ಮಂಗಳೂರು: ಸಂಪುಟ ವಿಸ್ತರಣೆಯಾದ ಬೆನ್ನಲ್ಲೇ ಕರಾವಳಿಯ ಬಿಜೆಪಿ ಪಾಳಯದಲ್ಲಿ ಸಂಚಲನ ಉಂಟಾಗಿದೆ. ಬಿಜೆಪಿ ರಾಜ್ಯಾಧ್ಯಕ್ಷರ ತವರು ಜಿಲ್ಲೆ ದಕ್ಷಿಣಕನ್ನಡದ ಮತ್ತೊಬ್ಬ ನಾಯಕ ಮಂತ್ರಿಯಾಗಿದ್ದು, ಕಡಲತಡಿಯ ಬಿಜೆಪಿ ಕಾರ್ಯಕರ್ತರಲ್ಲೂ ರಣೋತ್ಸಾಹ ಕಂಡುಬಂದಿದೆ.
ಹಲವು ದಶಕಗಳಿಂದ ಸೋಲಿಲ್ಲದ ಸರದಾರನಂತೆ ಶಾಸಕರಾಗಿ ಆಯ್ಕೆಯಾಗುತ್ತಿರುವ ಸುಳ್ಯದ ಎಸ್.ಅಂಗಾರ ಅವರು ಬುಧವಾರ ಸಚಿವರಾಗಿ ಪ್ರಮಾಣವಚನ ಸ್ವೀಕರಿಸುತ್ತಿದ್ದಂತೆಯೇ ಅವರ ತವರಿನಲ್ಲಿ ಬಿಜೆಪಿ ಕಾರ್ಯಕರ್ತರು ವಿಜಯೋತ್ಸವ ಆಚರಿಸಿ ಸಂಭ್ರಮಿಸಿದ್ದರು. ಸಚಿವರಾದ ನಂತರ ಅಂಗಾರ ಅವರು ಮೊದಲಬಾರಿಗೆ ಶುಕ್ರವಾರ ತವರು ಜಿಲ್ಲೆಗೆ ಆಗಮಿಸಲಿದ್ದು, ಅವರನ್ನು ಸ್ವಾಗತಿಸಲು ಕಾರ್ಯಕರ್ತರು ಸಿದ್ದತೆ ನಡೆಸಿದ್ದಾರೆ.
ಶುಕ್ರವಾರ ಬೆಳಿಗ್ಗೆ 11.30ಕ್ಕೆ ಮಂಗಳೂರು ವಿಮಾನ ನಿಲ್ದಾಣಕ್ಕೆ ಸಚಿವ ಅಂಗಾರ ಅವರು ಆಗಮಿಸಲಿದ್ದು, ಅಲ್ಲಿ ಪಕ್ಷದ ಪ್ರಮುಖರು ಸ್ವಾಗತಿಸಲಿದ್ದಾರೆ.
ಮಧ್ಯಾಹ್ನ 12.00ಕ್ಕೆ ಮಂಗಳೂರು ಕದ್ರಿ ದೇವಾಲಯಕ ಭೆಟಿ ನೀಡಿ ಶ್ರೀ ಮಂಜುನಾಥ ದೇವರ ದರ್ಶನ ಪಡೆಯಲಿದ್ದಾರೆ. ಮಧ್ಯಾಹ್ನ 12.15ಕ್ಕೆ ಮಂಗಳೂರಿನ ಆರೆಸ್ಸೆಸ್ ಕಾರ್ಯಾಲಯ ಸಂಘನಿಕೇತನಕ್ಕೆ ಭೇಟಿ ನೀಡಿ ಸಂಘದ ಪ್ರಮುಖರೊಂದಿಗೆ ಸಮಾಲೋಚನೆ ನಡೆಸಲಿದ್ದಾರೆ.
ಮಧ್ಯಾಹ್ನ 12.30ಕ್ಕೆ ಮಂಗಳೂರು ಜಿಲ್ಲಾ ಬಿಜೆಪಿ ಕಚೇರಿಗೆ ಭೇಟಿ ನೀಡಲಿದ್ದಾರೆ. ಮಧ್ಯಾಹ್ನ 2.30ಕ್ಕೆ ಕಲ್ಲಡ್ಕ ಶ್ರೀರಾಮ ವಿದ್ಯಾ ಕೇಂದ್ರಕ್ಕೆ ಭೇಟಿ ನೀಡುವರು.
ಮಧ್ಯಾಹ್ನ 3 ಗಂಟೆಗೆ ಪುತ್ತೂರು ಮಹಾಲಿಂಗೇಶ್ವರ ದೇವಾಲಯಕ್ಕೆ ತೆರಳಿ ದೇವರ ದರ್ಶನ ಪಡೆಯಲಿದ್ದಾರೆ. ಸಂಜೆ 4 ಗಂಟೆಗೆ ಜಾಲ್ಸೂರು ತಲುಪಲಿದ್ದಾರೆ. ಅಲ್ಲಿಂದ ಸುಳ್ಯ ಕ್ಷೇತ್ರದ ಜನರ ಪರವಾಗಿ ನೂತನ ಸಚಿವರಿಗೆ ಅದ್ಧೂರಿ ಸ್ವಾಗತ ನೀಡಲು ಬಿಜೆಪಿ ಕಾರ್ಯಕರ್ತರು ತಯಾರಿ ನಡೆಸಿದ್ದಾರೆ. ವಾಹನ ಜಾಥಾ ಮೂಲಕ ಸುಳ್ಯ ತಲುಪಲಿದ್ದು, ಸಂಜೆ 4.15ಕ್ಕೆ ಸುಳ್ಯದ ಜ್ಯೋತಿ ವೃತ್ತದಿಂದ ಸಚಿವ ಅಂಗಾರರನ್ನು ತೆರೆದ ವಾಹನದ ಮೂಲಕ ಮೆರವಣಿಗೆ ನಡೆಸಲಾಗುವುದು ಎಂದು ಪಕ್ಷದ ಮುಖಂಡರು ತಿಳಿಸಿದ್ದಾರೆ.
ಸಂಜೆ 4.30 ಸುಳ್ಯ ಶ್ರೀ ಚೆನ್ನಕೇಶವ ದೇವರ ದರ್ಶನ ಪಡೆದ, ನಂತರ 5 ಗಂಟೆಗೆ ಸುಳ್ಯ ಬಿಜೆಪಿ ಕಚೇರಿಗೆ ಭೇಟಿ ನೀಡಲಿದ್ದಾರೆ ಎಂದು ಪಕ್ಷದ ಮುಖಂಡರು ವಿವರ ಒದಗಿಸಿದ್ದಾರೆ.