. ಇಲ್ಲದಿದ್ದರೆ ಚುನಾವಣಾ ರಾಜಕೀಯಕ್ಕೆ ಪುತ್ತಿಲ ಪರಿವಾರ ಸಿದ್ಧವಾಗಿದೆ ಎಂಬ ಸಂದೇಶವನ್ನು ಬಿಜೆಪಿ ನಾಯಕರಿಗೆ ರವಾನಿಸಿದ್ದಾರೆ.






















































ಬಿಜೆಪಿಗೆ ‘ಪುತ್ತಿಗೆ ಪರಿವಾರ’ ಗಡುವು..!