ಬೆಂಗಳೂರು: ಕೋವಿಡ್ ಸಂಕಟ ಕಾಲದಲ್ಲಿ ಕಾಂಗ್ರೆಸ್ ನಾಯಕರ ವರ್ತನೆ ನಾಟಕೀಯವಾಗಿದೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ವ್ಯಂಗ್ಯವಾಡಿದ್ದಾರೆ. ಒಂದೆಡೆ ಸರ್ಕಾರವನ್ನು ಟೀಕಿಸುತ್ತಾ, ಇನ್ನೊಂದೆಡೆ ಜನರೆದುರು ಕಾಂಗ್ರೆಸ್ ನಾಯಕರು ಸೇವೆಯ ನಾಟಕವಾಡುತ್ತಿದ್ದಾರೆ ಎಂದು ರವಿ ಕೈ ನಾಯಕರ ಬಗ್ಗೆ ಗೇಲಿ ಮಾಡಿದ್ದಾರೆ.
ಈ ಕುರಿತಂತೆ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಹಾಕಿರುವ ಸಿ.ಟಿ.ರವಿ, “ಮನೆಗೆ ಮಗನೂ ಆಗಲಿಲ್ಲ ಸ್ಮಶಾನಕ್ಕೆ ಹೆಣವೂ ಆಗಲಿಲ್ಲ” ಎನ್ನುವಂತಹ ಒಂದು ರಾಜಕೀಯ ಪಕ್ಷ ನಮ್ಮ ದೇಶದಲ್ಲಿ ಇದ್ದರೆ ಅದು Indian National Congress . ಜನ ಕಾಂಗ್ರೆಸ್ ಪಕ್ಷವನ್ನು ಸೋಲಿಸಿ ಮೂಲೆಗುಂಪು ಮಾಡಿದ್ದರೂ ಅವರಿಗಿನ್ನು ಬುದ್ಧಿ ಬಂದಿಲ್ಲ. ಕಾಂಗ್ರೆಸ್ ಭಾರತ ದೇಶಕ್ಕೆ, ದೇಶದ ಜನರಿಗೆ ದೇಶ ವಿದೇಶದಲ್ಲಿ ಅಪಪ್ರಚಾರ ಮಾಡಲು ತಯಾರಿಸಿದ ಟೂಲ್ ಕಿಟ್ ಇಲ್ಲಿದೆ ನೋಡಿ. ತನ್ನ ಸ್ವ ಸಾಮರ್ಥ್ಯದಿಂದ ಏನನ್ನೂ ಮಾಡಲಾಗದ ಈ ಪಕ್ಷ ದೇಶ ವಿದೇಶಗಳಲ್ಲಿ ಹೆಚ್ಚುತ್ತಿರುವ ಭಾರತದ ಲೋಕಪ್ರಿಯತೆ ಹಾಗೂ ಶಕ್ತಿಯನ್ನು ಕುಂದಿಸುವ ನಿಟ್ಟಿನಲ್ಲಿ ಮತ್ತು ನರೇಂದ್ರ ಮೋದಿ ಹಾಗೂ ಬಿಜೆಪಿಯ ಜನಪ್ರಿಯತೆಗೆ ಕುಂದು ತರಲು ಹೇಗೆ ವ್ಯವಸ್ಥಿತವಾಗಿ ಅಪಪ್ರಚಾರ ಮಾಡುತ್ತಿದ್ದಾರೆ ಎಂಬುದನ್ನು ನಾವೆಲ್ಲರೂ ಗಮನಿಸಬೇಕು ಎಂದು ಹೇಳಿದ್ದಾರೆ.
ಲಸಿಕೆ ನಾವೇ ಕೊಡುತ್ತೇವೆ ಎಂಬ ಕಾಂಗ್ರೇಸ್ ರಾಜ್ಯಾಧ್ಯಕ್ಷನ ಹೇಳಿಕೆ, ಅತ್ತೆಯ ಹಣವನ್ನು ಅಳಿಯ ದಾನ ಮಾಡಿದ ಅನ್ನುವ ಹಾಗೆ ಸರಕಾರದ ನೂರು ಕೋಟಿ ಹಣವನ್ನು ಸರಕಾರಕ್ಕೆ ಕೊಡುತ್ತೇವೆ ಎಂಬ ಸಿದ್ದರಾಮಯ್ಯ ಅವರ ಹಗಲು ನಾಟಕ, ಬೆಡ್ ಗಳನ್ನು ಬ್ಲಾಕ್ ಮಾಡಿ ತಮ್ಮ ಕಾಲು ಹಿಡಿದವರಿಗೆ ನೀಡುವ ಯೋಜನೆಗಳು, ದೆಹಲಿಯಲ್ಲಿ ಶ್ರೀನಿವಾಸನೆಂಬ ಯೂತ್ ಕಾಂಗ್ರೆಸ್ ಅಧ್ಯಕ್ಷ ಆಕ್ಸಿಜನ್ ಸಿಲಿಂಡರ್ ಹಿಡಿದು ಸುತ್ತಾಡಿದ್ದು, ರಾಜ್ಯ ಯೂತ್ ಕಾಂಗ್ರೆಸ್ ಅಧ್ಯಕ್ಷನ ನೇತ್ರತ್ವದಲ್ಲಿ ಸ್ಟಿರಾಯ್ದ್ ಮಾತ್ರೆಗಳನ್ನು ಕೊರೊನ ಕಿಟ್ ಎಂದು ಹಂಚಿದ್ದು, ವಿಧಾನ ಸೌಧದ ಮುಂದೆ ನಲಪಾಡ್ಡ್ ಎಂಬ ಯೂತ್ ಕಾಂಗ್ರೇಸ್ ನಾಯಕನೊಬ್ಬ ಆಂಬ್ಯುಲೆನ್ಸ್ ಸ್ಟಂಟ್ ಮಾಡಿದ್ದು ಇವೆಲ್ಲವೂ ಈ ಟೂಲ್ ಕಿಟ್ ಎಂಬ ಮಹಾ ನಾಟಕದ ಭಾಗವೇ ಹೊರತಾಗಿ ಬೇರೆ ಏನೂ ಅಲ್ಲ ಎಂದವರು ವಿಶ್ಲೇಷಿಸಿದ್ದಾರೆ.
ಮಧ್ಯಪ್ರಾಚ್ಯದಲ್ಲೊಂದು ಇಸ್ರೇಲ್ ಎನ್ನುವ ಪುಟ್ಟ ರಾಷ್ಟ್ರವಿದೆ, ಆ ರಾಷ್ಟ್ರದ ವಿರೋಧ ಪಕ್ಷ ತನ್ನ ರಾಷ್ಟ್ರಕ್ಕಾಗಿ, ತನ್ನ ರಾಷ್ಟ್ರದ ಮಾನ, ಸಮ್ಮಾನದ ರಕ್ಷಣೆಗಾಗಿ ಸರಕಾರದ ಜೊತೆ ನಿಂತು ಕೆಲಸ ಮಾಡುವುದನ್ನು ನೋಡಿದಾಗ ಈ ಮೇಲೆ ಹೇಳಿದ ಮಾತು ನಿಜ ಎನ್ನಿಸುತ್ತದೆ ಎಂದು ವ್ಯಾಖ್ಯಾನಿಸಿರುವ ಸಿ.ಟಿ.ರವಿ, ಕಾಂಗ್ರೆಸ್ ಪಕ್ಷ “ಮನೆಗೆ ಮಗನೂ ಆಗಲಿಲ್ಲ, ಸ್ಮಶಾನಕ್ಕೆ ಹೆಣವೂ ಆಗಲಿಲ್ಲ” ಎಂದು ಕಟುವಾಗಿ ಟೀಕಿಸಿದ್ದಾರೆ.